ದೆಹಲಿ: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿ ಸರಿಯಾಗಿ ಒಂದು ವರ್ಷ ಕಳೆದಿದೆ. ಆದರೆ, ಅವರ ಆ ಹಠಾತ್ ನಿರ್ಧಾರದ ಹಿಂದಿನ ಅಸಲಿ ಕಾರಣ ಮಾತ್ರ ಇಂದಿಗೂ ನಿಗೂಢವಾಗಿತ್ತು. ಈಗ ಆರ್ಸಿಬಿ ಪಾಡ್ಕಾಸ್ಟ್ನ ಹೊಸ ಸಂಚಿಕೆಯಲ್ಲಿ ಸ್ವತಃ ಕೊಹ್ಲಿ ಅವರೇ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಟೆಸ್ಟ್ ನಿವೃತ್ತಿಯ ಹಿಂದಿನ ಕಹಿ ಸತ್ಯಗಳು, ಪ್ರಸ್ತುತ ಮ್ಯಾನೇಜ್ಮೆಂಟ್ ವಿರುದ್ಧದ ಅಸಮಾಧಾನ ಮತ್ತು 2027ರ ಏಕದಿನ ವಿಶ್ವಕಪ್ನಲ್ಲಿ ಆಡುವ ಕುರಿತು ಅವರು ಹಾಕಿರುವ ಕಠಿಣ ಷರತ್ತುಗಳ ಸಂಪೂರ್ಣ ವಿವರ ಇಲ್ಲಿದೆ.ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ತಮ್ಮ ಹಠಾತ್ ನಿವೃತ್ತಿಯ ಹಿಂದಿನ ಅಸಲಿ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡಿದ ಕೊಹ್ಲಿ, ತಂಡದ ಒಳಗಿನ ಗೊಂದಲಮಯ ವಾತಾವರಣ ಮತ್ತು ಗೌರವದ ಕೊರತೆಯೇ ತಮ್ಮ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಪರೋಕ್ಷವಾಗಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಿದ್ದರು. ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಆ ದಿನಗಳನ್ನು ನೆನೆದ ಕೊಹ್ಲಿ, “ನನ್ನ ಮೇಲೆ ಮತ್ತು ನನ್ನ ಆಟದ ಮೇಲೆ ನಂಬಿಕೆ ಇಲ್ಲದ ವಾತಾವರಣದಲ್ಲಿ ನನಗೆ ಮುಂದುವರಿಯಲು ಸಾಧ್ಯವಿರಲಿಲ್ಲ. ನನ್ನ ಸಾಮರ್ಥ್ಯ ಮತ್ತು ತಂಡಕ್ಕೆ ನಾನೇನು ಎಂಬ ಮೌಲ್ಯವನ್ನು ಪದೇ ಪದೇ ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದರೆ, ನಾನು ಆ ಜಾಗದಲ್ಲಿ ಇರಲು ಇಷ್ಟಪಡುವುದಿಲ್ಲ. ಟೆಸ್ಟ್ ಕ್ರಿಕೆಟ್ ಬಿಡುವುದು ಸುಲಭವಾಗಿರಲಿಲ್ಲ, ಆದರೆ ಆ ಸಮಯದಲ್ಲಿ ಆ ನಿರ್ಧಾರವೇ ಸರಿಯಾಗಿತ್ತು. ಏಕೆಂದರೆ ಎಲ್ಲಕ್ಕಿಂತ ಸ್ವಾಭಿಮಾನವೇ ಮುಖ್ಯ” ಎಂದು ನೇರವಾಗಿ ಹೇಳುವ ಮೂಲಕ ಗೌರವ ಸಿಗದ ಕಡೆ ಇರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.ಇದರೊಂದಿಗೆ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸಿಗಬೇಕಾದ ಗೌರವ ಸಿಗುತ್ತಿರಲಿಲ್ಲ ಎಂಬುದು ಬಹಿರಂಗವಾಗಿದೆ. ಅಲ್ಲದೆ ಟೆಸ್ಟ್ ನಿವೃತ್ತಿಗೆ ಮ್ಯಾನೇಜ್ಮೆಂಟ್ ಹಾಗೂ ಕೋಚ್ ಕಡೆಯಿಂದ ಅವರ ಮೇಲೆ ಒತ್ತಡಗಳಿದ್ದವು ಎಂಬ ಎಂಬ ವಿಚಾರ ಕೂಡ ಮತ್ತೆ ಮುನ್ನಲೆಗೆ ಬಂದಿದೆ. ಇದಾಗ್ಯೂ ಕಿಂಗ್ ಕೊಹ್ಲಿ 2027ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ. ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಕೊಹ್ಲಿ ತೀಕ್ಷ÷್ಣವಾಗಿ ಉತ್ತರಿಸಿದ್ದಾರೆ. “ನಾನು ನನ್ನ ವೃತ್ತಿಜೀವನದ ಅಂತಹ ಹಂತದಲ್ಲಿದ್ದೇನೆ, ಇಲ್ಲಿ ನಾನು ಯಾರಿಗೂ ನನ್ನ ಯೋಗ್ಯತೆ ಅಥವಾ ತಂಡಕ್ಕೆ ನನ್ನ ಮೌಲ್ಯ ಏನು ಎಂಬುದನ್ನು ಪದೇ ಪದೇ ಸಾಬೀತುಪಡಿಸುವ ಅಗತ್ಯವಿಲ್ಲ”.“ನನಗೆ 2027ರ ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸುವ ಆಸೆಯಿದೆ. ಆದರೆ, ಅದಕ್ಕೆ ಒಂದು ಷರತ್ತಿದೆ. ಪ್ರತಿ ವಾರವೂ ನನ್ನ ಬ್ಯಾಟಿಂಗ್ ಶೈಲಿಯನ್ನು ಪ್ರಶ್ನಿಸುವ ಅಥವಾ ಹೊಗಳುವ ವಾತಾವರಣ ನನಗೆ ಬೇಡ. ತಂಡದ ಮ್ಯಾನೇಜ್ಮೆಂಟ್ ನನ್ನನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಮತ್ತು ನನ್ನ ಅವಶ್ಯಕತೆ ಇದೆ ಎಂದು ಭಾವಿಸಿದರೆ ಮಾತ್ರ ನಾನು ಆಡುತ್ತೇನೆ” ವಿರಾಟ್ ಕೊಹ್ಲಿ ಎಂದಿದ್ದಾರೆ.ಒಟ್ಟಾರೆಯಾಗಿ ಹೇಳುವುದಾದರೆ ವಿರಾಟ್ ಕೊಹ್ಲಿ ಅವರ ಈ ಮಾತುಗಳು ಕೇವಲ ಒಂದು ಸಂದರ್ಶನವಲ್ಲ, ಅದು ಒಬ್ಬ ದಿಗ್ಗಜ ಆಟಗಾರನ ಸ್ವಾಭಿಮಾನದ ಧ್ವನಿ. ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದರೂ, ಐಪಿಎಲ್ 2026 ರಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಟೀಕಾಕಾರರಿಗೆ ಮೈದಾನದಲ್ಲೇ ಉತ್ತರ ನೀಡುತ್ತಿದ್ದಾರೆ.ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವ ಕೊಹ್ಲಿಗೆ ಈಗ ರನ್ ಗಳಿಸುವುದಕ್ಕಿಂತ ತಂಡದಲ್ಲಿ ಸಿಗುವ ಗೌರವ ಮತ್ತು ನಂಬಿಕೆ ಮುಖ್ಯವಾಗಿದೆ. ಮ್ಯಾನೇಜ್ಮೆಂಟ್ ಇವರ ಈ ಷರತ್ತಿಗೆ ಗೌರವ ನೀಡಿದರೆ, 2027ರ ವಿಶ್ವಕಪ್ನಲ್ಲಿ `ಕಿಂಗ್ ಕೊಹ್ಲಿ’ ಮತ್ತೊಮ್ಮೆ ಭಾರತಕ್ಕೆ ಕಿರೀಟ ತೊಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.



