ರೈತರ ಮಕ್ಕಳಿಗೆ ಹೆಣ್ಣು ಸಿಗೋಲ್ಲ ಎಂಬುದು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದು, ಈಗಲೂ ವಿಷಯ ಚಾಲ್ತಿಯಲ್ಲಿದೆ. ಇಂತಹುದೇ ಅಂಶಗಳನ್ನು ಬಳಸಿಕೊಂಡು ‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’ ಎಂಬ ಸಿನಿಮಾವೊಂದು ಸದ್ದಿಲ್ಲದೆ ಮುಗಿದು ಬಿಡುಗಡೆಗೆ ಸಿದ್ದವಾಗಿದೆ.ಕೆಂಪುರಾಮ್ ಹೆಡಿಯಾಲ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡುವ ಜತೆಗೆ ಮೆಲ್ಲುಲಿಗಾನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಅನ್ನದಾತನ ಮಕ್ಕಳಿಗೆ ವಧು ಸಿಗೋಲ್ಲ ಎಂಬುದು ರಾಜ್ಯವ್ಯಾಪ್ತಿ ಮಾರ್ದನಿಸಿ ಅವರ ಬದುಕಿನಲ್ಲಿ ತಲ್ಲಣವನ್ನು ಉಂಟು ಮಾಡುತ್ತಿದೆ. ಚಿತ್ರವು ವಿಭಿನ್ನ ಹಾಗೂ ವಿಶಿಷ್ಟವಾದ ಅನುಭವಗಳನ್ನು ತೋರಿಸಿಕೊಡುತ್ತದೆ. ಅವರ ಬದುಕಿನ ಸೂಕ್ಷತೆಗಳು, ಅಲ್ಲಿನ ಗಂಭೀರ ಅಂಶಗಳು ಗಮನ ಸೆಳೆದು, ಬುದ್ದಿ, ಭಾವ ಚಿತ್ತ ಜಾಗೃತಗೊಳ್ಳುವಂತೆ ಮಾಡುತ್ತಾ, ನೋಡುಗರ ಮನಸ್ಸನ್ನು ಒಳಹೊಕ್ಕಿಸಿ, ಸನ್ನಿವೇಶಗಳಲ್ಲಿ ಕಾಣುವ ಪಾತ್ರಗಳು ನಮ್ಮ ಜೀವನದ ಪ್ರತಿಬಿಂಬವಾಗುವಂತೆ ಮಾಡುತ್ತದೆ. ಗೆಲ್ಲುತ್ತಾ ಹೋಗುವವರು ಇತಿಹಾಸ ಸೃಷ್ಟಿಸುತ್ತಾರೆ. ಆದರೆ ಸೋತು ಗೆಲ್ಲುವವರು ಇತಿಹಾಸವನ್ನು ಬದಲಾಯಿಸುತ್ತಾರೆ ಎನ್ನುವಂತ ತೂಕದ ಸಂದೇಶವನ್ನು ಹೇಳಲಾಗಿದೆ.
ಬಹುತೇಕ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ತಾರಾಗಣದಲ್ಲಿ ಜಗದೀಶ್ ಮೂಕ, ದಿವ್ಯಶ್ರೀ, ಜೈ ಅಮೋಘದಾಸ್, ಅಗಸ್ತ್ಯ ಪ್ರೇಮ್, ಸಂತೋಷ್ ಜೋಗುಳ್, ಅಶ್ವಿನಿ ಮುಂತಾದವರು ನಟಿಸಿದ್ದಾರೆ.
ಸಂಗೀತ-ಛಾಯಾಗ್ರಹಣ-ಸಂಕಲನ ರೋಹನ್.ಎಸ್.ದೇಸಾಯಿ, ಸಾಹಸ ಸಂತೋಷ್ ರಾಥೋಡ್, ನೃತ್ಯ ಅಕುಲ್ ಮಾಸ್ಪರ್-ಅಜಯ್ ಜೈಕೃಷ್ಣ-ಸಾಕ್ಷಿ ಅವರದಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ರೈತರ ಮಕ್ಕಳಿಗೆ ಹೆಣ್ಣು ಕೊಡಿ ಚಿತ್ರಕ್ಕೆ ಸಿಕ್ಕಿತು ಯುಎ ಪ್ರಮಾಣ ಪತ್ರ



