ಬೆಂಗಳೂರು: ನಗರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (BIEC ) ಯಲ್ಲಿ ನವೆಂಬರ್ 02 ರಿಂದ ಮೂರುದಿನಗಳ ಕಾಲ ಆರನೇ ಇಂಡಿಯಾ ಮ್ಯಾನುಪ್ಯಾಕ್ಚರಿಂಗ್ ಶೋ IMS-2023 ಆಯೋಜನೆಗೊಂಡಿದ್ದು ಇದರಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಇಂಜಿನಿಯರಿಂಗ್ ಸಂಬಂಧಿತ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಡಿಫೆನ್ಸ್ ಪ್ರೊಡಕ್ಷನ್ ಇಲಾಖೆ ಪ್ರೋತ್ಸಾಹದಡಿಯಲ್ಲಿ ಲಘು ಉದ್ಯೋಗ ಭಾರತಿ,ಕರ್ನಾಟಕ ಮತ್ತು ಐಎಂಎಸ್ ಫೌಂಡೇಷನ್ ಸಹಭಾಗಿತ್ವದಲ್ಲಿ ನಗರದ BIEC ಯಲ್ಲಿ ಆಯೋಜನೆಗೊಂಡಿರುವ IMS-2023 ಬೃಹತ್ ಪ್ರದರ್ಶನವನ್ನು ನವೆಂಬರ್ 2 ರಂದು ಮಧ್ಯಾಹ್ನ 1ಗಂಟೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ ಎಂದು ಐಎಂಎಸ್ ಫೌಂಡೇಷನ್ ಛೇರ್ಮನ್ ಹೆಚ್ ವಿ ಎಸ್ ಕೃಷ್ಣ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ,ವಿದೇಶಾಂಗ ರಾಜ್ಯ ಸಚಿವ ವಿ ಮುರಳೀ ಧರನ್,ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ,ಐಎಂಎಸ್-2023 ಸಲಹಾ ಸಮಿತಿ ಅಧ್ಯಕ್ಷ ಬಾಬಾ ಕಲ್ಯಾಣಿ,ಐ&ಖಿ ಡಿಫೆನ್ಸ್ ಮುಖ್ಯಸ್ಥ ಅರುಣ್ ಟಿ.ರಾಮಚಂದಾನಿ ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಐಎಂಎಸ್ ಛೇರ್ಮನ್ ಕೃಷ್ಣ ಹೇಳಿದ್ದಾರೆ.
ನವೆಂಬರ್ 2,3 ಮತ್ತು 4 ರಂದು ನಡೆಯಲಿರುವ 6ನೇ ಭಾರತ ಮ್ಯಾನುಫ್ಯಾಕ್ಚರಿಂಗ್ ಶೋ IMS-2023 ಪ್ರದರ್ಶನದಲ್ಲಿ ಬಾಹ್ಯಾಕಾಶ ಮತ್ತು ಡಿಫೆನ್ಸ್ ಗೆ ಸಂಬಂಧಿಸಿದಂತೆ ಇತ್ತೀಚಿನ ತಂತ್ರಜ್ಞಾನಗಳು, ಯಂತ್ರೋಪಕರಣಗಳು, ಲಾಜಿಸ್ಟಿಕ್ಸ್, ಏರೋಸ್ಪೇಸ್ , ಡಿಫೆನ್ಸ್ ಇಂಜಿನಿಯರಿಂಗ್, ಆಟೊಮೇಷನ್ ಮತ್ತು ರೊಬೊಟಿಕ್ಸ್, ಎನರ್ಜಿ & ಪರಿಸರ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ಮತ್ತು ಜನರಲ್ ಇಂಜಿನಿಯರಿಂಗ್ ಕುರಿತಂತೆ ಪ್ರದರ್ಶನಗಳಿಗೆ ಇದು ವೇದಿಕೆಯಾಗಲಿದೆ. ದೇಶ,ವಿದೇಶಿ ಪ್ರತಿನಿಧಿಗಳು,ಕೇಂದ್ರ ಸರ್ಕಾರದ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಅದರ ಇಲಾಖೆಗಳು, ಮತ್ತು ಎಂಎಸ್ಎಂಇಗಳು ಭಾಗವಹಿಸಲಿವೆ.ಪ್ರದರ್ಶನದ ಜೊತೆಗೆ, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ.