ಬೆಂಗಳೂರು: ದಿನಾಂಕ 02.05.2026 ರಿಂದ 07/02/2026 ರವರಿಗೆ ಲಕ್ಷದ್ವೀಪದ ಅಗಟ್ಟಿಯ ದ್ವಿಪದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ, ಹಿರಿಯೂರು (ರಿ). ಇವರಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಡಲ ತೀರದಲ್ಲಿ ನಡೆದವು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಜಣ್ಣ ಎಂ ಹಿರಿಯ ತಾಂತ್ರಿಕ ಅಧಿಕಾರಿಗಳು, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆ, ಬೆಂಗಳೂರು.ರವರು ಈ ತರಹದ ಕನ್ನಡ ಕಾರ್ಯಕ್ರಮಗಳನ್ನು ಬೇರೆ ಬೇರೆ ಕಡೆಯಲ್ಲಿ ಮಾಡುವುದರಿಂದ ಕನ್ನಡವನ್ನು ಪಸರಿಸಿದಂತಾಗುತ್ತದೆ ಹಾಗೂ ಭಾಷೆಯ ಬಗೆಗಿನ ಒಲವು ವಿಸ್ತಾರವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ವಿಶ್ವ ಕನ್ನಡ ಕಲಾ ಸಂಸ್ಥೆಯು ಕಡಲತಡಿಯಲ್ಲಿ ಮಾಡಿರುವುದರಿಂದ ಹೆಚ್ಚು ಜನರಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತವೆ. ವಿಶ್ವ ಕನ್ನಡ ಕಲಾ ಸಂಸ್ಥೆಯ ಸ್ಥಾಪಕರು ಹಾಗೂ ಅಧ್ಯಕ್ಷರು ಆದಂತಹ ಈ.ರವೀಶ ಅಕ್ಕರ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರ “ಸ್ನೇಹ ನಮ್ಮ ಬಹುದೊಡ್ಡ ಆಸ್ತಿ” ಎಂದರು. ಕಾರ್ಯಕ್ರಮದ ಅತಿಥಿಗಳಾಗಿದ್ದ ತ್ಯಾಗ ರಾಜುರವರು ರೈತರ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಲಕ್ಷ ದೀಪಕ್ಕೆ ಬಂದ ಪ್ರವಾಸಿಗರು ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು.ಹಿರಿಯೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ಕನ್ನಡ ಸಂಭ್ರಮೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಲ್ಲದೆ ಈ ಒಂದು ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಜಾನಪದ ಕೋಲಾಟ ಹಾಗೂ ವಚನ ಗಾಯನ ಮತ್ತು ನೃತ್ಯ,ಕನ್ನಡ ಪರ ಹಾಡುಗಳ ಗಾಯನದ ಮೂಲಕ ಕನ್ನಡ ಕಲರವ ಮೊಳಗಿತು ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಕರ್ಷಿತರಾಗಿ ಭಾರತ ದೇಶದ ವಿವಿದ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರು ಕನ್ನಡ ಗೀತೆಗಳಿಗೆ ಮನಸೋತು ತಾವು ಸಹ ಹೆಜ್ಜೆಗೂಡಿಸಿ ಸಂಭ್ರಮಿಸಿದರು. ಹಾಗೂ ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ರವೀಶ ರವರು ಅವರಿಗೂ ಸಹ ಕನ್ನಡ ಬಾವುಟಗಳನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು. ಬಿ ಟಿ ಸವಿತಾ ಮತ್ತು ಆರ್ ಗಗನ ಚಂದ್ರ ಕಾರ್ಯಕ್ರಮಕ್ಕೆ ಸಹಕರಿಸಿದರು ವಿಜಯಕಲಾ ರವರು ಪ್ರಾರ್ಥಿಸಿದರು. ಜೆ ಮಂಜುನಾಥ್ ರವರು ಎಲ್ಲರನ್ನು ಸ್ವಾಗತಿಸಿದರು, ನಂದೀಶ್ವರ ರವರು ವಂದನಾರ್ಪಣೆಯನ್ನು ನೆರವೇರಿಸಿದರು.



