ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ಮತ್ತು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಅಇಔ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿತ್ತು. ಇದೀಗ ಅನಿರುದ್ಧ್ ಅವರ ಚಿಕ್ಕಪ್ಪ ನೀಡಿರುವ ಹೇಳಿಕೆ ಈ ವದಂತಿಗೆ ಮತ್ತಷ್ಟು ಬಲ ನೀಡಿದೆ.
ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯನಟ ವೈ.ಜಿ.ಮಹೇಂದ್ರನ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ, ಅನಿರುದ್ಧ್ ಶೀಘ್ರದಲ್ಲೇ ಅದ್ಧೂರಿ
ಯಾಗಿ ಮದುವೆಯಾಗಲಿದ್ದಾರೆ. ಅನಿರುದ್ಧ್ ತುಂಬಾ ಸೌಮ್ಯ ಸ್ವಭಾವದ ಹುಡುಗ. ಅವನಿಗೆ ಶುಭಾಶಯ ಹೇಳಲು ಇದು ಸರಿಯಾದ ಸಮಯ. ಅವನು ಮದುವೆಗೆ ಸಜ್ಜಾಗಿದ್ದಾನೆ ಎಂದು ಹೇಳಿದರು.
ಈ ಸುದ್ದಿ ಕೇವಲ ವದಂತಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇದು ನಿಜ. ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಕಾವ್ಯಾ ಮಾರನ್ ಬಗ್ಗೆ ಮಾತನಾಡಿದ ಅವರು, ಅವರು ಸಾಮಾನ್ಯ ಹುಡುಗಿಯಲ್ಲ. ಸನ್ರೈಸರ್ಸ್ ಹೈದರಾಬಾದ್ನಂತಹ ದೊಡ್ಡ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ. ತಂದೆಯ ವ್ಯವಹಾರ ಕೌಶಲ್ಯವನ್ನು ಅವರು ಪಡೆದಿದ್ದಾರೆ. ಅನಿರುದ್ಧ್ ಮತ್ತು ಕಾವ್ಯಾ ಒಳ್ಳೆಯ ಜೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಶನ ವೈರಲ್ ಆಗಿದ್ದೇ ತಡ, ಇನ್ನೇನು ವದಂತಿ ನಿಜವಾಯ್ತು ಕಾವ್ಯಾ-ಅನಿರುದ್ಧ್ ಮದುವೆ ಆಗೋದು ಕನ್ಫರ್ಮ್ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈವರೆಗೂ ಇಬ್ಬರೂ ತಮ್ಮ ಸಂಬಂಧ ಅಥವಾ ಮದುವೆ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾವ್ಯಾ ಮಾರನ್, ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ. ಅವರು ಸನ್ ಟಿವಿ ನೆಟ್ವರ್ಕ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದು, ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ನ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.
ಇನ್ನೊಂದೆಡೆ, 35 ವರ್ಷದ ಅನಿರುದ್ಧ್ ರವಿಚಂದರ್ ಭಾರತೀಯ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. `ವಿಕ್ರಂ’, `ಜೈಲರ್’, `ಲಿಯೋ’, `ಕೊಲಮಾವು ಕೋಕಿಲಾ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಅನಿರುದ್ಧ್ – ಕಾವ್ಯಾ ಮಾರನ್ ಮದುವೆ ಫಿಕ್ಸ್ ಕುಟುಂಬ ಸದಸ್ಯರಿಂದಲೇ ಸಿಕ್ತು ಸುಳಿವು



