ನವದೆಹಲಿ: ಚೆಕ್ ರಿಪಬ್ಲಿಕ್ ದೇಶದ ಪ್ರೇಗ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ ಭೀಕರ ಶೂಟೌಟ್ ಘಟನೆ ಸಂಭವಿಸಿದೆ. ಚಾಲ್ರ್ಸ್ ಯೂನಿವರ್ಸಿಟಿಯಲ್ಲಿ ಡೇವಿಡ್ ಕೋಝಕ್ ಎಂಬ ವಿದ್ಯಾರ್ಥಿ ತನ್ನ ಸಹಪಾಠಿಗಳನ್ನೇ ಗುಂಡಿಟ್ಟು ಕೊಂದಿದ್ದಾನೆ. ಈ ಶೂಟೌಟ್ನಲ್ಲಿ 14 ಮಂದಿ ಬಲಿಯಾಗಿದ್ದಾರೆ.
20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. 24 ವರ್ಷದ ಆರೋಪಿ ಡೇವಿಡ್ ಕೋಝಕ್ ಕೂಡ ಸತ್ತಿದ್ದಾನೆ. ಈ ನರಮೇಧಕ್ಕೆ ಮುನ್ನ ಡೇವಿಡ್ ತನ್ನ ಮನೆಯಲ್ಲಿ ಅಪ್ಪನನ್ನೇ ಕೊಂದು ಹೋಗಿದ್ದ ಘಟನೆಯೂ ಬೆಳಕಿಗೆ ಬಂದಿದೆ. ಒಟ್ಟಾರೆ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಯೂನಿವರ್ಸಿಟಿಯಲ್ಲಿ ತನ್ನ ಸಹ-ವಿದ್ಯಾರ್ಥಿಗಳ ಮೇಲೆ ಡೇವಿಡ್ ಕೋಝಕ್ ಯಾಕೆ ಗುಂಡಿನ ದಾಳಿ ಎಸಗಿದ ಎಂದು ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್ ಯಾವುದಾದರೂ ಉಗ್ರ ಸಂಘಟನೆ ಜೊತೆ ಸಂಬಂಧ ಹೊಂದಿರುವ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ.