ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಆರಂಭವಾಗಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಭಿಯಾನದ ಹಿನ್ನೆಲೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ (ಎನ್ಯೂಮರೇಷನ್ ಫಾರಂ) ಪಡೆದು ಭರ್ತಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ, ಮತದಾರರಿಗೆ ಪ್ರೇರಣೆ ನೀಡಿದರು. ಸಿಎಂ ಅವರ ತವರೂರು ಕನಕಪುರ ಒಳಗೊಂಡ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಇದ್ದರು.ನಿಯಮಗಳ ಪ್ರಕಾರ ಪ್ರತಿಯೊಬ್ಬ ಮತದಾರರಿಗೂ ತಲಾ ಎರಡು ಫಾರ್ಮಗಳನ್ನು ನೀಡಲಾಗುತ್ತಿದ್ದು, ಒಂದನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬೇಕು ಮತ್ತು ಮತ್ತೊಂದನ್ನು ಮತದಾರರು ತಮ್ಮ ಬಳಿ ಇಟ್ಟುಕೊಳ್ಳಬಹುದು ಎನ್ನಲಾಗಿದೆ.
ಈ ಬಾರಿ ಭಾರತೀಯ ಚುನಾವಣಾ ಆಯೋಗವು ಅತ್ಯಾಧುನಿಕ ಸಾಫ್ಟ್ ವೇರ್ ಮತ್ತು ಆಪ್ಗಳನ್ನು ಬಳಸುತ್ತಿದ್ದು, ಅಧಿಕಾರಿಗಳು ಫಾರ್ಮ್ ನೀಡಿದ ತಕ್ಷಣ ಅದರಲ್ಲಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುತ್ತಿದ್ದಾರೆ. ಇದರಿಂದಾಗಿ ಮಾಹಿತಿ ತಕ್ಷಣವೇ ಚುನಾವಣಾ ಆಯೋಗದ ಸರ್ವರ್ನಲ್ಲಿ ಅಪ್ಡೇಟ್ ಆಗುತ್ತಿದೆ. ಸಾರ್ವಜನಿಕರಿಗೆ ಸ್ವತಃ ಫಾರ್ಮ್ ತುಂಬಲು ಬಾರದಿದ್ದರೆ ಬಿಎಲ್ಓ ಅಧಿಕಾರಿಗಳೇ ಸಹಾಯ ಮಾಡಲಿದ್ದಾರೆ. ಜನನ ವರ್ಷಕ್ಕೆ ಅನುಗುಣವಾಗಿ (1987 ಕ್ಕಿಂತ ಮುಂಚೆ, 1987-2004ರ ಮಧ್ಯೆ ಹಾಗೂ 2004 ರ ನಂತರ) ಯಾವೆಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂಬ ಸಂಪೂರ್ಣ ವಿವರವನ್ನು ಫಾರ್ಮ್ನ ಹಿಂಭಾಗದಲ್ಲಿ ಕನ್ನಡದಲ್ಲೇ ಮುದ್ರಿಸಲಾಗಿದೆ. ಇದಲ್ಲದೆ ಇಂದಿನಿAದ ಆನ್ಲೈನ್ ಮೂಲಕವೂ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
CM ಡಿಕೆಶಿ ಮನೆಯಿಂದಲೇ ‘SIR’ ಪ್ರಕ್ರಿಯೆ ಆರಂಭ



