ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಹಾಗೂ ನವೀನ್ ಕುಮಾರ್ ಅವರು ನಿರ್ಮಿಸಿರುವ, ಗೋವಿಂದರಾಜು ಹಾಗೂ ಶಶಿಧರ್ ರೆಡ್ಡಿ ಸಹ ನಿರ್ಮಾಣದ ನವೀನ್ ಕುಮಾರ್ ನಿರ್ದೇಶನದ “ಮಹಿಮಾ” ಕನ್ನಡ ಚಿತ್ರ ಸೌತ್ ಏಷ್ಯಾದ ಎಲ್ಲಾ ಭಾಷೆಗಳ ಚಿತ್ರಗಳು ಪ್ರದರ್ಶನವಾಗುವ ಪ್ರತಿಷ್ಠಿತ ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಕ್ಟೋಬರ್ 17 ರಂದು ಈ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಇದಕ್ಕೂ ಮುನ್ನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಅಕ್ಕ ಸಮ್ಮೇಳನದಲ್ಲೂ “ಮಹಿಮಾ” ಚಿತ್ರ ಪ್ರದರ್ಶನಗೊಂಡಿತ್ತು.ಈವರೆಗೂ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಉದ್ಯಮಿ ಕೆನಡಾ ನಿವಾಸಿ ನವೀನ್ ಕುಮಾರ್ ನಿರ್ದೇಶನದ ಮೊದಲ ಚಿತ್ರ “ಮಹಿಮಾ”. ಈ ಚಿತ್ರದ ಕಥೆ, ಚಿತ್ರಕಥೆ ಅವರದೇ.
ಟೊರೊಂಟೊದಲ್ಲಿ ನೆಲೆಸಿರುವ ಮಹಿಮಾ, ಒಂದು ರಾತ್ರಿ ತನ್ನ ಅತ್ತೆಯ ಮಗಳು ಸಾನ್ವಿಯೊಂದಿಗೆ ತೆರಳುವಾಗ ಆಕಸ್ಮಿಕವಾಗಿ ಕೆನಡಾದ ಯುವತಿಯೊಬ್ಬಳಿಗೆ ಕಾರಿನಿಂದ ಡಿಕ್ಕಿ ಹೊಡೆದು, ಸ್ಥಳದಿಂದ ಪರಾರಿಯಾಗುತ್ತಾಳೆ. ಅಪರಾಧ ಪ್ರಜ್ಞೆಯಿಂದ ಬಳಲುವ ಮಹಿಮಾಳನ್ನು, ಮೃತಪಟ್ಟ ಯುವತಿಯ ಪ್ರತೀಕಾರದ ಆತ್ಮ ಕಾಡತೊಡಗುತ್ತದೆ. ಮಹಿಮಾಳ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿದಾಗ, ಡಿಟೆಕ್ಟಿವ್ ಆರ್ಯ ತನಿಖೆ ಆರಂಭಿಸುತ್ತಾನೆ. ಕೊನೆಗೆ, ಆತ್ಮದ ಹಿಂದಿರುವ ನಿಗೂಢ ಸತ್ಯವೊಂದು ಅನಾವರಣಗೊಳ್ಳುತ್ತದೆ. ಇದೇ ಚಿತ್ರದ ಪ್ರಮುಖ ಕಥಾಸಾರಾಂಶವಾಗಿದೆ. ಇಡೀ ಚಿತ್ರದ ಚಿತ್ರೀಕರಣ ಕೆನಡಾದಲ್ಲೇ ನಡೆದಿರುವುದು ವಿಶೇಷ.ಮೂಲತಃ ದಕ್ಷಿಣ ಕನ್ನಡದವರಾದ, ಕೆನಡಾದ ಹೆಸರಾಂತ ವ್ಲಾಗರ್ ಪ್ರಜ್ಞಾ ಜೈನ್ ಅವರು “ಮಹಿಮಾ” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘುರಾಮ್(ಮಾಲ್ಗುಡಿಡೇಸ್), ಬಿಯೆಟಾ ನಿಕೋಲ್ ಆಮ್ರೆ, ಕಾವ್ಯಶ್ರೀ, ಪಾಲ್ ಹಾಪ್ಕಿನ್ಸ್, ಮಂಜುಳಾ ರಾಣೆ ಮುಂತಾದವರು ತಾರಾಬಳಗದಲ್ಲಿದ್ದಾರೆ.