ರಾಮನಗರ: ಇಕ್ಬಾಲ್ ಹುಸೇನ್ ರವರು ಶಾಸಕರಾದ ಮೇಲೆ ರಾಮನಗರ ಕ್ಷೇತ್ರದಲ್ಲಿ ಒಂದೂವರೆ ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಅಭಿವೃದ್ಧಿ ಮತ್ತು ಅವರ ಜನಪ್ರಿಯತೆ ಸಹಿಸದ ಜೆಡಿಎಸ್ ಮುಖಂಡರು ಧಾರ್ಮಿಕ ವಿಚಾರದಲ್ಲಿ ರಾಜಕೀಯ ಬೆರೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹುಲಿಕೆರೆ – ಗುನ್ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ವಾಗ್ದಾಳಿ ನಡೆಸಿದರು.
ಶ್ರೀ ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರದಲ್ಲಿ 20-25 ವರ್ಷಗಳಿಂದ ಆಗದಿರುವ ಕೆಲಸಗಳಿಗೂ ಚಾಲನೆ ಸಿಕ್ಕಿವೆ. ವಾರದಲ್ಲಿ 5 ದಿನ ಕ್ಷೇತ್ರದಲ್ಲಿರುತ್ತಾರೆ. ಶಾಸಕರ ಕಚೇರಿಯಲ್ಲಿ ಪ್ರತಿ ದಿನ ನೂರಾರು ಜನರನ್ನು ಭೇಟಿ ಮಾಡಿ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಜೆಡಿಎಸ್ ಮುಖಂಡರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.
ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಹಿಂದೂ ಪಂಚಾAಗ ಪ್ರಕಾರ ಮಧ್ಯಾಹ್ನ 12.45 ರಿಂದ 1.30ರವರೆಗೆ ರಥೋತ್ಸವಕ್ಕೆ ಮುಹೂರ್ತ ನಿಗದಿಯಾಗಿತ್ತು. ಈ ವಿಚಾರ ತಿಳಿದಿದ್ದ ಶಾಸಕರು ತಾವು ಬರುವುದು ತಡವಾಗಬಹುದು. ನಿಗದಿತ ಸಮಯಕ್ಕೆ ರಥೋತ್ಸವ ನೆರವೇರಿಸುವಂತೆ ಹೇಳಿದ್ದರು. 10 ನಿಮಿಷ ತಡವಾದರು ಸರಿ ಶಾಸಕರು ಬರಲೆಂದು ಸ್ಥಳೀಯರು ಒತ್ತಾಯಿಸಿದ್ದರು. 10 ರಿಂದ 15 ನಿಮಿಷ ತಡವಾಗಿ ಆಗಮಿಸಿದ ಶಾಸಕರು ಆ ದಿನವೇ ತಡವಾಗಿದ್ದಕ್ಕೆ ವಿಷಾಧ ವ್ಯಕ್ತಪಡಿಸಿದ್ದರು. ಆದರೆ, ಜೆಡಿಎಸ್ ನವರು ಇದನ್ನೇ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಇಕ್ಬಾಲ್ ಹುಸೇನ್ ಶೂಸು ಧರಿಸಿಕೊಂಡೇ ಶುಭ ಮುಹೂರ್ತ ಮೀರಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದ್ದೆ ವಿಘ್ನಗಳು ಸಂಭವಿಸಲು ಕಾರಣವೆಂದು ಜೆಡಿಎಸ್ ನವರು ಆರೋಪಿಸಿದ್ದಾರೆ. ಶಾಸಕರು ಶೂ ಕಳಚಿ ರಥ ಎಳೆದಿರುವುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್ ಶಾಸಕರಿದ್ದ ಅವಧಿಯಲ್ಲಿಯೂ ಆಕಸ್ಮಿಕ ಘಟನೆಗಳು ಸಂಭವಿಸಿವೆ. ಅದಕ್ಕೆಲ್ಲ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.
ಕೈಲಾಂಚ ಹೋಬಳಿ ಕೆರೆಗಳನ್ನು ತುಂಬಿಸಲು 120 ಕೋಟಿ ರು.ಗಳ ಯೋಜನೆ ರೂಪಿಸಿದ್ದು, ಆ ಕಾಮಗಾರಿ ಪ್ರಗತಿಯಲ್ಲಿದೆ. ಶಾಸಕರನ್ನು ನೋಡಲು ಸಾವಿರಾರು ರುಪಾಯಿ ಖರ್ಚು ಮಾಡಬೇಕಿತ್ತು. ಆದರೆ, ಇಕ್ಬಾಲ್ ಹುಸೇನ್ ರವರು ಶಾಸಕರಾದ ಮೇಲೆ ಶಾಸಕರ ಕಚೇರಿಯಲ್ಲಿಯೇ ಪ್ರತಿ ದಿನ ನೂರಾರು ಜನರನ್ನು ಭೇಟಿ ಮಾಡಿ ಕಷ್ಟ ಸುಖ ವಿಚಾರಿಸುತ್ತಿದ್ದಾರೆ. ಮದುವೆ, ಆರೋಗ್ಯ ಸಮಸ್ಯೆ, ದೇವಸ್ಥಾನ, ನಾಟಕ ಇನ್ನು ಅನೇಕ ವಿಷಯಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ರಥೋತ್ಸವ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರುದ್ರ ಕೋಟಹಳ್ಳಿ ಅವರನ್ನು ಶಾಸಕರು ಭೇಟಿಯಾಗಿ ಸಾಂತ್ವನ ಹೇಳಿ ಧನ ಸಹಾಯ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಜೆಡಿಎಸ್ ಮುಖಂಡರು ಗಾಯಾಳುವಿನ ಚಿಕಿತ್ಸಾ ವೆಚ್ಚದಲ್ಲಿ ಸಂಸದರಿAದ ರಿಯಾಯಿತಿ ಕೊಡಿಸಲಿ ಎಂದು ನಾಗೇಂದ್ರ ತಿಳಿಸಿದರು.
ಯುವ ಕಾಂಗ್ರೆಸ್ ಮುಖಂಡ ಎನ್.ಹರ್ಷ ನಂದನ್ ಮಾತನಾಡಿ, ಇಕ್ಬಾಲ್ ಹುಸೇನ್ ರವರು ಜಿಪಂ ಅಧ್ಯಕ್ಷರಾದ ದಿನದಿಂದ ಇಲ್ಲಿವರೆಗೆ ಎಲ್ಲಾ ಜಾತಿ ಧರ್ಮಗಳ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ. ಇಲ್ಲಿವರೆಗೆ ಸುಮಾರು 300 ದೇವಸ್ಥಾನಗಳನ್ನು ಕಟ್ಟಲು ಸಹಾಯ ಮಾಡಿದ್ದಾರೆ. ಶ್ರೀ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಹೀಗಿರುವಾಗ ಅವರನ್ನು ಹಿಂದೂ ವಿರೋಧಿ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎನ್.ರಮೇಶ್, ಗ್ರಾಪಂ ಸದಸ್ಯ ಮಹದೇವಯ್ಯ, ಮುಖಂಡರಾದ ಕುಮಾರ್, ಕುರುಬಳ್ಳಿ ದೊಡ್ಡಿ ಪ್ರಕಾಶ್, ಕೆ.ಜಿ.ಹೊಸಳ್ಳಿ ಅರುಣ್, ನೆಲಮನೆ ಸಿದ್ದರಾಜು, ಕೋಟಳ್ಳಿ ಲಿಂಗರಾಜು, ದೇವರದೊಡ್ಡಿ ಚಂದ್ರನಾಯ್ಕ, ಸಂದೀಪ್, ಚೇತನ್, ಲೋಕೇಶ್, ಕಿರಣ್ ಇದ್ದರು.
ಧಾರ್ಮಿಕ ವಿಚಾರದಲ್ಲಿ ಜೆಡಿಎಸ್ ಮುಖಂಡರಿಂದ ರಾಜಕೀಯ: ನಾಗೇಂದ್ರ



