ಮೈಸೂರು: ಮೈಸೂರಿನಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣ ಭೇದಿಸಿರುವಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಒಂದು ಪ್ರಕರಣದಲ್ಲಿ ಆರೋಪಿಯನ್ನು ಮೈಸೂರಿನ ಹನುಮಂತ ಸರ್ಕಲ್ ಬಳಿ ಬಂಧಿಸಿ ವಿಚಾರಣೆ ಮಾಡಲಾಯಿತು.
ಆತನ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಿದಾಗ ಕೆಲವು ಕಡೆ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿತು. ಆರೋಪಿಯು ನಜರ್ಬಾದ್, ಆಲನಹಳ್ಳಿ ಹಾಗೂ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಯಿತು ಎಂದು ತಿಳಿಸಿದರು. ಮೂರು ಕಡೆ ಕಳ್ಳತನ ಮಾಡಿದ್ದ ಆರೋಪಿಯಿಂದ 23 ಲಕ್ಷ ರೂಪಾಯಿ ಮೌಲ್ಯದ 402 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ರಾಜೀವ್ನಗರದ ಸೂರ್ಯ ನಾರಾಯಣಸ್ವಾಮಿ ದೇವಸ್ಥಾನದ ಬಳಿ ಒಬ್ಬ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಮೈಸೂರಿನ ವಿದ್ಯಾರಣ್ಯಪುರಂ, ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಕಳ್ಳತನ ಮಾಡಿರುವ ಮಾಹಿತಿ ದೊರಕಿತು.
ಆರೋಪಿಯಿಂದ 12 ಲಕ್ಷ ರೂಪಾಯಿ ಮೌಲ್ಯದ 20 ಗ್ರಾಂ ಚಿನ್ನಾಭರಣ, 29 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಮೈಸೂರು ನಗರದಲ್ಲಿ ಸರಗಳ್ಳತನ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. 2022 ರಲ್ಲಿ 72 ಸರಗಳ್ಳತನ ಪ್ರಕರಣ ನಡೆದಿತ್ತು. ಈ ವರ್ಷ ಜನವರಿಯಿಂದ ಇಲ್ಲಿ ತನಕ 12 ಸರಗಳ್ಳತನ ಪ್ರಕರಣಗಳು ನಡೆದಿದೆ ಎಂದು ಅಂಕಿ ಅಂಶಗಳ ವಿವರ ಇದೇ ಸಂದರ್ಭದಲ್ಲಿ ಆಯುಕ್ತರು ನೀಡಿದರು.