ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾ. ಬೆಟ್ಟದಪುರ ಹೋಬಳಿಯ ಭುವನಹಳ್ಳಿ ಗ್ರಾಮದಲ್ಲಿ ಮೂರೂರು ಜಾತ್ರೆ ಉತ್ಸವ ಸಡಗರದಿಂದ ನಡೆಯಿತು. ನನ್ನ ಅಕ್ಕ ಕಾಂತಾಮಣಿಯ ಇಬ್ಬರು ಹೆಣ್ಣು ಮಕ್ಕಳಾದ ಗೀತಾ, ಶ್ವೇತಾರನ್ನು ಆ ಊರಿಗೆ ಕೊಟ್ಟಿದೆ. ಗೀತಾಚಂದ್ರು ಜಾತ್ರೆಗೆ ಕರೆಯಲಾಗಿ ನಾನು ನನ್ನ ಪತ್ನಿ ಮತ್ತು ಅವಳ ಇಬ್ಬರು ಅಕ್ಕಂದಿರು ಮೂರೂರಮ್ಮ ಜಾತ್ರೆಗೆ ಹೊರಟೆವು. ಕುಶಾಲನಗರದಿಂದ ಬೆಳಿಗ್ಗೆ ಪಿರಿಯಾಪಟ್ಟಣಕ್ಕೆ ಬಂದು ಇಳಿಯುವಷ್ಟರಲ್ಲಿ ಭುವನಹಳ್ಳಿ ಬಸ್ಸು ಸಿದ್ಧವಾಗಿತ್ತು. ಅದು ಬೆಕ್ರೆ ಮಾರ್ಗ ಬೆಟ್ಟದಪುರಕ್ಕೆ ಹೋಗುತ್ತದೆ. ನಾವು ಭುವನಹಳ್ಳಿ ಶಾಲೆ ಸ್ಟಾಫ್ನಲ್ಲಿ ಇಳಿದೆವು. ಅಲ್ಲಿಯೇ ಜಾತ್ರೆ ಕೆಂಡೋತ್ಸವ ನಡೆಯುವುದು. ತೇರು ಇಲ್ಲಿಗೆ ಬರುವುದು ನಾಲ್ಕರ ಹೊತ್ತಿಗೆ. ಅದಾಗಲೇ ಐಸ್ಕ್ರಿಂ ಬಳೆ ಪುರಿಕಾರ ಅಂಗಡಿಗಳು ಜನರ ಆಗಮನಕ್ಕೆ ಕಾಯ್ದಿದ್ದವು. ಮೂರೂರಮ್ಮ ಹೆಸರು ಏಕೆ ಎಂಬ ಕುತೂಹಲ ನನಗೆ. ಗ್ರಾಮದ ಶ್ವೇತ ಯಜಮಾನರು ಗಣೇಶ್ ಹೇಳಿದರು ಮೂವತ್ತು ವರ್ಷಗಳ ಹಿಂದೆ ಭುವನಹಳ್ಳಿ, ಜೋಗನಹಳ್ಳಿ ಮತ್ತು ಬೆಕ್ರೆ ಗ್ರಾಮದವರು ಒಟ್ಟಾಗಿ ಸೇರಿ ಈ ಜಾತ್ರೆ ನಡೆಯುತ್ತಿತ್ತು. ಅದಕ್ಕೆ ದೇವತೆಗೆ ಮೂರೂರಮ್ಮ ಎಂಬ ಹೆಸರು ಬಂದಿದೆ. ಆದರೆ ಈಗ ಮೂರು ಊರಿನವರರು ಪ್ರತ್ಯೇಕವಾಗಿ ಜಾತ್ರೆಆಚರಿಸುತ್ತಿದ್ದಾರೆ. ಶುಕ್ರವಾರ ನಡೆದಿದ್ದು ಭುವನಹಳ್ಳಿಯ ಜಾತ್ರೆ ಮಾತ್ರ. ಬರುವ ಶುಕ್ರವಾರ ಜೋಗನಹಳ್ಳಿಯವರದು. ರಥೋತ್ಸವ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ಸಡಗರ ಸಂಭ್ರಮ. ನೆಂಟರಿಷ್ಟರನ್ನು ಆಹ್ವಾನಿಸಿ ಜನ ಕಾರು ಬೈಕುಗಳಲ್ಲಿ ಆಗಮಿಸುತ್ತಿದ್ದರು. ನಾವು 1 ಗಂಟೆ ಹೊತ್ತಿಗೆ ದೇವಸ್ಥಾನ ಬಳಿಗೆ ಹೋದೆವು. ಅದು ಲಕ್ಷ್ಮೀದೇವಿ ದೇವಸ್ಥಾನ. ಮೆರೆಯಿಸಿಕೊಳ್ಳುವ ದೇವತೆ ಮೂರೂರಮ್ಮ. ನಾವು ಹೋದ ಕೆಲವೇ ಹೊತ್ತಿನಲ್ಲಿ ಮೂರೂರಮ್ಮ ಉತ್ಸವಮೂರ್ತಿಯನ್ನು ದೇಗುಲದಿಂದ ಹೊರತಂದರು. ದೇವಸ್ಥಾನ ಪ್ರವೇಶದ್ವಾರದಲ್ಲಿ ದೇವತೆಗೆ ದೀವಟಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಸ್ಥಾನ ಸನಿಹದಲ್ಲೇ ನಿಂತಿದ್ದ ರಥದ ಸುತ್ತಾ ಉತ್ಸವಮೂರ್ತಿಯ ಪ್ರದಕ್ಷಿಣೆ ಮಾಡಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಗ್ರಾಮದ ಹೆಣ್ಣುಮಕ್ಕಳು ರಾಗಿ ಸಾವಿಗೆ, ಅಕ್ಕಿ ಸಾವಿಗೆ ಅನ್ನ ಸಾರು ಸಿಹಿ ಅಡಿಗೆಯನ್ನು ಕುಕ್ಕೆಯಲ್ಲಿ ಬಿಳಿಬಟ್ಟೆ ಮುಚ್ಚಿ ಹೊತ್ತು ತಂದರು. ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆಲ್ಲಾ ಬೆಕ್ರೆಯ ದೊಡ್ಡ ಕೆರೆಯಲ್ಲಿ ಪೂಜೆ ಸಲ್ಲಿಸಿ ತೇರಿಗೆ ಕಳಶ ಪ್ರತಿಷ್ಠಾಪಿಸಿ ಹೂವು ಧ್ವಜ ಬಟ್ಟೆಗಳಿಂದ ಅಲಂಕರಿದ್ದರು. ಆ ವರ್ಷ ಮದುವೆಯಾದ ಊರಿನ ಮೂವರು ಹೆಣ್ಣುಮಕ್ಕಳು ಚೌರಿಗೆ ನೀರು ತಂದು ತೇರಿನ ಚಕ್ರಗಳನ್ನು ತೊಳೆದು ಪೂಜಿಸುವುದು ವಾಡಿಕೆ. ತೇರು ಎಳೆಯಲು ಹುಡುಗರು ಉತ್ಸುಕರಾಗಿದ್ದರು. ತೇರನ್ನು ಅಡ್ಡಾದಿಡ್ಡಿ ಎಳೆದು ಮನೆಗಳ ಮೇಲೇ ಹರಿಯದಂತೆ ತಡೆಯಲು ಗೊದಮಗಳನ್ನು ರಥದ ಕೆಳಗೆ ಇರಿಸಿ ಪೂಜಿಸಿದರು.
ಆಡು ಕುರಿ ಬಲಿ ಕೊಡಲು ಸಿದ್ಧವಾಗಿದ್ದ ಎರಡು ಕತ್ತಿಗಳನ್ನು ಕೈ ಎತ್ತಿ ತೋರಿಸುತ್ತಿದ್ದರು. ಅವುಗಳಿಂದ ತೇರು ಹರಿದಂತೆ ತೇರಿನ ಮುಂದೆ ಕುರಿಗಳನ್ನು ಒಂದೇ ಏಟಿಗೆ ಕತ್ತರಿಸಲು ಅನುಕೂಲವಾಗುವಂತೆ ಅಣಿಗೊಳಿಸಲಾಗಿತ್ತು. ಊರಿನಲ್ಲಿ ಜೈನಬಸದಿ, ಬನಶಂಕರಿ ದೇವಸ್ಥಾನ ಇರುವುದನ್ನು ನೋಡಿದೆನು. ತೇರು ಬೆಕ್ರೆ ಕಡೆಗೆ ಹೋಗುವ ರಸ್ತೆಯಲ್ಲಿ ಮಂಗಳ ವಾದ್ಯದೊಂದಿಗೆ ಸಾಗಿತು. ತೇರಿನ ಮುಂದೆ ಹುಡುಗರು ಡಿಜೆಸೌಂಡಿನ ಸಿನಿಮಾ ಹಾಡಿಗೆ ಕುಣಿದು ಸಂಭ್ರಮಿಸಿದರು. ಮೂರೂರಮ್ಮ ಸರ್ಕಾರಿ ಪ್ರೌಢಶಾಲೆಯ ಪಕ್ಕದ ವಿಶಾಲ ಪ್ರದೇಶದಲ್ಲಿ ಅಲ್ಲಿನ ದೇವಸ್ಥಾನದ ಮುಂದೆ ಕೆಂಡ ಸಿದ್ಧಪಡಿಸಿದ್ದು ಹಲವಾರು ಮಂದಿ ಕೆಂಡ ಹಾಯ್ದರು. ತೇರು ಕೆಂಡದ ಬಳಿ ಬರುವಷ್ಟರಲ್ಲಿ ಮೋಡದಿಂದ ಮಳೆ ಬೀಳತೊಡಗಿತು.
-ಗೊರೂರು ಅನಂತರಾಜು, ಹಾಸನ
ಬೆಟ್ಟದಪುರ ಹೋಬಳಿ ಭುವನಹಳ್ಳಿಯಲ್ಲಿ ಮೂರೂರು ಜಾತ್ರೆ ಉತ್ಸವ



