ತಿ.ನರಸೀಪುರ: ಮನುಷ್ಯನ ಬಾಯಿಯ ಆರೋಗ್ಯವು ದೇಹದ ಒಟ್ಟಾರೆ ಆರೋಗ್ಯ ಸ್ಥಿತಿಯ ಕನ್ನಡಿಯಿದ್ದಂತೆ. ಇತರ ಆರೋಗ್ಯ ಸಮಸ್ಯೆಗಳ ಮೇಲೆ ಗಮನ ಹರಿಸುವಂತೆಯೇ, ದಂತ ಮತ್ತು ಬಾಯಿ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕಿದೆ. ಹೆಚ್ಚಿನ ಸಂದರ್ಭಗಳಲ್ಲಿ ಬಾಯಿ ಮತ್ತು ದಂತ ಸಮಸ್ಯೆಗಳನ್ನು ನಿರ್ಲಕ್ಷ÷್ಯ ಧೋರಣೆಯಿಂದ ಕಾಣುವುದೇ ದೊಡ್ಡ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ” ಎಂದು ತುರುಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಮಮತಾ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ತುರಗನೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇನ್ಸಿ÷್ಟಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯ `ಧರಣಿ’ ಯೋಜನೆಯಡಿಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ರಾಮಯ್ಯ ದಂತ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ದಂತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತುರುಗನೂರು ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದ ಐದು ಗ್ರಾಮಗಳ ಒಟ್ಟು ಜನಸಂಖ್ಯೆ 8,435 ಇದ್ದು, ಧರಣಿ ಯೋಜನೆಯಡಿಯಲ್ಲಿ ನಿಯಮಿತವಾಗಿ ತಿಂಗಳಿಗೊಮ್ಮೆ ಆಯೋಜಿಸಲಾಗುತ್ತಿರುವ ಈ ಉಚಿತ ದಂತ ಆರೋಗ್ಯ ತಪಾಸಣಾ ಶಿಬಿರದಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಾಗಿದೆ.
ಶಿಬಿರದಲ್ಲಿ ಶಾಲಾ ಮಕ್ಕಳು, ಹಿರಿಯ ನಾಗರೀಕರೂ, ಮಹಿಳೆಯರೂ ಸೇರಿದಂತೆ ಎಲ್ಲರಿಗೂ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಲಭ್ಯವಿದೆ. ಇದಲ್ಲದೆ, ಈ ಯೋಜನೆಯಡಿಯಲ್ಲಿ ತಳಮಟ್ಟದಲ್ಲಿ ಕೆಲಸ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರಿಗೆ ದಂತ ಆರೈಕೆ, ಬಾಯಿ ಆರೈಕೆ ಹಾಗೂ ಬಾಯಿ ಮತ್ತು ಗಂಟಲು ಕ್ಯಾನ್ಸರ್ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಿ, ಸಮುದಾಯ ಮಟ್ಟದಲ್ಲಿ ಗುಣಮಟ್ಟದ ಸೇವೆ ನೀಡಲು ಧರಣಿ ಯೋಜನೆ ಅನುಕೂಲ ಮಾಡಿಕೊಟ್ಟಿದೆ. ದಂತ ಸಮಸ್ಯೆಗಳಿರುವ ಸಾರ್ವಜನಿಕರು ಸಲಹೆ ಹಾಗೂ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೆಡೆಗೆ ಮೊದಲಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ ಎಂದರು.
ಧರಣಿ ಯೋಜನೆಯ ಸಂಶೋಧನಾಧಿಕಾರಿಗಳಾದ ಡಾ. ರವೀನಾ ರವೀಂದ್ರನ್ ಮಾತನಾಡಿ, “ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ದಂತ ಆರೋಗ್ಯ ಸೇವೆಗಳನ್ನು ಹೇಗೆ ತಲುಪಿಸಬಹುದು ಮತ್ತು ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ದಂತ ಚಿಕಿತ್ಸೆಯನ್ನು ಹೇಗೆ ಬಲಪಡಿಸಬಹುದು ಎಂಬ ಉದ್ದೇಶದಿಂದ ಈ ಸಂಶೋಧನೆಯನ್ನು ಆರಂಭಿಸಲಾಗಿದೆ. ಸಂಶೋಧನೆಯ ಭಾಗವಾಗಿ ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲ್ಲೂಕು ಹಾಗೂ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎರಡೂ ತಾಲ್ಲೂಕುಗಳಲ್ಲಿ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಆಯ್ದುಕೊಂಡು, ಕಳೆದ ಒಂದು ವರ್ಷದಿಂದ ತಿಂಗಳಿಗೊಮ್ಮೆಯAತೆ ವಿಶೇಷ ದಂತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು” ಎಂದರು.
ಮುAದುವರಿದು ಮಾತನಾಡಿದ ಅವರು, “ಇಲ್ಲಿಯವರೆಗೂ ಬೆಂಗಳೂರಿನ ರಾಮಯ್ಯ ದಂತ ವೈದ್ಯಕೀಯ ಕಾಲೇಜು ಹಾಗೂ ಜೆ.ಎಸ್.ಎಸ್ ದಂತ ವೈದ್ಯಕೀಯ ಕಾಲೇಜು ಮೈಸೂರು ರವರ ಸಹಯೋಗದೊಂದಿಗೆ ಈ ಶಿಬಿರಗಳ ಮೂಲಕ 1,500ಕ್ಕೂ ಹೆಚ್ಚಿನ ಜನರ ತಪಾಸಣೆ ನಡೆಸಿ, 500ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹಲ್ಲು ಸ್ವಚ್ಛಗೊಳಿಸುವಿಕೆ (ಸ್ಕೇಲಿಂಗ್), ಹಲ್ಲು ಕೀಳುವುದು ಮತ್ತು ಹಲ್ಲು ತುಂಬಿಸುವ (ಫಿಲ್ಲಿಂಗ್) ರೋಗನಿವಾರಕ ಚಿಕಿತ್ಸೆಗಳನ್ನು ಒದಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ 400ಕ್ಕೂ ಹೆಚ್ಚು ರೋಗಿಗಳನ್ನು ಮುಂದಿನ ಉನ್ನತ ಚಿಕಿತ್ಸೆಗಾಗಿ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿದೆ. ಪ್ರಾಯೋಗಿಕ ಯೋಜನೆಯ ಅಂತಿಮ ಅಂತದ ನಂತರ, ಈ ಯೋಜನೆಯನ್ನು ಎರಡೂ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ವಿವರ ನೀಡಿದರು.
ಶಿಬಿರದಲ್ಲಿ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ದಂತ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಯಿತು.
ಇಂದಿನ ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಜನ ಶಿಬಿರದ ಸದುಪಯೋಗ ಪಡೆದುಕೊಂಡರು.ಶಿಬಿರಕ್ಕೆ ಆಗಮಿಸಿದ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ದಂತ ರಕ್ಷಣಾ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ರವೀನಾ ರವಿಚಂದ್ರನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಇನ್ಸಿ÷್ಟಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಬೆಂಗಳೂರಿನ ರಾಮಯ್ಯ ದಂತ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರ ತಂಡ ಉಪಸ್ಥಿತರಿದ್ದರು.
ಸಣ್ಣ ನಿರ್ಲಕ್ಷ್ಯ ಧೋರಣೆ ದೊಡ್ಡ ಖಾಯಿಲೆಗಳಿಗೆ ದಾರಿ: ಡಾ.ಮಮತಾ



