ಮಹದೇವಪುರ: ಕನಿಷ್ಠ ವೇತನ ಜಾರಿಗಾಗಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಮೇ 30 ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದರು.
ಮಂಡೂರು ಸಮೀಪದ ಬೊಮ್ಮೇನಹಳ್ಳಿ ಯಲ್ಲಿರುವ ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನವನ್ನು 2022 ರಲ್ಲೇ ಪುನರ್ವಿಮರ್ಶೆಗೆ ಒಳಪಡಿಸಬೇಕಿತ್ತು. ಹಿಂದೆ ಇದ್ದ ಬಿಜೆಪಿ ಸರ್ಕಾರವು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅವೈಜ್ಞಾನಿಕವಾಗಿ ಅತಿಕಡಿಮೆ ಮಟ್ಟದ ವೇತನ ಪರಿಷ್ಕರಣೆ ಮಾಡಿತ್ತು, ಈ ಅವೈಜ್ಞಾನಿಕವಾದ ವೇತನ ಪರಿಷ್ಕರಣೆಯನ್ನು ಹೈಕೋರ್ಟ್ ರದ್ದುಗೊಳಿಸಿ ವೈಜ್ಞಾನಿಕ ಕನಿಷ್ಟ ವೇತನ ಪರಿಷ್ಕರಣೆ ಮಾಡುವಂತೆ ಆದೇಶ ನೀಡಿತ್ತು, ಆದರೆ ರಾಜ್ಯ ಸರ್ಕಾರವು ಜಾರಿಗೆ ತರದೆ ವಿಳಂಬ ಮಾಡುತ್ತಿದೆ.
ಕಾರ್ಮಿಕರಿಗೆ ತಿಂಗಳಿಗೆ 36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು, ಕೇವಲ 21 ಸಾವಿರ ವೇತನದಲ್ಲಿ ಕಾರ್ಮಿಕರ ಕುಟುಂಬಗಳು ಜೀವನ ನಡೆಸಲು ಅಸಾಧ್ಯವಾಗಿದೆ. ಕನಿಷ್ಠ ವೇತನ ಪರಿಷ್ಕರಣೆ ಮಾಡುವಂತೆ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಸಿಐಟಿಯು ಒತ್ತಾಯಿಸಿದೆ, ಆದರೆ ಹಲವು ವರ್ಷ ಕಳೆದರೂ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿಲ್ಲ. ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಜಾರಿಗೆ ತರುವ ಮೂಲಕ ನೌಕರರ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸಕ್ಕೆ ಕೈಹಾಕಿದೆ, ಇದನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರಬಾರದೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಕೇಂದ್ರ ಸಮಿತಿ ಸದಸ್ಯ ಎಮ್.ಶ್ರೀನಿವಾಸ್ ಮಾತನಾಡಿ ಮೇ 30 ರಂದು ನೌಕರರಿಗೆ ತಿಂಗಳಿಗೆ 36 ಸಾವಿರ ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವಂತೆ ಸಂಘಟನೆ ಕರೆ ನೀಡಿದೆ, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಹೋರಾಟದಲ್ಲಿ ಭಾಗವಹಿಸುವ ಮೂಲಕ ಹೋರಾಟ ಯಶಸ್ವಿಗೊಳಿಸಬೇಕು ಎಂದರು
ಕನಿಷ್ಠ ವೇತನ ಪುನರ್ವಿಮರ್ಶೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಕಾರ್ಮಿಕರಿಂದ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇವೆ ಎಂದರು.
ಇದೇ ವೇಳೆ ತಾಲ್ಲೂಕು ಪಂಚಾಯತಿ ಇ,ಒ ವಸಂತ್ ಕುಮಾರ್ ಅವರಿಗೆ ನೌಕರರಿಗೆ ಅನುಕಂಪದ ಆಧಾರದ ಅನುಮೋದನೆ, ಇ ಎಸ್ ಐ ಕಾರ್ಡ್, ಭವಿಷ್ಯ ನಿಧಿ,ಸೇವಾ ಪುಸ್ತಕ ಬರೆಯುವುದು ಹಾಗೂ ನೌಕರರ ಇ ಹಾಜರಾತಿಯನ್ನು ಮೊಬೈಲ್ ಆಪ್ ನಲ್ಲಿ ಅಳವಡಿಸಿಕೊಡುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ವೆಂಕಟರಾಜು, ತಾಲ್ಲೂಕು ಅಧ್ಯಕ್ಷ ಚೇತನ ಕುಮಾರ್, ತಾಲ್ಲೂಕು ಪಂಚಾಯತಿ ಕಾರ್ಯದರ್ಶಿ ಎಮ್.ಹರೀಶ್, ತಾಲ್ಲೂಕು ಖಜಾಂಚಿ ಎಸ್.ಪಿ.ಮಂಜುನಾಥ್, ಉಪಾಧ್ಯಕ್ಷೆ ಕೃಷ್ಣಮ್ಮ ಮತ್ತಿತರರು ಹಾಜರಿದ್ದರು.
`ತಿಂಗಳಿಗೆ 36 ಸಾವಿರ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಮೇ 30 ರಂದು ಹೋರಾಟ’



