ನಗು ಎಂದರೆ ಕೇವಲ ತುಟಿಗಳ ಮೇಲೆ ಮೂಡುವ ಒಂದು ಭಾವವಲ್ಲ. ಅದು ಮನಸ್ಸಿನೊಳಗಿನ ಬೆಳಕು. ಪರಿಚಯವಿಲ್ಲದ ಇಬ್ಬರ ನಡುವೆ ಸ್ನೇಹದ ಮೊದಲ ಹೆಜ್ಜೆಯಾಗಬಲ್ಲದು. ನೋವಿನಿಂದ ಕುಗ್ಗಿದ ಮನಸ್ಸಿಗೆ ಧೈರ್ಯ ತುಂಬಬಲ್ಲದು. ಮಾತುಗಳು ಸೋತಾಗ ಭಾವನೆಗಳನ್ನು ತಲುಪಿಸಬಲ್ಲದು.ಜೀವನದಲ್ಲಿ ನಾವು ಪ್ರತಿದಿನ ಅನೇಕ ಮುಖಗಳನ್ನು ನೋಡುತ್ತೇವೆ. ಕೆಲವರು ಮನಸ್ಸಿನ ನೋವನ್ನು ಮರೆಮಾಚಿಕೊಂಡು ನಗುತ್ತಾರೆ. ಇನ್ನೂ ಕೆಲವರು ತಮ್ಮ ನೋವಿನ ನಡುವೆಯೂ ಮತ್ತೊಬ್ಬರನ್ನು ನಗಿಸಲು ಪ್ರಯತ್ನಿಸುತ್ತಾರೆ. ಅವರ ನಗು ನಮಗೆ ಸಾಮಾನ್ಯವಾಗಿ ಕಾಣಬಹುದು, ಆದರೆ ಅದರ ಹಿಂದೆ ಒಂದು ದೊಡ್ಡ ಹೋರಾಟವೇ ಇರಬಹುದು. ನಗುವಿನ ವಿಶೇಷತೆಯೇ ಇದು. ಅದು ತನ್ನ ನೋವನ್ನು ಹೇಳಿಕೊಳ್ಳದೆ, ಮತ್ತೊಬ್ಬರಿಗೆ ಸಂತೋಷವನ್ನು ನೀಡಬಲ್ಲದು.
ಒಂದು ಸಣ್ಣ ಮುಗುಳ್ನಗೆ ಎಷ್ಟು ಬದಲಾವಣೆ ತರಬಲ್ಲದು ಎಂಬುದನ್ನು ನಾವು ಬಹುಶಃ ಗಮನಿಸುವುದಿಲ್ಲ. ದಾರಿಯಲ್ಲಿ ಎದುರಾದ ಪರಿಚಿತ ವ್ಯಕ್ತಿಗೆ ನೀಡಿದ ಒಂದು ನಗು, ಅವರ ದಿನವನ್ನು ಹಗುರಗೊಳಿಸಬಹುದು. ಕಷ್ಟದಲ್ಲಿರುವ ಮಗುವಿಗೆ ತಾಯಿಯ ನಗು ಭರವಸೆಯಾಗಬಹುದು. ಸೋತಿರುವ ವ್ಯಕ್ತಿಗೆ ಸ್ನೇಹಿತನ ನಗು, `ನೀನು ಒಬ್ಬಂಟಿಯಲ್ಲ’ ಎಂಬ ಸಂದೇಶವಾಗಬಹುದು.
ನಗುವಿಗೆ ಭಾಷೆಯ ಗಡಿ ಇಲ್ಲ, ದೇಶ, ಜಾತಿ, ವಯಸ್ಸು, ಸ್ಥಾನಮಾನ ಯಾವುದೂ ಅದರ ಮುಂದೆ ಮುಖ್ಯವಲ್ಲ. ಮಗು ನಗುವಾಗ ಅದರ ಭಾಷೆ ನಮಗೆ ಅರ್ಥವಾಗದಿದ್ದರೂ ಅದರ ಸಂತೋಷ ನಮಗೆ ಅರ್ಥವಾಗುತ್ತದೆ. ವೃದ್ಧರ ಮುಖದ ಮುಗುಳ್ನಗೆಯಲ್ಲಿ ಅನುಭವದ ಶಾಂತಿ ಕಾಣುತ್ತದೆ. ಪ್ರೀತಿಸುವವರ ನಗುವಿನಲ್ಲಿ ಆತ್ಮೀಯತೆ ಕಾಣುತ್ತದೆ. ಆದರೆ ಎಲ್ಲ ನಗುಗಳೂ ಸಂತೋಷದ ಸಂಕೇತಗಳಲ್ಲ.ಕೆಲವೊಮ್ಮೆ ಕಣ್ಣೀರನ್ನು ಮರೆಮಾಚಲು ಕೂಡ ಮನುಷ್ಯ ನಗುತ್ತಾನೆ. `ನಾನು ಚೆನ್ನಾಗಿದ್ದೇನೆ’ ಎಂದು ಹೇಳಲು ಸಾಧ್ಯವಾಗದಾಗಲೂ ಮುಖದಲ್ಲಿ ನಗುವನ್ನು ತರುತ್ತಾನೆ. ಸಾಮಾಜಿಕ ಬದುಕಿನಲ್ಲಿ ತನ್ನ ದುಃಖವನ್ನು ಎಲ್ಲರ ಮುಂದೆ ತೆರೆದಿಡಲು ಸಾಧ್ಯವಾಗದೆ, ನಗುವಿನ ಮುಖವಾಡ ಧರಿಸುವವರೂ ಇದ್ದಾರೆ. ಆದ್ದರಿಂದ ಯಾರೊಬ್ಬರ ನಗುವನ್ನು ನೋಡಿ ಅವರ ಜೀವನ ಸಂಪೂರ್ಣ ಸಂತೋಷದಿAದ ಕೂಡಿದೆ ಎಂದು ನಿರ್ಧರಿಸಬಾರದು. ನಗುತ್ತಿರುವ ಪ್ರತಿಯೊಬ್ಬರಿಗೂ ಅವರದೇ ಆದ ಒಂದು ಕಾಣದ ಕಥೆ ಇರುತ್ತದೆ.ಇಂದಿನ ವೇಗದ ಬದುಕಿನಲ್ಲಿ ಒತ್ತಡ, ಸ್ಪರ್ಧೆ, ನಿರೀಕ್ಷೆ, ಸಂಬಂಧಗಳಲ್ಲಿನ ಅಂತರ-ಇವೆಲ್ಲವೂ ಮನುಷ್ಯನ ಮನಸ್ಸಿನ ಮೇಲೆ ಭಾರವಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಗು ಒಂದು ಸಣ್ಣ ಮಾನಸಿಕ ವಿಶ್ರಾಂತಿಯAತೆ ಕೆಲಸ ಮಾಡುತ್ತದೆ. ನಗುವಾಗ ಮನಸ್ಸು ಕ್ಷಣಕಾಲವಾದರೂ ತನ್ನ ಚಿಂತೆಗಳಿAದ ದೂರ ಸರಿಯುತ್ತದೆ. ಆದರೆ ನಗಿಸುವುದಕ್ಕೂ ಒಂದು ಮಿತಿ ಮತ್ತು ಮಾನವೀಯತೆ ಇರಬೇಕು. ಮತ್ತೊಬ್ಬರ ದೌರ್ಬಲ್ಯವನ್ನು ಹಾಸ್ಯ ಮಾಡಿ ನಗುವುದು ನಗುವಲ್ಲ; ಅದು ನೋವು. ಯಾರನ್ನಾದರೂ ಅವಮಾನಿಸಿ ಪಡೆಯುವ ಸಂತೋಷ ಕ್ಷಣಿಕ. ಆದರೆ ಯಾರನ್ನೂ ನೋಯಿಸದೆ ಹಂಚಿಕೊಳ್ಳುವ ನಗು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.
ಜೀವನದಲ್ಲಿ ಎಲ್ಲವೂ ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ. ಕೆಲವು ಸಂಬಂಧಗಳು ದೂರವಾಗುತ್ತವೆ. ಕೆಲವು ಕನಸುಗಳು ಅಪೂರ್ಣವಾಗುತ್ತವೆ. ಕೆಲವು ದಿನಗಳು ಕಣ್ಣೀರಿನದ್ದಾಗುತ್ತವೆ. ಆದರೂ ಆ ಎಲ್ಲದರ ನಡುವೆ ಮತ್ತೆ ನಗಲು ಕಲಿಯುವುದೇ ಜೀವನದ ದೊಡ್ಡ ಪಾಠ.ನಗು ಎಂದರೆ ಸಮಸ್ಯೆಗಳಿಲ್ಲದ ಜೀವನವಲ್ಲ, ಸಮಸ್ಯೆಗಳ ನಡುವೆಯೂ ಬದುಕನ್ನು ಸ್ವೀಕರಿಸುವ ಮನಸ್ಸೇ ನಗು.ನಮ್ಮ ಬಳಿ ಹಣವಿಲ್ಲದಿದ್ದರೂ ನಗಬಹುದು. ದೊಡ್ಡ ಸ್ಥಾನಮಾನವಿಲ್ಲದಿದ್ದರೂ ನಗಬಹುದು. ಯಾರಿಗಾದರೂ ಸಹಾಯ ಮಾಡಲು ಸಾಧ್ಯವಾಗದ ಸಂದರ್ಭದಲ್ಲೂ ಒಂದು ಆತ್ಮೀಯ ನಗು ನೀಡಬಹುದು. ಕೆಲವೊಮ್ಮೆ ನಾವು ಕೊಡುವ ದೊಡ್ಡ ಉಡುಗೊರೆ ವಸ್ತುವಲ್ಲ-ನಮ್ಮ ಹೃದಯಪೂರ್ವಕ ನಗುವೇ ಸಾಕು.ಹಾಗಾಗಿ ಬದುಕಿನಲ್ಲಿ ಎಷ್ಟೇ ಕಷ್ಟಗಳು ಬಂದರೂ, ನಮ್ಮ ನಗುವನ್ನು ಕಳೆದುಕೊಳ್ಳಬಾರದು. ನಮ್ಮ ನಗು ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಕರುಣೆಯೊಂದಿಗೆ ಬೆರೆತಿರಬೇಕು. ನಮ್ಮ ನಗು ಯಾರನ್ನೂ ಹೀಯಾಳಿಸಿ ಕೆಳಗಿಳಿಸುವಂತಿರದೆ, ಅವರನ್ನು ನಗಿಸುತ ಮೇಲಕ್ಕೇರುವಂತಿರಬೇಕು. ಕೊನೆಗೆ, ಜೀವನ ಮುಗಿದ ಮೇಲೆ ನಮ್ಮ ಬಳಿ ಉಳಿಯುವುದು ಎಷ್ಟು ಸಂಪತ್ತು ಎಂಬುದಕ್ಕಿತ, ನಮ್ಮಿಂದ ಎಷ್ಟು ಹೃದಯಗಳು ಸಂತೋಷಪಟ್ಟವು ಎಂಬ ನೆನಪು ಮಾತ್ರ
ಒಂದು ನಗು ಉಚಿತ.ಆದರೆ ಅದರ ಮೌಲ್ಯ ಅಪಾರ.ಒಂದು ನಗು ಕ್ಷಣಿಕ.ಆದರೆ ಅದರ ನೆನಪು ಶಾಶ್ವತ.ಆದ್ದರಿಂದ-ನಗೋಣ-ನಮ್ಮ ಬದುಕಿಗಾಗಿ,ನಗಿಸೋಣ- ಮತ್ತೊಬ್ಬರ ಬದುಕಿಗಾಗಿ,ನಗುವನ್ನು ಹಂಚಿಕೊಳ್ಳೋಣ-ಮಾನವೀಯತೆಯ ಹೆಸರಿನಲ್ಲಿ.
ಏಕೆಂದರೆ, ಮುಖದ ಮೇಲಿನ ನಗು ಸುಂದರವಾಗಿರಬಹುದು. ಆದರೆ ಮತ್ತೊಬ್ಬರ ಮುಖದಲ್ಲಿ ನಗು ಮೂಡಿಸುವ ಹೃದಯ ಇನ್ನಷ್ಟು ಸುಂದರವಾಗಿರುತ್ತದೆ.ಮುಖದ ಸೌಂದರ್ಯಕ್ಕೆ ನಗುವೇ ಆಭರಣ.ನಗುತಾ ನಲಿಯಬೇಕು, ನಗುತಾ ಬಾಳಬೇಕು.
ಚಂಪಾ ಚಿನಿವಾರ್ ಆಪ್ತಸಮಾಲೋಚಕಿ