ಕಲ್ಬುರ್ಗಿ: ಬಿಡದಿಯ ರೈತರನ್ನು ಬೀದಿಗೆ ತಂದು ಜಮೀನು ಕಸಿದುಕೊಳ್ಳುವ ಭ್ರಮೆಯಲ್ಲಿ ಮುಖ್ಯಮಂತ್ರಿಗಳು ಇದ್ದಲ್ಲಿ ಆ ಭ್ರಮೆಯಿಂದ ಹೊರಕ್ಕೆ ಬರಬೇಕೆಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕರ್ತವ್ಯ ಅವರ ಮೇಲಿದೆ. ದಬ್ಬಾಳಿಕೆ ಮಾಡಲು ನೀವು ರಾಜ್ಯದ ಮುಖ್ಯಮಂತ್ರಿಗಳಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ; ಜನರು ಈಗಾಗಲೇ ಬಿಡದಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಟೌನ್ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಆಗ್ರಹಿಸಿದರು.ಇಲ್ಲಿ ಬಂದು ಫೋಟೊ ಹೊಡೆಸಿಕೊಂಡು ಶಿವಪೂಜೆ ಮಾಡಿದ್ದು, ಆ ಕಪಟ ನಾಟಕವನ್ನು ಬದಿಗಿಟ್ಟು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಬಗ್ಗೆ ತಲೆ ಕೆಡಿಸಿಕೊಳ್ಳಿ; ರೈತರ ಬಗ್ಗೆ ತಲೆ ಕೆಡಿಸಿಕೊಳ್ಳಿ. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ರೈತರ ವಿಚಾರ ಆದ್ಯತೆ ಆಗಬೇಕೇ ವಿನಾ, ಟೌನ್ಶಿಪ್ಗಳಲ್ಲ; ಟೌನ್ಶಿಪ್ ಅಗತ್ಯವೇ? ಖಂಡಿತ ಅಗತ್ಯವಿದೆ. ಆದರೆ, ರೈತರ ಜಮೀನು ಕಸಿದುಕೊಂಡು ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ನಿಜವಾಗಿಯೂ ನಿಮಗೆ ಅಭಿವೃದ್ಧಿಯ ಕಾಳಜಿ ಇದ್ದರೆ, ಬೆಂಗಳೂರಿನ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ ಎಂಬ ಭ್ರಮೆಯಿಂದ ಕಾಂಗ್ರೆಸ್ ಸರಕಾರ ಹೊರಕ್ಕೆ ಬರಲಿ; ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಒತ್ತಾಯಿಸಿದರು.ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಬಿಡದಿ ಟೌನ್ಶಿಪ್ ಜೊತೆಗೆ ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡಲು ಹೊರಟಿದ್ದಾರಲ್ಲವೇ? ಇವೆರಡೂ ಒಟ್ಟೊಟ್ಟಿಗೆ ಸೇರಿಕೊಂಡಿದೆ. ಡಿ.ಕೆ.ಶಿವಕುಮಾರ್ ಅವರ ಸಾವಿರಾರು ಎಕರೆ ಜಮೀನು ಅಲ್ಲಿದೆ ಎಂದು ಜನಸಾಮಾನ್ಯರೂ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಆಸಕ್ತಿ ಇರಬೇಕೇ ವಿನಾ, ರಿಯಲ್ ಎಸ್ಟೇಟ್ ಬಗ್ಗೆ ಅಲ್ಲ. ರಿಯಲ್ ಎಸ್ಟೇಟ್ ವಿಷಯ ಮರೆತು ರೈತರ ಬಗ್ಗೆ ಆಲೋಚಿಸಿದರೆ ಬಿಡದಿಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಮುಖ್ಯಮಂತ್ರಿಗಳ ಆದ್ಯತೆ ಏನೆಂದು ಇದರಲ್ಲೇ ಗೊತ್ತಾಗುತ್ತದೆ. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಬಿಡದಿ ಟೌನ್ಶಿಪ್, ಕನಕಪುರದಲ್ಲಿ ವಿಮಾನನಿಲ್ದಾಣದ ನೆನಪಾಗಿದೆ. ಇದರ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಹೇಳಿದರು.
ಜಮೀನು ಕಸಿದುಕೊಳ್ಳುವ ಭ್ರಮೆ ಬೇಡ ಸಿಎಂ ವಿರುದ್ಧ ವಿಜಯೇಂದ್ರ ವಾಗ್ದಾಳಿ



