ಬೇಲೂರು: ನಗರದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿAದ ಆಚರಿಸಿಕೊಂಡರು.ನಂತರ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ, ಸಹಾನುಭೂತಿ ಮತ್ತು ಸಹೋದರತ್ವದ ಮಹತ್ವವನ್ನು ಸಾರುವ ಪವಿತ್ರ ಹಬ್ಬವಾಗಿದೆ ಎಂದು ಹೇಳಿದರು.
ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಸಂದೇಶವು ಪ್ರತಿಯೊಬ್ಬರ ಜೀವನದಲ್ಲೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರೇರಣೆಯಾಗಿದೆ. ಬಡವರು, ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದರು.ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿ ಹೆಚ್ಚಬೇಕು. ಎಲ್ಲಾ ಧರ್ಮದ ಜನರು ಒಂದಾಗಿ ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ಸಮಾಜ ಅಭಿವೃದ್ಧಿಯ ದಾರಿಗೆ ಸಾಗುತ್ತದೆ ಎಂದು ತಿಳಿಸಿದರು.ನಗರದ ಜನತೆ ಎಲ್ಲರೂ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಸಹೋದರ ಭಾವದಿಂದ ಆಚರಿಸಬೇಕು ಎಂದು ಕರೆ ನೀಡುತ್ತಾ, ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.ಸಮಾಜದ ಮುಖಂಡ ಜಾಕೀರ್ ಪಾಷ ಬಕ್ರೀದ್ ಹಬ್ಬದ ಪ್ರಯುಕ್ತ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ, ನಂಬಿಕೆ ಮತ್ತು ಮಾನವೀಯತೆಯ ಸಂಕೇತವಾಗಿದೆ ಎಂದು ಹೇಳಿದರು.ಅಲ್ಲಾಹನು ಪ್ರವಾದಿ ಇಬ್ರಾಹಿಂ ಅವರಿಗೆ ತಾವು ಅತ್ಯಂತ ಪ್ರೀತಿಸುವ ವಸ್ತುವನ್ನು ತ್ಯಾಗ ಮಾಡುವಂತೆ ಆಜ್ಞೆ ನೀಡಿದ ಸಂದರ್ಭವನ್ನು ಅವರು ವಿವರಿಸಿದರು. ದೇವರ ಆಜ್ಞೆಯನ್ನು ಪಾಲಿಸುವ ದೃಢ ನಿಶ್ಚಯದಿಂದ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್ ಜಬೀಉಲ್ಲಾ ಅವರನ್ನು ಬಲಿದಾನಕ್ಕೆ ಸಿದ್ಧಪಡಿಸಿದ ಘಟನೆ ಇಸ್ಲಾಂ ಧರ್ಮದ ಮಹತ್ವದ ಸಂದೇಶವಾಗಿದೆ ಎಂದರು.ಮಗನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಸ್ನೇಹಿತನ ಮನೆಗೆ ಹೋಗುತ್ತಿರುವುದಾಗಿ ಹೇಳಿ ಕರೆದುಕೊಂಡು ಹೋಗುವ ವೇಳೆ ಶೈತಾನನು ಹಲವು ರೀತಿಯಲ್ಲಿ ಅಡ್ಡಿಪಡಿಸಲು ಪ್ರಯತ್ನಿಸಿದನು. ಆದರೆ ತಂದೆ-ಮಗ ಇಬ್ಬರೂ ಅಲ್ಲಾಹನ ಮೇಲಿನ ಅಪಾರ ನಂಬಿಕೆಯಿAದ ಹಿಂದೆ ಸರಿಯಲಿಲ್ಲ ಎಂದು ತಿಳಿಸಿದರು.ಇದು ಅಲ್ಲಾಹನ ಹೆಸರಿನಲ್ಲಿ ನಡೆಯುವ ಬಲಿದಾನವಾದರೆ ನಾನು ಸಿದ್ಧ ಎಂದು ಇಸ್ಮಾಯಿಲ್ ಧೈರ್ಯದಿಂದ ಹೇಳಿದ ಘಟನೆ ತ್ಯಾಗ ಮತ್ತು ವಿಧೇಯತೆಯ ಅತ್ಯುನ್ನತ ಉದಾಹರಣೆ ಎಂದು ಹೇಳಿದರು.ಇಬ್ರಾಹಿಂ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕರ್ತವ್ಯ ನೆರವೇರಿಸಲು ಮುಂದಾದಾಗ, ಅಲ್ಲಾಹನು ದೇವದೂತರ ಮೂಲಕ ಒಂದು ಕುರಿಯನ್ನು ಕಳುಹಿಸಿ ಮಗನ ಪ್ರಾಣವನ್ನು ಉಳಿಸಿದ ಪವಾಡವನ್ನು ಅವರು ಸ್ಮರಿಸಿದರು. ಈ ಘಟನೆಯ ಸ್ಮರಣಾರ್ಥವಾಗಿ ಪ್ರತಿವರ್ಷ ವಿಶ್ವದಾದ್ಯಂತ ಮುಸ್ಲಿಮರು ಕುರ್ಬಾನಿ ನೀಡಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ ಎಂದರು.ಕೊನೆಯಲ್ಲಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಪ್ರೀತಿ ಮತ್ತು ವಿಶ್ವಾಸ ಬೆಳೆಸಬೇಕು. ಎಲ್ಲಾ ಜಾತಿ-ಧರ್ಮದ ಜನರು ಒಂದಾಗಿ ಸಹಬಾಳ್ವೆಯಿಂದ ಬದುಕಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮೌಲಾನ ರಿಜ್ವಾನ್, ಕೋಟೆ ಮಸೀದಿ ಗುರುಗಳು ಹಾಗೂ ನಹೀಮ್, ಅಕ್ರಂ, ತನ್ವೀರ್, ಅಬ್ದುಲ್ ಜಬ್ಬರ್, ಬಷೀರ್ ಸಾಬ್,ಮೊಹಮ್ಮದ್ ಸೂಫಿಯಾನ, ಸೇರಿದಂತೆ ಇತರರು ಹಾಜರಿದ್ದರು.ಈ ವೇಳೆ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಐ ರೇವಣ್ಣ, ಪಿಎಸ್ಐ ಎಸ್.ಜಿ. ಪಾಟೀಲ್ ಹಾಗೂ ದೇವರಾಜು ಸೇರಿದಂತೆ ಸಿಬ್ಬಂದಿ ವರ್ಗದವರು ಶಾಂತಿಯುತವಾಗಿ ಕಾರ್ಯಕ್ರಮ ನಡೆಯುವಂತೆ ನೋಡಿಕೊಂಡರು.
ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ



