ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರು ತಮ್ಮ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಆಪ್ತ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ.ಶರ್ಮಿಳಾ ಮಾಂಡ್ರೆ 2007ರಲ್ಲಿ ಬಿಡುಗಡೆಯಾದ `ಸಜನಿ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆನಂತರ `ಕೃಷ್ಣ’, `ನವಗ್ರಹ’, `ಸ್ವಯಂವರ’, `ಆಕೆ’, `ಗಾಳಿಪಟ 2′, `ಪೌಡರ್’ ಹಾಗೂ ಇತ್ತೀಚಿನ `ಡೆವಿಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ `ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ “ಪ್ಯಾಶನ್ ಸ್ಟುಡಿಯೋಸ್” ನ ಸಂಸ್ಥಾಪಕರು ಹಾಗೂ ನಿರ್ಮಾಪಕರಾದ ಸುಧನ್ ಸುಂದರಂ ಅವರು ಚಿತ್ರರಂಗಕ್ಕೆ ಹಲವು ಗುಣಮಟ್ಟದ ಸಿನಿಮಾಗಳನ್ನು ನೀಡಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿಬಂದ `ಕಪ್ಪಲ್’, `ನಿಬುಣನ್’, `ಸೀತಕಾತಿ’, `ಅನಬೆಲ್ ಸೇತುಪತಿ’ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ `ಪಾರ್ಕಿಂಗ್’ ಮತ್ತು ವಿಜಯ್ ಸೇತುಪತಿ ಅಭಿನಯದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ `ಮಹಾರಾಜ’ ಸೇರಿದಂತೆ ಹಲವು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳನ್ನು ಇವರು ನಿರ್ಮಿಸಿದ್ದಾರೆ. “ಇದು ನಮ್ಮ ಜೀವನದ ಅತ್ಯಂತ ಸುಂದರ ಹಾಗೂ ವಿಶೇಷವಾದ ಅಧ್ಯಾಯ. ನಮ್ಮ ಮೇಲೆ ಪ್ರೀತಿ ಮತ್ತು ಆಶೀರ್ವಾದ ಮಳೆಗರೆದ ಎಲ್ಲರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮ ಈ ಹೊಸ ಜೀವನದ ಪಯಣವನ್ನು ಎದುರುನೋಡುತ್ತಿದ್ದೇವೆ.” ಎಂದು ಶರ್ಮಿಳಾ ಮಾಂಡ್ರೆ ಹೇಳಿದರೆ, “ನಮ್ಮ ಬೆಂಬಲಕ್ಕೆ ನಿಂತಿರುವ ನಮ್ಮ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳ ಪ್ರೀತಿ ಮತ್ತು ಸಹಕಾರಕ್ಕೆ ನಾವು ಎಂದಿಗೂ ಚಿರಋಣಿ.” ಎಂಬುದು ಸುಧನ್ ಸುಂದರA ಅವರ ಮಾತು.



