ಬೆಂಗಳೂರು: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಾನಾ ಕಾರಣಗಳಿಗೆ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.ಸಿಲಿಕಾನ್ ಸಿಟಿಯಲ್ಲಿ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿರುವ ಡೆತ್ನೋಟ್ ಈಗ ಲಭ್ಯವಾಗಿದ್ದು, ಅದರಲ್ಲಿ ಪತಿ ಹಾಗೂ ಪತಿಯ ಅಕ್ಕನ ಕಿರುಕುಳದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.ಚಿಕ್ಕಮಗಳೂರು ಮೂಲದ ಶ್ವೇತಾ (25) ಮೃತಪಟ್ಟ ದುರ್ದೈವಿ. ಇವರು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು ಹಾಗೂ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಇವರು ಪ್ರೇಮ ವಿವಾಹವಾಗಿದ್ದರು.ಬೆಂಗಳೂರಿನ ಕಮಲನಗರದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಇವರ ಮದುವೆ ನಡೆದಿತ್ತು. ಮದುವೆ ಬಳಿಕ ಗಂಡ ಹೆಂಡತಿ ಒಟ್ಟಿಗೆ ನೆಲೆಸಿದ್ದಾರೆ. ಭಾನುವಾರ ರಾತ್ರಿ 11 ಗಂಟೆಗೆ ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ನೋಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಪ್ರೀತಿಸಿ ಮದುವೆಯಾಗಿ ನವವಿವಾಹಿತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ. ಗೌರಿಬಿದನೂರಿನ ಬೀರಮ್ಮನಹಳ್ಳಿ ಮೂಲದ ತನುಜಾ (31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಲಹಂಕದ ಮಾಯಸಂದ್ರ ನಿವಾಸಿಯಾದ ರವೀಂದ್ರ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ರವೀಂದ್ರ ಹಾಗೂ ತನುಜಾ ಇಬ್ಬರೂ ಕೆಲಸಕ್ಕೆ ಹೋಗುವಾಗ ಪರಿಚಯವಾಗಿದ್ದರು. ದಿನಗಳೆದಂತೆ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಪರಸ್ಪರ ಇಷ್ಟಪಟ್ಟು ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ, ಸ್ವಲ್ಪ ಸಮಯ ಕಳೆಯಲಿ, ಆಮೇಲೆ ನಮ್ಮ ಮನೆಯಲ್ಲಿ ವಿಷಯ ತಿಳಿಸುತ್ತೇನೆ ಎಂದು ಹೇಳಿದ್ದ ರವೀಂದ್ರ, ತನುಜಾಳನ್ನು ಯಲಹಂಕದ ಸಿಂಗಾಪುರದ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದ.ಭಾನುವಾರ (ಜು.13) ತನುಜಾ ತನ್ನ ಪತಿ ರವೀಂದ್ರನಿಗೆ ಫೋನ್ ಮಾಡಿ, ಮನೆಗೆ ಬರುವಂತೆ ಕರೆದಿದ್ದಳು. ಆದರೆ ರವೀಂದ್ರ, ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ತನುಜಾ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ, ನಾನು ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತು ವಿಷ ಕುಡಿದಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದಳು. ಇದರಿಂದ ಗಾಬರಿಗೊಂಡ ರವೀಂದ್ರ ತಕ್ಷಣವೇ ಬಸವನಹಳ್ಳಿಗೆ ಬಂದಿದ್ದ. ಸ್ಥಳದಲ್ಲಿ ತನುಜಾ ಬಿದ್ದಿರುವುದನ್ನು ಕಂಡು, ತಕ್ಷಣವೇ ಆಕೆಯನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಅಷ್ಟರಲ್ಲಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.ಸದ್ಯ ಈ ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಗಂಡನ ಮನೆಯವರ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಬೇಸತ್ತು ತಾಯಿ, ತನ್ನ ಮೂರು ವರ್ಷದ ಮಗನೊಂದಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿರುವ ಘಟನೆ ಘಟನೆ ಬೆಳಗಾವಿಯ ಪೀರನವಾಡಿಯಲ್ಲಿ ನಡೆದಿದೆ.ಪ್ರೇಮಾ ನಾಗೇಶ ತಳವಾರ (28) ಹಾಗೂ ಅವರ 3 ವರ್ಷದ ಪುತ್ರ ಭುವನ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರು ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿಯ ನಿವಾಸಿಗಳಾಗಿದ್ದಾರೆ.ಗಂಡನ ಮನೆಯವರು ಮಾಡಿದ್ದ ಸಾಲವನ್ನು ತೀರಿಸುವಂತೆ ಪ್ರೇಮಾ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಗಂಡ, ಅತ್ತೆ ಸೇರಿದಂತೆ ಕುಟುಂಬದ ಒಟ್ಟು 6 ಸದಸ್ಯರು ಪ್ರೇಮಾ ಅವರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದು, ಇದರಿಂದ ಮನನೊಂದ ಪ್ರೇಮಾ ಮಗನೊಂದಿಗೆ ತಾವೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಮೃತ ಪ್ರೇಮಾ ಅವರ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಅತ್ತೆ ಸುಶೀಲಾ ತಳವಾರ, ಪತಿ ನಾಗೇಶ ತಳವಾರ, ಮೈದುನ ಪರಶುರಾಮ ತಳವಾರ, ನೆಗ್ಯಾನಿ (ನಾದಿನಿ) ಸಂಗೀತಾ ತಳವಾರ, ಮರೇವ್ವಾ ತಳವಾರ ಹಾಗೂ ಶಾರದಾ ಕಲಕಾಂವಕರ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸದ್ಯ ತಾಯಿ-ಮಗನ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹನುಮನಹಳ್ಳಿಯಲ್ಲಿ ನವದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾದ ದಂಪತಿಗಳನ್ನು ಶರಣ್ಯ (20) ಹಾಗೂ ಗಿರೀಶ್ (28) ಎಂದು ತಿಳಿದುಬಂದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಶರಣ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಳಿಕ ಪತ್ನಿ ಆತ್ಮಹತ್ಯೆ ವಿಚಾರ ತಿಳಿದು ಪತಿ ಗಿರೀಶ್ ಸಹ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಅಷ್ಟೇ ಗಿರೀಶ್ ಮತ್ತು ಶರಣ್ಯ ಮದುವೆ ಆಗಿದ್ದರು. ಶನಿವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ರಾಜ್ಯಾದ್ಯಂತ ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿ ಆತ್ಮಹತ್ಯೆ



