ತಿ.ನರಸೀಪುರ: ರೈತರ ಕುಂದು ಕೊರತೆ ಸಭೆಯಲ್ಲಿ ಸರ್ಕಾರಿ ಶಾಲೆಗಳ ನಿರ್ಲಕ್ಷ್ಯ, ಬಸ್ ಕೊರತೆ, ಜಲಜೀವನ್ ಮಿಷನ್ ಕಾಮಗಾರಿ ನಿರ್ಮಾಣದಲ್ಲಿ ಅಕ್ರಮ, ರೈತ ಸಾಮಗ್ರಿಗಳ ಕಳ್ಳತನ, ಬ್ಯಾಂಕ್ ಅಧಿಕಾರಿಗಳ ಉದ್ಧಟತನ, ಉದಾಸೀನ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಎಂದು ರೈತ ಮುಖಂಡರು ಆಗ್ರಹಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಹಶೀಲ್ದಾರ್ ಟಿ.ಜಿ ಸುರೇಶಾಚಾರ್ ಅಧ್ಯಕ್ಷತೆಯಲ್ಲಿ ನಡೆದ ರೈತರ ಕುಂದು ಕೊರತೆ ಸಭೆಯಲ್ಲಿ ರೈತರ ಸಮಸ್ಯೆಗಳ ಸುರಿಮಳೆ. ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ಇಂಧನ ಕೊರತೆ ಇರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕ್ಯಾನ್ ಮತ್ತು ಬಾಟಲಿಗಳಿಗೆ ಹಾಕುತ್ತಿಲ್ಲ. ವಾಹನಗಳನ್ನು ಪೆಟ್ರೋಲ್ ಬಂಕ್ ಹತ್ತಿರ ತಂದು ಇಂಧನ ಹಾಕಿಸಿಕೊಳ್ಳುವಂತೆ ಪೆಟ್ರೋಲ್ ಬಂಕ್ ಸನ್ನದ್ದುದಾರರು ಸೂಚನೆ ನೀಡುತ್ತಾರೆ. ಇದರಿಂದ ರೈತರು ತಮ್ಮ ಟ್ರ್ಯಾಕ್ಟರ್ ಗಳ ಬಳಕೆಗೆ ಡೀಸೆಲ್ ಸಿಗುತ್ತಿಲ್ಲ. ಈ ಬಗ್ಗೆ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರೈತರ ಟ್ರ್ಯಾಕ್ಟರ್ ಗಳಿಗೆ ಇಂಧನ ನೀಡುವಂತೆ ಸೂಚನೆ ನೀಡಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಸದ್ಯದ ಪರಿಸ್ಥಿತಿಯಲ್ಲಿ ಇಂಧನದ ಕೊರತೆ ಇರುವುದರಿಂದ ಪರಿಸ್ಥಿತಿಯನ್ನು ರೈತರು ಅರ್ಥೆಸಿಕೊಂಡು ವ್ಯವಸ್ಥೆ ಜತೆಗೆ ಸಾಗಬೇಕು.ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಪತ್ರ ವ್ಯವಹಾರ ಮಾಡಲಾಗುವುದು ಎಂದರು.ರೈತ ಸಂಘದ ಜಿಲ್ಲಾ ಮುಖಂಡ ಸುಜ್ಜಲೂರು ಚಂದ್ರಶೇಖರ್, ಗ್ರಾಮೀಣ ಪ್ರದೇಶದಲ್ಲಿ ರೈತರ ಪಂಪ್ ಸೆಟ್ ಮತ್ತು ವೈರ್ ಗಳನ್ನು ಕಳ್ಳ ಕಾಕರು ಕಳ್ಳತನ ಮಾಡುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು. ಜತೆಗೆ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ, ಕಳವು ಪ್ರಕರಣಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ರೈತರಿಗೆ ತೊಂದರೆಯಾಗದAತೆ ನಿಗಾ ವಹಿಸಲಾಗುವುದು. ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲ ಗಸ್ತು ಪೊಲೀಸ್ ನಿಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಲಭ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಂಡು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬದ್ದವಾಗಿರುವುದಾಗಿ ಅವರು ಹೇಳಿದರು.
ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್ ಮಾತನಾಡಿ, ಪಶು ಸಂಗೋಪನಾ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜಾನುವಾರು ಹುಷಾರು ತಪ್ಪಿರುವ ಬಗ್ಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರು. ಇದಕ್ಕೆ ತಾಲೂಕು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಲ್ಲಿಕಾರ್ಜುನ ಮಾತನಾಡಿ, ಇಲಾಖೆ ರೈತ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಜಾನುವಾರುಗಳಿಗೆ ಹುಷಾರು ತಪ್ಪಿದ ತುರ್ತು ಸಂದರ್ಭದಲ್ಲೂ ಜಾನವಾರು ಸಂಚಾರಿ ಆಸ್ಪತ್ರೆ 1962ಕ್ಕೆ ಕರೆ ಮಾಡಬೇಕು. ಅದರಿಂದ ಉತ್ತಮ ಸ್ಪಂದನೆ ಸಿಗಲಿದೆ.ಅಲ್ಲದೆ ತಾಲೂಕಿನ ವ್ಯಾಪ್ತಿಯಲ್ಲಿ ಹಸುಗಳಿಗೆ ಗುರುತಿನ ಐಡಿ ಅಳವಡಿಸಲಾಗುತ್ತಿದೆ. ಜತೆಗೆ ಲಸಿಕೆಯನ್ನೂ ನೀಡಲಾಗುತ್ತಿದೆ ಎಂದರು.ರೈತ ಮುಖಂಡ ಶಾಂತಮೂರ್ತಿ ಮಾತನಾಡಿ ಚಾಮರಾಜನಗರ ಮತ್ತು ಕೊಳ್ಳೇಗಾಲದಿಂದ ಬರುವ ಕೆಎಸ್ಆರ್ಟಿಸಿ ಬಸ್ಸುಗಳು ಮಾಡ್ರಳ್ಳಿ ಮತ್ತು ಕುರುಬೂರು ಬಳಿ ಇರುವ ಬಸ್ ನಿಲ್ದಾಣಗಳಲ್ಲಿ ಬಸ್ಸುಗಳನ್ನು ನಿಲ್ಲಿಸುವುದಿಲ್ಲ ಇದರಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ರೈತರು ಹಾಗೂ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲುವಂತೆ ಮಾಡಬೇಕು ಇಲ್ಲವಾದಲ್ಲಿ ರಸ್ತೆ ತಡೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಈ. ರಾಜು ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಯೋವೃದ್ಧರಿಗೆ ಸರ್ಕಾರ ನೀಡುತ್ತಿದ್ದ ಸಂಧ್ಯಾಸುರಕ್ಷಾ ಆದಾಯಮಿತಿಯನ್ನು ನೆಪ ನೀಡಿ ರದ್ದು ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಸರ್ಕಾರ ಉಯೋಗವಿಲ್ಲದ ಕಾರ್ಯಕ್ರಮಗಳಿಗೆ ಸುಖಾಸುಮ್ಮನೆ ಹಣ ಪೋಲು ಮಾಡುತ್ತಿದೆ. ಆದರೆ, ಬಡ ಮತ್ತು ವಯೋವೃದ್ಧ ಜನರಿಗೆ ನೀಡುವ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ರದ್ದು ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಅಲ್ಲದೆ ಗೃಹಲಕ್ಷ್ಮೀ ಹಣ ಮತ್ತು ಸಾಮಾಜಿಕ ಭದ್ರತೆ ಯೋಜನೆಯಿಂದ ಫಲಾನುಭವಿಗಳ ಖಾತೆಗೆ ಜಮೆಯಾದ ಹಣವನ್ನು ಬ್ಯಾಂಕ್ ಸಾಲಗಳಿಗೆ ವಜಾ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು
ತಾಪಂ ಪ್ರಭಾರ ಇಒ ಡಾ.ರಂಗಸ್ವಾಮಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೆ. ಶಿವರಾಜು,ಪಿಡಬ್ಲೂ÷್ಯಡಿ ಎಇಇ ಸತೀಶ್ ಚಂದ್ರನ್, ಉಪ ತಹಸೀಲ್ದಾರ್ ರಾಜಾಕಾಂತ್ , ಅರೋಗ್ಯಾಧಿಕಾರಿ ಡಾ.ರವಿಕುಮಾರ್, ಸೆಸ್ಕ್ ಎಇಇ ವೀರೇಶ್, ಡಾ. ಮಲ್ಲಿಕಾರ್ಜುನಸ್ವಾಮಿ, ಬಿಸಿಯೂಟ ಸಹಾಯಕ ನಿರ್ದೇಶಕ ಪುಟಸ್ವಾಮಿ,ಕೃಷಿ ಇಲಾಖೆ ರಾಘವೇಂದ್ರ, ಶಾಲೂ,ರೈತ ಸಂಘದ ತಾಲೂಕು ಉಪಾಧ್ಯಕ್ಷ ತಲಕಾಡು ದಿನೇಶ್, ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ,, ಗೌರವ ಅಧ್ಯಕ್ಷ ಹಲವಾರ ಮಹದೇವಸ್ವಾಮಿ, ಕಳ್ಳಿಪುರ ನಾರಾಯಣ್, ಕೊತ್ತೇಗಾಲ ನಂಜುAಡಸ್ವಾಮಿ ಇದ್ದರು.
ಕುಂದು ಕೊರತೆ ಸಭೆಯಲ್ಲಿ ರೈತರ ಸಮಸ್ಯೆಗಳ ಸುರಿಮಳೆ



