ಬೆಂಗಳೂರು: ಆಸ್ಟ್ರಿಚ್ ಪಕ್ಷಿಯು ಸಂಕಷ್ಟ ಎದುರಾದಾಗ ಮರಳಿನಲ್ಲಿ ತಲೆ ಮುಚ್ಚಿಕೊಳ್ಳುವಂತೆ, ದೇಶದಲ್ಲಿ ಜ್ವಲಂತ ಸಮಸ್ಯೆಗಳು ತಲೆದೋರಿದಾಗ ಪ್ರಧಾನಿಯವರು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ ಅಥವಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ ಎಂದು ಪ್ರಧಾನಿ ಅವರನ್ನು `ಆಸ್ಟ್ರಿಚ್’ ಪಕ್ಷಿಗೆ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಹೋಲಿಸಿದ್ದಾರೆ.
ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಉದ್ರೇಕಕಾರಿ ಮಾತುಗಳಲ್ಲಿ ಟೀಕಿಸಿದ ಅವರು, ಮೋದಿಯವರನ್ನು `ಆಸ್ಟ್ರಿಚ್’ (ಉಷ್ಟ್ರಪಕ್ಷಿ) ಪಕ್ಷಿಗೆ ಹೋಲಿಸಿದ್ದಾರೆ. “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಭಿಕಾರಿ ಮಾಡಿದ್ದಾರೆ” ಪ್ರಧಾನಿಯವರು ಸಾಮಾನ್ಯ ಜನರ ಹಿತ ಕಾಯುವ ಬದಲು ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಿದ್ದಾರೆ ಎಂದು ದೂರಿದ ಅವರು, ಕೊನೆಯ ಪಕ್ಷ ಪಾರ್ಲೆ ಕಂಪನಿಯ ಜೊತೆಗೂ ಪ್ರಧಾನಿ ಮೋದಿ ವ್ಯಾಪಾರ ಕುದುರಿಸಿದ್ದಾರೆ ಎಂದು ಲೇವಡಿ ಮಾಡಿದರು.ಇದೇ ಸಂದರ್ಭದಲ್ಲಿ ಪ್ರಾಚೀನ ರಾಜತಾಂತ್ರಿಕ ಚಾಣಕ್ಯನ ನೀತಿಯನ್ನು ಉಲ್ಲೇಖಿಸಿದ ಹರಿಪ್ರಸಾದ್, “ಯಾವಾಗ ದೇಶದ ರಾಜನೇ ವ್ಯಾಪಾರಿಯಾಗುತ್ತಾನೋ, ಆ ದೇಶದ ಪ್ರಜೆಗಳು ಭಿಕಾರಿಗಳಾಗುತ್ತಾರೆ ಎಂಬುದು ಚಾಣಕ್ಯ ನೀತಿ. ಇಂದು ಭಾರತದಲ್ಲಿ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಆಡಳಿತಗಾರನೇ ವ್ಯಾಪಾರ ಮಾಡಲು ಹೊರಟಿರುವುದರಿಂದ ದೇಶದ ಜನಸಾಮಾನ್ಯರು ಆರ್ಥಿಕವಾಗಿ ಕಂಗಾಲಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಮೋದಿ ಅವರ ಭೇಟಿಯ ಕುರಿತು ಮಾತನಾಡಿದ ಅವರು, “ಮೆಲೋನಿಗೆ ಮೆಲೋಡಿ ಕೊಟ್ಟು ಷೇರ್ ಮಾರುಕಟ್ಟೆಯ ದರ ಹೆಚ್ಚಾಗುವಂತೆ ಮಾಡಿದರು” ಎಂದು ಲೇವಡಿ ಮಾಡಿದರು. ದೇಶವು ಆರ್ಥಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಗಂಭೀರ ಮತ್ತು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಪ್ರಧಾನಿ ಮೋದಿ ಅವರು ದೇಶದ ಒಳಗಿನ ಸಮಸ್ಯೆಗಳನ್ನು ಬಗೆಹರಿಸುವ ಬದಲು ಸಾಲು ಸಾಲು ವಿದೇಶಿ ಪ್ರವಾಸಗಳನ್ನು (ಫಾರೆನ್ ಟ್ರಿಪ್) ಕೈಗೊಳ್ಳುತ್ತಿದ್ದಾರೆ ಎಂದು ಹರಿಪ್ರಸಾದ್ ಬೆಂಗಳೂರಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
`ಮೋದಿ ಆಸ್ಟ್ರಿಚ್ ಪಕ್ಷಿ’ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಹರಿಪ್ರಸಾದ್ ವ್ಯಂಗ್ಯ



