ಡಾ||.ಎಂ.ಎಸ್.ಮಣಿ
ಕೂಡುತೊರೈನ ಸಂಗಮದಲ್ಲಿ ತಾವು ಬೆರೆತು ಒಂದು ವರ್ಷವಾಗಿದೆ. ತಮ್ಮ ನೆನಪಿನ ಪ್ರವಾಹ ಹೃದಯ ತೀರವನ್ನು ಬೀಸುವ ಪರಿ ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ. ಆದರೂ ನಿನ್ನಗಲಿಕೆಯ ನೋವು ಸದಾ ಕಾಡುತ್ತಲೇ ಇರುತ್ತದೆ. ನಿನ್ನ ಹೆಜ್ಜೆಯ ಗುರುತು ನನ್ನ ಮನದಾಳದಲ್ಲಿ ಹಾಗೆಯೇ ಅಚ್ಚಳಿಯದೆ ಉಳಿದಿದೆ. ತಮ್ಮ ಅನುಪಸ್ಥಿತಿಯ ನೋವು ಅತ್ಯಂತ ತೀವ್ರವಾಗಿ ಕಾಡುತ್ತಿದೆ. ಅಂದಿನ ದುಃಖಕರ ಹೊತ್ತಲ್ಲಿ ನನ್ನ ಪಾಪದ ಭುಜ ಅತ್ಯಂತ ಭಾರವಾದ ಹೊರೆಯನ್ನು ಹೊತ್ತಂತೆ, ಅಗ್ನಿಗೆ ಆಹುತಿ ಕೊಟ್ಟ ಘಳಿಗೆ ಯಾತನೆಯನ್ನುಂಟು ಮಾಡುತ್ತಿದೆ. ಅಮ್ಮ ನಿನ್ನ ಅನುಪಸ್ಥಿತಿ ನನ್ನನ್ನು ಆಳವಾದ ಕಂದಕಕ್ಕೆ ದೂಡಿದೆ. ಇಲ್ಲಿ ಭರಿಸಲಾಗದ ದುಃಖ ವನ್ನಾವರಿಸಿ ಬದುಕಿರುವಷ್ಟು ದಿನವೂ ಇರಿಯುತ್ತಿರುತ್ತದೆ. ನಿಸ್ವಾರ್ಥತೆಯ ಸಾಕಾರ ಮೂರ್ತಿಯಾದ ನೀನು ಮಕ್ಕಳ ಪೋಷಣೆ, ಏಳಿಗೆಯನ್ನೇ ಜೀವನದ ಆದ್ಯತೆ ಮಾಡಿಕೊಂಡಿದ್ದೆ. ನಿನ್ನನ್ನೇ ನೀನು ಮರೆತಿದ್ದೆ. ಹೀಗೆ ನಿನ್ನ ಸುಖ ಸಂತೋಷ ಎಲ್ಲವನ್ನೂ ನಮಗಾಗಿ ತ್ಯಾಗ ಮಾಡಿರುವೆ. ನಿನ್ನ ಪ್ರೀತಿ ಅಚಲವಾದದ್ದು. ಅದಕ್ಕೆ ಸಾಟಿಯೇ ಇಲ್ಲ. ನೀನು ಕೊಡುತ್ತಿದ್ದ ಮಾರ್ಗದರ್ಶನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಅದು ಅಮೂಲ್ಯವಾದದ್ದು. ಆದರೂ, ನೀವಿಲ್ಲದಿರುವುವಿಕೆ ನನ್ನ ಅಸ್ತಿತ್ವದ ಜಂಘಾಬಲವನ್ನೇ ಉಡುಗಿಸಿದೆ. ಯಾವುದೇ ನಿರೀಕ್ಷೆ, ಷರತ್ತು ಇಲ್ಲದ ತಮ್ಮ ಪ್ರೀತಿ, ಕಕ್ಕುಲಾತಿ, ನಿಸ್ವಾರ್ಥ ಹಾಗೂ ಅಚಲವಾದ ಬೆಂಬಲ ಒಂದು ವರ್ಷವಾದರೂ ಮಾಸಿಲ್ಲ. ಬಹುಶಃ ಇದುವೇ ತಾವು ಅಸಾಧಾರಣ ಜೀವ ಎಂಬುದನ್ನು ಸಾರುತ್ತದೆ. ತಾವು ನನ್ನ ಪಾಲಿಗೆ ಕೇವಲ ಅಮ್ಮನಲ್ಲ. ನನ್ನ ಪಾಲಿನ ಹೆಬ್ಬಂಡೆ, ನನ್ನ ಆತ್ಮವಿಶ್ವಾಸ. ನಿಮ್ಮ ವರಬಲ ಹಾಗೂ ದಯೆಗೆ ಸಾಟಿಯೇ ಇಲ್ಲ. ನನಗೆ ಗೊತ್ತು ನಿಮ್ಮ ದಿವ್ಯ ಪ್ರಭೆ ಚಿರಕಾಲ ನಮ್ಮ ಮನೆ ಮನಗಳನ್ನು ಬೆಳಗುತ್ತದೆ. ಅದು ಎಂದಿಗೂ ಆರದ ಜ್ಯೋತಿ. ಇವತ್ತು ನಿಮ್ಮ ಇನಿದನಿ ಇಲ್ಲವಾಗಿದೆ. ನಿಮ್ಮ ಬೆಚ್ಚನೆಯ ಅಪ್ಪುಗೆ, ಮನಕ್ಕೆ ಮುದ ನೀಡುವ ಮುಗುಳ್ನಗೆ ನಾನು ಮರೆಯುವುದಿಲ್ಲ. ನನ್ನನ್ನು ಸಲುಹಲು ತಾವು ಪಡುತ್ತಿದ್ದ ಅವಿರತ ಶ್ರಮದ ಅರಿವಿದೆ. ತಾವು ಎಂದಿಗೂ ತಮ್ಮ ಶ್ರಮಕ್ಕೆ ಮೆಚ್ಚುಗೆಯ ಬಹುಮಾನ ನಿರೀಕ್ಷಿಸಿರಲಿಲ್ಲ. ಇವತ್ತು ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತಿದೆ ಎಂದರೆ ಅದಕ್ಕೆ ತಾವು ಬೀರಿದ ಪ್ರಭಾವವೇ ಕಾರಣ.ಆದರೂ, ನನ್ನಲ್ಲಿ ಪರಕೀಯ ಎಂಬ ಭಾವನೆ ಕಾಡುತ್ತಿದೆ. ಒಂದು ಕಾಲದಲ್ಲಿ ಒಡನಾಡಿಯಾಗಿದ್ದ ಹಸಿವು ಬದಿಗೆ ಸರಿದು ಅಲ್ಲೀಗ “ಅನಾಥ” ಎಂಬುದು ಬಂದು ಕೂತಿದೆ. ಇದನ್ನೇಕೆ ಹೇಳಬೇಕಾಯಿತೆಂದರೆ ಅಮ್ಮ ನನ್ನ ಬದುಕಿನುದಕ್ಕೂ ಎಷ್ಟರ ಮಟ್ಟಿಗೆ ಸಾಗಿ ಬಂದಿರುವರೆAದು ಯಾರಾದರೂ ಕೇಳಿದರೆ ಒಂದರೆಕ್ಷಣ ಉತ್ತರಿಸಲು ತಡವರಿಸುತ್ತೇನೆ. ಆದರೀಗ ಅಮ್ಮನ ಅನುಪಸ್ಥಿತಿಯಲ್ಲಿ ಅವರು ಎಷ್ಟರಮಟ್ಟಿಗೆ ನನ್ನ ಬದುಕಿನಲ್ಲಿ ಇದ್ದರೆಂಬುದು ಅರಿವಾಗುತ್ತಿದೆ. ಅವರ ನೆರಳು ನನ್ನ ಬದುಕನ್ನೇ ಬಾಚಿ ತಬ್ಬಿತ್ತು. ಆಗಾಗ ನನ್ನ ಮೊಬೈಲ್ ನಲ್ಲಿರುವ ಫೋಟೋವನ್ನು ದಿಟ್ಟಿಸಿ ನೋಡುತ್ತಿರುತ್ತೇನೆ. ಅದನ್ನು ತೆಗೆದು ವರ್ಷಗಳೇ ಉರಳಿವೆ. ಹೊಳೆಯುವ ಮುಖದೊಂದಿಗೆ ಗಂಭೀರ ಮುಖಭಾವ ಹೋತ್ತಿರುವ ಅಮ್ಮನ ಪಟದ ಮುಂದೆ ದೀಪ ಹಚ್ಚಿ ನನ್ನನ್ನೇಕೆ ಹಡದೆ ತಾಯಿ ಎಂದು ಪ್ರಶ್ನಿಸುತ್ತಿರುತ್ತೇನೆ. ಆ ಹೊತ್ತಿನಲ್ಲಿ ಏನನ್ನೂ ಬಯಸುತ್ತೇನೆ ಎಂದು ನನಗೆ ತಿಳಿದಿರುವುದಿಲ್ಲ. ಅಂದಾಜಿಸಲಾಗದಷ್ಟು ದೂರ ಇರುವ ನಮ್ಮಿಬ್ಬರ ಅಂತರದಿಂದ ಹೃದಯದಲ್ಲಿ ಉಂಟಾಗಿರುವ ರಂಧ್ರ ಒಂದನ್ನು ಆಕೆಯ ಶೇಷವೊಂದು ತುಂಬಲು ಬಂದAತೆ ಅನಿಸುತ್ತಿಲ್ಲ. ಅಲ್ಲದೆ ನಾವಿಬ್ಬರೂ ಮನೆಯಲ್ಲಿಯೇ ಕೂತು ಮಾತನಾಡಿದಂತೆ ಭಾಸವಾಗುತ್ತಿದೆ. ಸದ್ಯ ಪಟದಲ್ಲಿ ಕಾಣಬರುವ ಅವರ ಗಂಭೀರ ಮುಖ ಮುದ್ರೆ ಮಾತುಗಳಿಗೆ ವಿರಾಮ ಹಾಕಿದಂತಾಗಿದೆ. ಪ್ರತಿದಿನ ಸಂಜೆಯ ಹೊತ್ತಿಗೆ ಕರೆ ಮಾಡಿ ಮನೆ ತಲುಪಿದೆಯಾ ಎಂದು ಕೇಳುತ್ತಿದ್ದರು. ಅಂದಿನ ಸಂಜೆಗಳು ಇಂದಿಲ್ಲ. ಅಮ್ಮನಿದ್ದಾಗ ಉತ್ತರಿಸುವಾಗ ಧ್ವನಿಯಲ್ಲಿ ಸ್ವಲ್ಪ ಕದಿಲಿಕೆ ಇದ್ದರೂ, ಗುರುತಿಸಿ ಸಣ್ಣ ವಿವರವನ್ನು ಬಿಡದೇ ಕೇಳುತ್ತಿದ್ದರು.
– ಮುಂದುವರೆಯುವುದು…
ಅಮ್ಮನಿಲ್ಲದ ಒಂದು ವರ್ಷ…!



