LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಚೈತನ್ಯಪೂರ್ಣ ನೃತ್ಯಪ್ರೇಮದ ರಸಧಾರೆ

ರವೀಂದ್ರ ಕಲಾ ಕ್ಷೇತ್ರದ ಸರಳ ರಂಗಸಜ್ಜಿಕೆಯ ವೇದಿಕೆಯ ಮೇಲೆ ಪಾದರಸದ ಮಿಂಚಿನ ಕಾರಂಜಿಯಾಗಿ ಲವಲವಿಕೆಯಿಂದ ನರ್ತಿಸುತ್ತಿದ್ದ ಕಲಾವಿದೆ ಪ್ರೇಮಾ, ತನ್ನ ರಂಗಪ್ರವೇಶದ ಸ್ಮರಣೀಯ ದಿನದಂದು ಕಲಾರಸಿಕರೆಲ್ಲರ ಮೆಚ್ಚುಗೆಯನ್ನು ಪಡೆದಿದ್ದಳು. ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಶರೀರ ಹೊಂದಿದ್ದ ನರ್ತಕಿ, ಗುರುಗಳ ಪರಿಶ್ರಮ-ತರಬೇತಿಯ ಪ್ರತಿಬಿಂಬವಾಗಿ ಕಲಾಪ್ರಪೂರ್ಣ ನೃತ್ಯದ ಆಯಾಮಗಳನ್ನು ಪ್ರದರ್ಶಿಸುತ್ತ ಲೀಲಾಜಾಲವಾಗಿ ನರ್ತಿಸಿ `ಮಾರ್ಗಂ' ಸಂಪ್ರದಾಯದ ರೀತ್ಯ ನೃತ್ಯಾರ್ಪಣೆ ಮಾಡಿದಳು.

`ಅಭಿವ್ಯಕ್ತಿ ಕಲ್ಚುರಲ್ ಟ್ರಸ್ಟ್'ನ ಗುರು ಕಲಾಯೋಗಿ ವಿದ್ವಾನ್ ಎಸ್. ರಘುನಂದನ್ ಅವರ ಅಸ್ಮಿತೆ ಪ್ರದರ್ಶನದಲ್ಲಿ ಎದ್ದುಕಾಣುತ್ತಿತ್ತು. ಅವರ ಶಿಷ್ಯರ ಪ್ರತಿ ರಂಗಪ್ರವೇಶವೂ ಒಂದಕ್ಕಿಂತ ಒಂದು ಭಿನ್ನವಾದ ಬಗೆಯಲ್ಲಿ , ಆಯಾ ಕಲಾವಿದರ ನೃತ್ಯ ಸಾಮರ್ಥ್ಯ, ನೈಪುಣ್ಯಕ್ಕೆ ಅನುಗುಣವಾಗಿ ಕೃತಿಗಳ ಆಯ್ಕೆ ಮತ್ತು ನೃತ್ಯಸಂಯೋಜನೆ ಮಾಡುವುದು ಅವರ ವೈಶಿಷ್ಟ್ಯ. ವಿಶೇಷವಾಗಿ ಈ ಸಂದರ್ಭಕ್ಕೆಂದೇ ಹೊಸಕೃತಿಗಳ ರಚನೆ, ನೃತ್ಯಸಂಯೋಜನೆ ಗುರುಗಳ ಅಪಾರ ಕಾಳಜಿ-ಪರಿಶ್ರಮಗಳ ಅಭಿವ್ಯಕ್ತಿಯಾಗಿತ್ತು.

`ಪುಷ್ಪಾಂಜಲಿ'- ನೃತ್ತನಮನದ ಕೃತಜ್ಞತಾ ಸಮರ್ಪಣೆಯೊಂದಿಗೆ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದ ಕಲಾವಿದೆ, ಆದಿಪೂಜಿತ ಗಣನಾಥನಿಗೆ ಸುಮನೋಹರ ಆಂಗಿಕಾಭಿನಯದಿಂದ- ಕಣ್ಣಿಗೆ ಕಟ್ಟುವ ಶಿಲ್ಪಸದೃಶ ಭಂಗಿಗಳಿಂದ `ವಿಘ್ನ ರಾಜಂ ಭಜೆ' ಎಂದು ನೃತ್ಯಪೂಜೆ ಸಲ್ಲಿಸಿದಳು. ವಿಶೇಷವೆಂದರೆ ಈ ಕೃತಿಯನ್ನು ಉತ್ತಕ್ಕಾಡು ವೆಂಕಟಸುಬ್ಬಯ್ಯರ್ ಒಂದು ಮಲ್ಲಾರಿಯ ರೀತಿಯಲ್ಲಿ ರಚಿಸಿದ್ದಾರೆ.ಅನಂತರ ಮೂಡಿಬಂದ `ಅಲರಿಪು'- ನೃತ್ಯವ್ಯಾಕರಣದ ಬಹುತೇಕ ಅಂಶಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ್ದು ಮುದನೀಡಿತು.

ಕೆಲವು ಅಪರೂಪದ ಕೃತಿಗಳಿಗೆ ನೃತ್ಯಸಂಯೋಜಿಸಿ ಹೊಸತನ ಸಿಂಚನಗೊಳಿಸುವ ಪರಿಪಾಠವುಳ್ಳ ಗುರುಗಳು ಕಲಿಸಿದ್ದನ್ನು ಶಿಷ್ಯೆ, ಯಥಾವತ್ತಾಗಿ ಅಷ್ಟೇ ಸುಂದರವಾಗಿ ನಿರೂಪಿಸಿದಳು. ಬಳ್ಳಾರಿ ಶೇಷಗಿರಿ ಆಚಾರ್ ರಚಿಸಿದ ಸ್ಕಂಧನ ಮಹತ್ವ, ವೈಶಿಷ್ಟ್ಯವನ್ನು ಚಿತ್ರಿಸಿದ `ವಲ್ಲಿ ಮನೋಹರನೇ' ಕೃತಿಯನ್ನು ಪ್ರೇಮಾ ತನ್ನ ರಮ್ಯಾಭಿನಯದಿಂದ ಸಾಕ್ಷಾತ್ಕರಿಸಿದಳು. ಮುಂದೆ- ಭರತನಾಟ್ಯದ ಹೃದಯಭಾಗ `ವರ್ಣ' ಅಷ್ಟೇ ಹೃದ್ಯವೂ ಆಗಿತ್ತು. - ನೃತ್ತ ಮತ್ತು ಅಭಿನಯ ಎರಡರಲ್ಲೂ ಸಮಾನ ಪ್ರಭುತ್ವ ನಿರೀಕ್ಷಿಸುವ `ವರ್ಣ'ದಂಥ ದೀರ್ಘಬಂಧ ಕಲಾವಿದರಿಗೆ ಸವಾಲು ಎನ್ನಬಹುದು.

ಈ ಎರಡೂ ಪರೀಕ್ಷೆಗಳಲ್ಲಿ ಕಲಾವಿದೆ ಸುಲಭವಾಗಿ ತೇರ್ಗಡೆಯಾದಳು. ಮಿಂಚಿನ ಸಂಚಾರದ ನೃತ್ತಾವಳಿಗಳು, ಭಾವಪೂರ್ಣ ಅಭಿನಯಗಳಿಂದ ಕಾರ್ತಿಕೇಯನನ್ನು ಕಣ್ಣೆದುರು ತಂದು ನಿಲ್ಲಿಸಿದಳು. ರಘುನಂದನರ ಸ್ಫುಟವಾದ ನಟುವಾಂಗದ ವಾಗ್ಝರಿ ಕಲಾವಿದೆಯ ಉತ್ಸಾಹದ ನರ್ತನಕ್ಕೆ ಇಂಬು ನೀಡಿತು. ಅಂದು ಪ್ರೇಮಾ ಸಾಕಾರಗೊಳಿಸಿದ ಭಕ್ತಿಪ್ರಧಾನ `ವರ್ಣ'-ಸ್ವಾಮಿ ವೇದಾಂತ ದೇಶಿಕರ್ ರವರ ಮೇರುಕೃತಿ `ಶ್ರೀ ಸುದರ್ಶನಾ ಅಷ್ಟಕ'.

ಇಲ್ಲಿಯವರೆಗೆ ವಿರಳವೆನಿಸಿದ ಸುದರ್ಶನ ಚಕ್ರದಂಥ ಹೊಸ ನೃತ್ಯವಸ್ತುವಿಗೆ ವಿವಿಧ ಪರಿಕಲ್ಪನೆಯಲ್ಲಿ `ವರ್ಣ'ದ ಚೌಕಟ್ಟಿನಲ್ಲಿ ನರ್ತನದ ದೃಶ್ಯರೂಪವಿತ್ತು ವಿನೂತನ ಅನುಭವ ತೆರೆದಿಟ್ಟ ರಘುನಂದನರ ಪ್ರಯತ್ನ ಗಮನಾರ್ಹವಾಗಿತ್ತು. ಸುದರ್ಶನ ಚಕ್ರದ ಮಹತ್ವ ಸಾರಿದ, ವಿವಿಧ ಸುಂದರ ಸಂಚಾರಿ ಕಥಾನಕಗಳ ಮೂಲಕ ಚಿತ್ರಿಸಲಾದ `ವರ್ಣ'ದ ನಿರೂಪಣೆಯಲ್ಲಿ ಕಲಾವಿದೆ ನಿರಾಯಾಸವಾಗಿ ತೋರಿದ ವಿವಿಧ ಬಗೆಯ ಚಾರಿ-ಕರಣಗಳು, ಅದರಲ್ಲೂ ಮುಖ್ಯವಾಗಿ ಆಕಾಶಚಾರಿಗಳು, ಭ್ರಮರಿಗಳು, ರಂಗಾಕ್ರಮಣದ ಆಂಗಿಕ-ಹೆಜ್ಜೆ-ಗೆಜ್ಜೆಗಳ ಕಲಾಕೌಶಲ್ಯ ಆನಂದದಾಯಕವಾಗಿದ್ದವು.

ಪ್ರಸ್ತುತಿಯ ಉತ್ತರಾರ್ಧದಲ್ಲಿ ಕಲಾವಿದೆ ಅನಾವರಣಗೊಳಿಸಿದ ಒಂದೊಂದು ಕೃತಿಗಳೂ ಭಾವಪೂರ್ಣವಾಗಿದ್ದವು. ಶಿವ-ಶಿವೆಯರ ಸುತ್ತಲಿನ ಘಟನೆಗಳನ್ನು ಆಧರಿಸಿ ಅಲ್ಲಿ ಮಿಡಿವ ನವರಸಗಳನ್ನು ಉಮಾ ಮಹೇಶ್ವರ ನವರಸ ಕೃತಿಯಲ್ಲಿ ಚೇತೋಹಾರಿಯಾಗಿ ಚಿತ್ರಿಸಲಾಯಿತು. ನಂತರ ಜಯದೇವ ಕವಿಯ `ಅಷ್ಟಪದಿ'ಗೆ ಕಲಾವಿದೆ ಜೀವತುಂಬಿ, ರಾಧೆಯ ವಿರಹೋತ್ಕರ್ಷತೆಗೆ ಕನ್ನಡಿ ಹಿಡಿದು ರಸಾಭಿನಯದೊಂದಿಗೆ ನರ್ತಿಸಿದಳು. ಮುಂದೆ- ರಾಮಭಜನೆಯಲ್ಲಿ ರಾಮಾಯಣದ ಕೆಲವು ಘಟನೆಗಳ ಮೇಲೆ ಬೆಳಕು ಚೆಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸಿದ ಪ್ರೇಮಳ ಸಾತ್ವಿಕಾಭಿನಯ ಆಹ್ಲಾದ ನೀಡಿತು. ಅಂತ್ಯದಲ್ಲಿ ಬೇಹಾಗ್ ರಾಗದ `ತಿಲ್ಲಾನ'ದೊಂದಿಗೆ ಕಲಾವಿದೆ ತನ್ನ ಪ್ರಸ್ತುತಿಯನ್ನು ಮನಮೋಹಕವಾಗಿ ಸಂಪನ್ನಗೊಳಿಸಿದಳು.

ವೈ.ಕೆ.ಸಂಧ್ಯಾ ಶರ್ಮ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು