LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಏಜ್ ಈಸ್ ಜಸ್ಟ್ `ಎ' ನಂಬರ್

ಕಳೆದ ವರ್ಷ ಕೆಜಿಎಫ್-2, ಕಾಂತಾರ, 777 ಚಾರ್ಲಿಯಂತಹ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ ಸ್ಯಾಂಡಲ್ ವುಡ್ ವರ್ಲ್ಡ್ ವೈಡ್ ಪ್ರಸಿದ್ಧಿಯಾಯಿತು.

ಆದರೆ ಈ ವರ್ಷ ಯಾಕೋ ಏನೋ ಸ್ಯಾಂಡಲ್ ವುಡ್ ಸ್ವಲ್ಪ ಕಳೆಗುಂದಿತ್ತು. ಕನ್ನಡ ಸಿನಿಮಾ ಪ್ರೇಕ್ಷಕರು ಒಂದು ದೊಡ್ಡ ಮಾಸ್ ಸಿನಿಮಾಗಾಗಿ ಕಾದು ಕುಳಿತಿದ್ದರು. ಕಾಯುವಿಕೆಯ ಈ ಅವಧಿಯಲ್ಲಿ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ನರಸಿಂಹನಾಗಿ ಅಭಿಮಾನಿಗಳ ಹೃದಯದಲ್ಲಿ ಕಿಚ್ಚು ಹಚ್ಚಿದ ಶಿವಣ್ಣನ ಅತಿಥಿ ಪಾತ್ರ ಕಾತುರತೆಯನ್ನು ಇನ್ನೂ ಹೆಚ್ಚಿಸಿತು.

ಈ ಸ್ಥಿತಿಗತಿಗಳಿಗೆ ತಕ್ಕನಾಗಿ ಈಗ ಶಿವಣ್ಣನ ಮಾಸ್ ಸಿನಿಮಾ ಘೋಸ್ಟ್ ಬಿಡುಗಡೆಯಾಗಿ ಮತ್ತೊಮ್ಮೆ ಸ್ಯಾಂಡಲ್ ವುಡ್ ಘರ್ಜಿಸುವಂತಾಗಿದೆ. ಇದರಿಂದ ಹಬ್ಬಗಳ ಸೀಸನ್ ಶುರುವಾಗಿರುವ ಈ ಗಳಿಗೆಯ ಕಳೆಯನ್ನು ಹೆಚ್ಚಿಸಿದಂತಾಗಿದೆ.
ಈಗ ಸ್ಯಾಂಡಲ್ ವುಡ್‍ನಲ್ಲಿ ಪುನೀತ್ ರಾಜಕುಮಾರ್ ಇಲ್ಲದೆ ದೊಡ್ಡ ನಷ್ಟವಾಗಿರಲು, ಯಶ್ ಅವರ ಯಾವುದೇ ಹೊಸ ಸಿನಿಮಾ ಸೆಟ್ಟೇರದಿರಲು, ಸುದೀಪ್ ಅವರು ಬಿಗ್ ಬಾಸ್ ಶೋನಲ್ಲಿ ವ್ಯಸ್ತವಾಗಿರಲು, ದರ್ಶನ್ ಅವರ ಸಿನಿಮಾ ಕೂಡ ಬಿಡುಗಡೆಯಾಗದಿರಲು ಘೋಸ್ಟ್ ಸಿನಿಮಾದ ಮೇಲೆ ಬಹಳ ನಿರೀಕ್ಷೆಗಳಿದ್ದವು. ಶುರುವಿನಿಂದ ಅಂತ್ಯದವರೆಗೂ ತ್ವರಿತಗತಿಯಲ್ಲಿ ಸಾಗುವ ಕಥೆಯು ಒಂದು ಕ್ಷಣವೂ ನಿಮ್ಮ ಕಣ್ಣಿಗೆ ವಿರಾಮ ನೀಡುವುದಿಲ್ಲ.

ಶಿವಣ್ಣನ ವೇಗಕ್ಕೆ ತಕ್ಕಂತಿದೆ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ! ಸಿನಿಮಾ ಕಥೆಗೆ ಜೀವವೇ ದಳವಾಯಿ ಶಿವಣ್ಣನ ಖದರ್ ಎನ್ನಬಹುದು. ಕಥಾನಾಯಕನ ಸ್ಟೈಲ್, ಪವರ್, ಮ್ಯಾನರಿಸಂ, ಇಂಟೆಲಿಜೆನ್ಸ್ ಗಳ ಸುತ್ತವೇ ಈ ಕಥೆ ಸಾಗುತ್ತದೆ. ಎದುರಾಳಿ ತಂಡ ಮಾಡುವ ಎಲ್ಲಾ ಯೋಜನೆಗಳನ್ನು ವಿಫಲಗೊಳಿಸುತ್ತಾ ಎರಡು ದಿನಗಳ ಕಾಲ ರಣ ರೋಚಕ ಚದುರಂಗದಾಟವನ್ನು ಆಡಿ ಹೇಗೆ ವಿಜಯಿಯಾಗುತ್ತಾರೆ ಎಂಬುದನ್ನು ನೀವು ಥಿಯೇಟರ್ ನಲ್ಲೇ ನೋಡಬೇಕು.

ತಮ್ಮ 62ರ ವಯಸ್ಸಲ್ಲೂ ಯುವಕನಂತೆ ಮಿಂಚುವ ಶಿವಣ್ಣನ ಎನರ್ಜಿಗೆ ಸೂಕ್ತ ಕಥೆ ದೊರೆತರೆ ಸಿನಿಮಾ ದೊಡ್ಡ ಯಶಸ್ಸನ್ನು ಕಾಣುವುದರಲ್ಲಿ ಯಾವ ಸಂದೇಹವೂ ಇಲ್ಲ. ಒಮ್ಮೆ ಅಪ್ಪು ಸರ್ ಗೆ ಶಿವಣ್ಣನ ಯಾವ ಗುಣ ನಿಮಗೆ ಬೇಡವೆನಿಸುತ್ತದೆ ಎಂದು ಪ್ರಶ್ನಿಸಿದ್ದಾಗ, ಬಹುತೇಕ ಎಲ್ಲಾ ಕಥೆಗಳನ್ನು ಒಪ್ಪಿಕೊಳ್ಳುವ ಎಲ್ಲಾ ಹೊಸ ನಿರ್ದೇಶಕರಿಗೂ ಅವಕಾಶ ಕೊಡಬೇಕೆನ್ನುವ ಸಾಹಸ ಗುಣ ಬೇಡವೆನಿಸುತ್ತದೆ ಎಂದು ನಗು ನಗುತ್ತಾ ಉತ್ತರಿಸಿದ್ದರು. ಇದರಂತೆ ಶಿವಣ್ಣ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುವ ಮೂಲಕ ವೈಯಕ್ತಿಕವಾಗಿ ರಿಸ್ಕ್ ತೆಗೆದುಕೊಂಡು ಹೊಸಮುಖಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಈಗಿನ ಯುವ ನಾಯಕರೇ ನಾಚುವಂತೆ ಅತೀ ವೇಗವಾಗಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಹಾಗೂ ಸಾಲು ಸಾಲು ಸಿನಿಮಾಗಳ ಆಫರ್ಸ್ ಗಳನ್ನು ಪಡೆದುಕೊಳ್ಳುತ್ತಿರುವ ಇವರು 'ಏಜ್ ಈಸ್ ಜಸ್ಟ್ ಎ ನಂಬರ್' ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಿನಿಮಾರಂಗಕ್ಕೆ ಪ್ರವೇಶಿಸಿದ ಮೇಲೆ ಕೆಲವು ನಾಯಕರು ಹಿಟ್ ಸಿನಿಮಾಗಳನ್ನು ಕೊಟ್ಟರೂ ಕೂಡ 5-10 ವರ್ಷಗಳ ಅಂತರದಲ್ಲಿ ಕಣ್ಮರೆಯಾಗಿ ಬಿಡುತ್ತಾರೆ ಅಥವಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಾದ ವಿವಶತೆಗೆ ಒಳಗಾಗುತ್ತಾರೆ ಅಥವಾ ಸಿನಿಮಾವೆ ಬದುಕಾಗಿ ಹೋಗಿದ್ದರೆ ಅದರ ಸಂಬಂಧಿತ ಸಂಸ್ಥೆಗಳಲ್ಲಿ ಕಾರ್ಯ ಮಾಡಲು ಅಣಿಯಾಗುತ್ತಾರೆ.

ದೀರ್ಘ ಕಾಲ ನಿರಂತರವಾಗಿ ಕೆರಿಯರ್‍ನ ಉದ್ದಕ್ಕೂ ತಮ್ಮ ಪಾತ್ರವೇ ಕೇಂದ್ರವಾಗಿರುವ ಸಿನಿಮಾ ಕಥೆ ಇರುವಂತೆ ನಾಯಕ ನಟನಾಗಿಯೇ ಉಳಿಯುವವರು ವಿರಳಾತಿ ವಿರಳ. ಅಂತಹದ್ದರಲ್ಲಿ ಕಳೆದ ನಾಲ್ಕು ದಶಕಗಳಿಂದ ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿಯಾಗಿ ಮೆರೆಯುತ್ತಿರುವ ಶಿವಣ್ಣನ ಸಾಧನೆ ಅದ್ವಿತೀಯ! ಇದರಲ್ಲಿ ನೆಪೊಟಿಸಂನ ಪ್ರಶ್ನೆಯೇ ಇಲ್ಲ. ತಮ್ಮ ತಂದೆ ಅತ್ಯುತ್ತಮ ನಟ, ನಿರ್ದೇಶಕ, ರಾಜಕಾರಣಿಯಾಗಿದ್ದರೂ ಅವರ ಮಕ್ಕಳು ಆಯಾ ಕ್ಷೇತ್ರಗಳಲ್ಲಿ ಮುಂದುವರಿದು ಸುಲಭ ಸಾಧನೆಗೈಯ್ಯಬಹುದಾಗಿದ್ದರೂ ಅದನ್ನು ಸಾಧಿಸಲಾಗದೆ ಮತ್ತೆ ಮತ್ತೆ ವಿಫಲವಾಗುತ್ತಿರುವುದನ್ನು ಇಂದೂ ಸಹ ಕಾಣುತ್ತಿದ್ದೇವೆ.

ಕೆಜಿಎಫ್, ದಿಲ್ಲಿ (ಖೈದಿ), ಮಾಸ್ಟರ್, ವಿಕ್ರಮ್ ನಂತಹ ಸೂಪರ್ ಆಕ್ಷನ್ ಥ್ರಿಲ್ಲರ್ ಸಿನಿಮಾಗಳು ತಮ್ಮದೇ ಒಂದು ಟ್ರೆಂಡ್ ಅನ್ನು ಸೆಟ್ ಮಾಡಿವೆ. ಇಂದಿನ ಯುವ ಪೀಳಿಗೆ ಈ ತೆರನಾದ ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟು ನೋಡುತ್ತಿದ್ದಾರೆ. ಅವೆಂಜರ್ಸ್, ಸ್ಪೈಡರ್ ಮ್ಯಾನ್ ನಂತಹ ಇಂಗ್ಲಿಷ್ ಸಿನಿಮಾಗಳನ್ನು ನೆಚ್ಚಿಕೊಂಡಿದ್ದ ನಮ್ಮ ಯುವ ಸಮೂಹಕ್ಕೆ ಅಂತಹ ಸಾಹಸಮಯ ಸಿನಿಮಾಗಳು ನಮ್ಮ ಭಾಷೆಯಲ್ಲಿ ಹೆಚ್ಚು ಹೆಚ್ಚಾಗಿ ಬರುತ್ತಿರುವುದು ತುಂಬಾ ಸಂತಸ ತಂದಿದೆ. ಮೊದಲಿನಂತೆ ಈಗ ಸಿನಿಮಾ ಅಂದ ಮೇಲೆ ಒಂದು ರೊಮ್ಯಾಂಟಿಕ್ ಸಾಂಗ್, ಒಂದು ಪಾರ್ಟಿ ಸಾಂಗ್ ಇರಲೇಬೇಕು ಎಂಬ ಯಾವ ಅಘೋಷಿತ ನಿಯಮವೂ ಜಾರಿಯಲ್ಲಿಲ್ಲ.

ಪ್ರತಿಭಾವಂತ, ಸಾಹಸಪ್ರಿಯ ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಹೊಸ ಹೊಸ ಟ್ರೇಡ್ ಮಾರ್ಕ್ ಗಳನ್ನು ಸೃಷ್ಟಿಸುತ್ತಿದ್ದಾರೆ. ಯೋಗ್ಯತೆಯುಳ್ಳವರಾಗಿದ್ದರೂ ದೊಡ್ಡ ಯಶಸ್ಸನ್ನು ಕಾಣಲಾಗದ ನಾಯಕರಿಗೆ ಈ ನಿರ್ದೇಶಕರು ಯೋಗಾಯೋಗವನ್ನೇ ತಂದಿದ್ದಾರೆ. ಉದಾಹರಣೆಗೆ ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಅದ್ಭುತ ಚಿತ್ರಕಥೆಯ ದಿಲ್ಲಿ (ಖೈದಿ) ಸಿನಿಮಾದ ನಾಯಕನಿಗೆ ಬೃಹತ್ತಾದ ಗೆಲುವು ದೊರೆತದ್ದು. ಹಾಗೆಯೇ ನಮ್ಮ ಕನ್ನಡದಲ್ಲಿ ಶ್ರೀಮುರುಳಿ ಅವರಿಗೆ ಉಗ್ರಂ ಎಂಬ ಸೂಪರ್ ಆಕ್ಷನ್ ಸಿನಿಮಾ ಮೂಲಕ ಕಮ್ ಬ್ಯಾಕ್ ದೊರೆತದ್ದು.

ಈ ಚಿತ್ರದಲ್ಲಿ 62ರ ವಯಸ್ಸಿನ ಶಿವಣ್ಣ 20ರ ಆಸುಪಾಸಿನ ಆನಂದ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಹೆಚ್ಚು ಸಂತಸವನ್ನು ತಂದಿದೆ. ಃIಉ ಆಂಆಆಙ ಔಈ ಂಐಐ ಒಂSSಇS ಎಂದು ಸಿನಿಮಾದಲ್ಲಿ ತೋರುವ ಶಿವಣ್ಣನ ಖದರ್ ಪರದೆಯಾಚೆಗಿನ ವಾಸ್ತವ ಜೀವನದಲ್ಲಿ ಎಷ್ಟು ಸಿಂಪಲ್ ಎಂಬುದು ನಮಗೆಲ್ಲ ತಿಳಿದೇ ಇದೆ. ಘೋಸ್ಟ್ ಸಿನಿಮಾ ತೆರೆಕಂಡ ನಂತರ ಮೈಸೂರಿನ ವುಡ್ ಲ್ಯಾಂಡ್ಸ್, ಮದ್ದೂರಿನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲು ಸರ್ಪ್ರೈಸ್ ವಿಸಿಟ್ ನೀಡಿರುವುದು ಅವರ ಸರಳತೆಯ ಇತ್ತೀಚಿನ ಉದಾಹರಣೆಗಳು. ಲಿಯೋ ಸಿನಿಮಾದ ಜೊತೆ ನೇರಾನೇರ ಸ್ಪರ್ಧೆಯಲ್ಲಿರುವ ಘೋಸ್ಟ್ ನ ಮಿಂಚಿನ ಓಟ ಮುಂದುವರಿಯಲಿ. ಲಿಯೋ ಮತ್ತು ಘೋಸ್ಟ್ ಎರಡೂ ಚಿತ್ರಗಳು ಯಶಸ್ಸನ್ನು ಕಾಣಲಿ.

ಆದರೆ ನಮ್ಮ ಚಿತ್ರ ನಮಗೆ ಮೊದಲು ಆದ್ದರಿಂದ ಘೋಸ್ಟ್ ಚಿತ್ರಕ್ಕೆ ನಮ್ಮ ಮೊದಲ ಆದ್ಯತೆ. ಸಿನಿಮಾ ಕ್ಷೇತ್ರದಲ್ಲಿ ಶಿವರಾಜ್ ಕುಮಾರ್, ರಜನೀಕಾಂತ್ ಇರಬಹುದು ಅಥವಾ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್ ಇರಬಹುದು ದಶಕಗಳು ಕಳೆದರೂ ಇಂದಿಗೂ ಸಹ ತಮ್ಮ ಮೇಲೆ ಜನರು ಇಟ್ಟಿರುವ ಅಭಿಮಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಎನರ್ಜಿಯೇ ಎಂದು ಹೇಳಬಹುದು.

ಭೌತಿಕವಾಗಿ ದೇಹದ ಸ್ವಾಸ್ಥ್ಯಕ್ಕಾಗಿ ವರ್ಕ್ ಔಟ್ ಮಾಡುವುದರ ಜೊತೆಗೆ ಮಾನಸಿಕವಾಗಿ ಸ್ವಚ್ಛಮನಸ್ಸಿಗಾಗಿ ವರ್ಕ್ ಔಟ್ ಮಾಡುವುದರ ಮೂಲಕ ಹಾಗೂ ಆಧ್ಯಾತ್ಮಿಕವಾಗಿ ಜೀವನ ಸಬಲೀಕರಣಕ್ಕಾಗಿ ಯೋಗ - ಧ್ಯಾನ ಮಾಡುವ ಮೂಲಕ ಸಮಾಜದಲ್ಲಿ ಇಂದಿಗೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಯಶಸ್ಸನ್ನು ಗಳಿಸುವುದಕ್ಕಿಂತಲೂ ಅದನ್ನು ದೀರ್ಘಕಾಲ ಕಾಪಾಡಿಕೊಳ್ಳುವುದು ಮಹತ್ತರ ಜವಾಬ್ದಾರಿಯುತ ಕಾರ್ಯ ಎಂಬುದು ಇವರನ್ನು ನೋಡಿದಾಗ ಅರ್ಥವಾಗುತ್ತದೆ.

ಈ ತೆರನಾದ ಆಕ್ಷನ್ ಸಿನಿಮಾಗಳನ್ನೇ ಯುವಜನತೆ ಹೆಚ್ಚು ಇಷ್ಟ ಪಡುತ್ತಿರುವುದರಿಂದ ನಿರ್ದೇಶಕರ ಸಮೇತ ಇಡೀ ತಂಡವು ಸಿನಿಮಾ ಕಥೆಯ ಮೂಲಕ ಸಮಾಜಕ್ಕೆ ಯಾವ ರೀತಿಯ ಸಂದೇಶ ತಲುಪುತ್ತಿದೆ ಎಂಬುದರ ಬಗ್ಗೆ ಹೆಚ್ಚು ಜಾಗೃತವಾಗಿರಬೇಕಿದೆ. ಕೆಜಿಎಫ್ ಸಿನಿಮಾದಲ್ಲಿ ಕಥಾನಾಯಕ ಹಾಗೂ ಆತನ ತಾಯಿಯ ಬಾಂಧವ್ಯದ ಆಧಾರದ ಮೇಲೆ ಕಥೆ ಸಾಗುವಂತೆ ಹಾಗೂ ದಿಲ್ಲಿ (ಖೈದಿ)ಯಲ್ಲಿ ಕಥಾನಾಯಕ ಹಾಗೂ ಆತನ ಮಗಳ ಅನುಬಂಧದ ಆಧಾರದ ಮೇಲೆ ಕಥೆ ಸಾಗುವಂತೆ ಉತ್ತಮ ವಿಷಯ ವಸ್ತುವನ್ನು ಕೇಂದ್ರೀಕರಿಸಿ ಆಕ್ಷನ್ ಸಿನಿಮಾ ಮಾಡಿದರೆ ಸಾಮಾಜಿಕವಾಗಿ ಸಕಾರಾತ್ಮಕ ಪರಿಣಾಮವನ್ನು ಬೀರಬಹುದು.

ಸಿಂಚನ.ಎಂ.ಕೆ ಮಂಡ್ಯ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು