ಬೆಂಗಳೂರು: ಕನ್ನಡದ ಹೆಸರಾಂತ ನಟ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ನಿಧನರಾಗಿ 14 ವರ್ಷಗಳು ಕಳೆದಿದ್ದು, ಅವರ 14ನೇ ವರ್ಷದ ಪುಣ್ಯ ತಿಥಿಯನ್ನು ಇಂದು ನೆರವೇರಿಸಲಾಗಿದೆ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.
ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ, ಅನ್ನದಾನದಂಥ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಪೂಜೆ ಮತ್ತು ದೀಪೋತ್ಸವದಂತಹ ಕಾರ್ಯಗಳು ನಡೆದಿವೆ.ಅಭಿಮಾನಿಗಳು ಬಂದು ವಿಷ್ಣುವರ್ಧನ್ ಸಮಾಧಿ ಬಳಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಪುಣ್ಯ ಸಮಾಧಿಗಾಗಿ ಅಭಿಮಾನಿಗಳು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಒಂದು ಕೆಎಸ್ಆರ್ಪಿ ತುಕಡಿ ಸ್ಥಳದಲ್ಲಿದೆ. ಅಭಿಮಾನಿಗಳು ಗಲಾಟೆ ಹಾಗು ಪ್ರತಿಭಟನೆ ಮಾಡಬಾರದು ಎನ್ನುವಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾಡಿದ್ದ ಶ್ರೀಧರ್ ಅವರು ಮಾತನಾಡಿದ್ದಾರೆ. `ಸಮಾಧಿ ಇಲ್ಲೇ ಆಗಬೇಕು ಎಂದು ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಅವರು ಹತ್ತು ಗುಂಟೆ ಜಾಗ ಕೊಡಬೇಕು. ಅಣ್ಣನ ಅಂತ್ಯಸಂಸ್ಕಾರ ಇಲ್ಲೇ ಆಗಿರೋದು. ಹೀಗಾಗಿ ಅವರು ಇಲ್ಲೇ ಇರಬೇಕು. ಎಲ್ಲಾ ಅಭಿಮಾನಿಗಳು ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಧರ್ ಕರೆ ನೀಡಿದ್ದಾರೆ. ವಿಷ್ಣು ಅಭಿಮಾನಿ ವೀರಪುತ್ರ ಶ್ರೀನಿವಾಸ್ ಅವರಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ.