LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅನಘಳ ಯೋಗ ಭಂಗಿಗಳ ಅನರ್ಘ್ಯ ನೃತ್ಯ`ದರ್ಶನ'

ಶಿಲಾಬಾಲಿಕೆ ಮೈಮಾಟದ ಅನಘಾ ಅಂದು ರಂಗದ ಮೇಲೆ ಪ್ರದರ್ಶಿಸಿದ ಅದೆಷ್ಟು ಮೋಹಕ ಯೋಗದ ಭಂಗಿಗಳು ಹಾಗೆಯೇ ಮನಃಪಟಲದ ಮೇಲೆ ಅಚ್ಚೊತ್ತಿ ನಿಂತಿದ್ದವು. ಭಾವಸ್ಫುರಣ ಮೊಗ-ಕಾಂತಿಯುಕ್ತ ಕಣ್ಣುಗಳು, ನಿರಾಯಾಸ ಹರಿದಾಡಿದ ದ್ರವೀಕೃತ ಚಲನೆಗಳು, ಅಂಗಶುದ್ಧ ಅಚ್ಚುಕಟ್ಟಾದ ನರ್ತನಗಳಿಂದ ಅವಳೊಬ್ಬ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದ್ದಳು.

`ಕಲಾಸಿಂಧು ಅಕಾಡೆಮಿ'ಯ ಗುರು ವಿದುಷಿ ಪೂರ್ಣಿಮಾ ಗುರುರಾಜ ಅವರ ನುರಿತ ತರಬೇತಿಯಲ್ಲಿ ಮಿಂದು ಮೈದಳೆದ ಕಲಾಶಿಲ್ಪ ಅನಘಾ ತನ್ನ `ರಂಗಾರ್ಪಣೆ'ಯಲ್ಲಿ ವರ್ಚಸ್ಸಿನಿಂದ ನಿರಾಯಾಸವಾಗಿ ನರ್ತಿಸಿ ನೆರೆದ ಕಲಾರಸಿಕರನ್ನು ಮುದಗೊಳಿಸಿದಳು. ಸುಮನೋಹರ ನೃತ್ಯ ಸಂಯೋಜನೆಗಳಿಂದ ಕೂಡಿದ್ದ, ಮೆರುಗಿನ ನೃತ್ತಗಳು, ಆಹ್ಲಾದಕರ ಆಂಗಿಕಾಭಿನಯ, ಹೃದ್ಯವಾದ ಸಮತೋಲನದ ಅಭಿನಯ ಅವಳು ಸಾಕಾರಗೊಳಿಸಿದ ಎಲ್ಲ ಕೃತಿಗಳಲ್ಲೂ ಮಿಂಚಿತ್ತು.

ಮನಸೆಳೆದ `ಪುಷ್ಪಾಂಜಲಿ'ಯಿಂದ ಕಣ್ಸೆಳೆದ ಸರಸ್ವತೀ ಸ್ತುತಿ, ಕಾಂಚೀಪುರದ ಶಕ್ತಿಪೀಠದ ಕಾಮಾಕ್ಷಿಯ ಶೋಭಾಯಮಾನ ವ್ಯಕ್ತಿತ್ವ-ಮಹಿಮೆಗಳನ್ನು ದರ್ಶನ ಮಾಡಿಸಿದ ಶ್ಯಾಮಾಶಾಸ್ತ್ರಿಗಳ ಭೈರವಿ `ಸ್ವರಜತಿ'ಯಲ್ಲಿ `ಅಂಬಾ ಕಾಮಾಕ್ಷಿ' ಕೃತಿಯು ಅನಘಳ ದೈವೀಕ ನರ್ತನದಲ್ಲಿ ಅನುಪಮವಾಗಿ ಸಾಕ್ಷಾತ್ಕಾರವಾಯಿತು.ಮುಂದೆ- ಸ್ವಾಮಹಾರಾಜ ಸ್ವಾತಿ ತಿರುನಾಳರ ಅಮೋಘ ರಚನೆ `ಸರಸಿಜನಾಭ...'ನ ಮಹೋನ್ನತ ಮಹಿಮೆಗಳನ್ನು ಸಂಚಾರಿ ಕಥಾನಕಗಳ ಮೂಲಕ ಅನಘಾ, ತನ್ನ ಸೌಮ್ಯ ಮುಖಭಾವದ ಘನ ಸಾಂದ್ರತೆಯಲ್ಲಿ ಗಾಢ ಅನುಭೂತಿಯನ್ನು ದಾಟಿಸುವ ದಿವ್ಯಾನುಭಾವ ಕಲಾರಸಿಕರಿಗೆ ದತ್ತವಾಯಿತು.

ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ಹಾಡುವ `ತಾನವರ್ಣ' ವನ್ನು ನೃತ್ಯಕ್ಕೆ ಅಳವಡಿಸಿದ್ದು ದೊಡ್ಡ ಸವಾಲೇ ಸರಿ. ಪ್ರಯೋಗಶೀಲ ಮನೋಭಾವದ ಗುರು ಪೂರ್ಣಿಮಾ, ಇಲ್ಲಿ ಸ್ವರವಿನ್ಯಾಸವೇ ಅಧಿಕವಾಗಿರುವ ಸಂದರ್ಭದಲ್ಲಿ ಅದಕ್ಕೆ ಪೂರಕವಾದ ರಮ್ಯ ನೃತ್ತಗಳನ್ನು ಜೋಡಿಸಿರುವುದು ಶ್ಲಾಘನೀಯ ಬಗೆಯಲ್ಲಿ ಅಭಿವ್ಯಕ್ತವಾಯಿತು. ಮೂಲ ಗುರುಪರಂಪರೆಯನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಶಿಷ್ಯ ಪರಂಪರೆಗೆ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೀರ್ತಿ ಪೂರ್ಣಿಮಾಗೆ ಸಲ್ಲಬೇಕು. ಯಾಂತ್ರಿಕವಲ್ಲದ ಶೊಲ್ಲುಕಟ್ಟುಗಳ ಸ್ಫುಟ ನಟುವಾಂಗದ ನಿರೂಪಣೆಯೂ ಸೊಗಸೆನಿಸಿತು.

ಅನಂತರ- ಶ್ರೀ ಪದ್ಮಚರಣ್ ರಚನೆಯ `ಪ್ರದೋಷ ಸಮಯದಿ...' ಶಿವನ ಆನಂದ ತಾಂಡವವನ್ನು ಕಲಾವಿದೆ ತನ್ನ ಪ್ರಖರವಾದ ನೃತ್ತ ಸಮ್ಮೇಳ ಪಲುಕುಗಳಿಂದ - ಢಮರುಗ ಹಿಡಿದು ನರ್ತಿಸುವ ಅಮೋಘ ಯೋಗದ ಭಂಗಿಗಳ ಆಹ್ಲಾದ ಸಿಂಚನಗೊಳಿಸುತ್ತ , ಮಂಡಿ ಅಡವು, ರಂಗಾಕ್ರಮಣದ ರೋಮಾಂಚಕ ಚಲನೆಗಳನ್ನು ಪ್ರದರ್ಶಿಸಿ ವಿಸ್ಮಯಗೊಳಿಸಿದಳು. ಮುಂದೆ- ಹೆಚ್ಚು ಕೇಳರಿಯದ ಕನಕದಾಸರ ಅಪರೂಪದ ಕೃತಿ- `ಎನ್ನ ಕಂದ ಹಳ್ಳಿಯ ಹನುಮಾ..' ಎಂದು ಅಶೋಕವನದಲ್ಲಿ ಧುತ್ತನೆ ಕಾಣಿಸಿಕೊಂಡ ರಾಮನ ಭಂಟ ಹನುಮನನ್ನು ಕಂಡು ಸೀತೆ, ಆತ್ಮೀಯ ಧಾಟಿಯಲ್ಲಿ ವಿಚಾರಿಸಿಕೊಳ್ಳುವ ಪರಿ ಸ್ವಾರಸ್ಯವಾಗಿದೆ. ಪರೋಕ್ಷವಾಗಿ ಶ್ರೀರಾಮನ ಯೋಗಕ್ಷೇಮದ ಸುತ್ತ ಪರಿಭ್ರಮಿಸುವ ಕಳೆದ ಘಟನೆಗಳ ಮೇಲೆ ಬೆಳಕುಚೆಲ್ಲುವ ಸೀತಾ ಮಾತೆಯಚೆಲ್ನುಡಿ ಆಪ್ತವಾಗಿ ದ್ದಷ್ಟೇ ಅನಘಳ ಅಭಿನಯವೂ ಹೃದಯಂಗಮವಾಗಿತ್ತು. ಅಂತ್ಯದಲ್ಲಿ ಪಂಚ ಘನರಾಗಗಳಲ್ಲಿ ಪ್ರುರಂದರ ದಾಸರನ್ನು ಸ್ತುತಿಸಿರುವ ವಿರಳವಾದ `ತಿಲ್ಲಾನ' ಅಚ್ಚುಕಟ್ಟಾಗಿ ಮೂಡಿಬಂದು, `ಅದಿವೋ ಅಲ್ಲದಿವೋ ಶ್ರೀ ಹರಿವಾಸಮು' ಮಂಗಳಕರ ಕೃತಿಯೊಂದಿಗೆ ಪ್ರಸ್ತುತಿ ಹೃದಯದಲ್ಲಿ ಅಚ್ಚೊತ್ತಿತು.

- ವೈ.ಕೆ.ಸಂಧ್ಯಾ ಶರ್ಮ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು