ನೀಟ್ ಪರೀಕ್ಷೆಯನ್ನು ನೀಟಾಗಿ ಕುಳಿತು ಓದಿ ಬರೆದವರಿಗೆ ಈಗ ಮತ್ತೊಮ್ಮೆ ಪರೀಕ್ಷೆ ಎದುರಿಸುವ ಪರಿಸ್ಥಿತಿ ನೀಟಾಗಿಲ್ಲದವರು ತಂದಿರೋದರ ಹಿಂದೆ ರಾಜಕೀಯವಿತ್ತೆ?. ರಾಜಕೀಯವಿರಲಿಲ್ಲ ಆದರೂ ಈಗಿದು ರಾಜಕೀಯದ ಬುಡ ಬಂದು ನಿಂತಿರೋದಕ್ಕೆ ಕಾರಣವೇ ಭ್ರಷ್ಟಾಚಾರ.
ಇದರಿಂದ ಮಕ್ಕಳ ಭವಿಷ್ಯದ ಮೇಲೆ ಯಾವ ಪರಿಣಾಮಬೀರುವುದೆನ್ನುವ ಸಾಮಾನ್ಯ ಜ್ಞಾನವಿಲ್ಲದವರು ತಮ್ಮ ಮನಸ್ಸಿಗೆ ಬಂದಂತೆ ಮಕ್ಕಳನ್ನು ಬಳಸಿಕೊಂಡರೆ ಅದಕ್ಕೆ ಕಾರಣಕರ್ತರು ಪೋಷಕರಾಗಿರುವರಷ್ಟೆ. ಎಲ್ಲಿಗೆ ಬಂದು ನಿಂತಿದೆ ಶಿಕ್ಷಣ ವ್ಯವಸ್ಥೆ ಎಂದರೆ ಏನೂ ಓದು ಬರಹಬರದವರು ದೇಶ ಆಳಬಹುದು ಚೆನ್ನಾಗಿ ಓದಿ ಮುಂದೆ ಹೋದವರು ವಿದೇಶ ನೋಡಬಹುದು. ಇವರಿಬ್ಬರ ನಡುವಿರುವ ನಡೆಯುವವರ ಸಂಕಟ ಸಮಸ್ಯೆಯೇ ಭ್ರಷ್ಟ ದುಷ್ಟರನ್ನು ಬೆಳೆಸುತ್ತಿರುವುದು.
ತತ್ವದರ್ಶನ ಮಾಡಿಸದ ತಂತ್ರಜ್ಞಾನದಿಂದ ಮಕ್ಕಳಿಗೆ ಸಿಕ್ಕಿದ್ದು ಅಜ್ಞಾನವಷ್ಟೆ.ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದ ಜೀವನ. ಇದರಿಂದ ಮನೆಮನೆಯಲ್ಲಿ ಸಮಸ್ಯೆ ಬೆಳೆದು ನಿಂತರೂ ಸರಿ ತಮ್ಮ ರಾಜಕೀಯ ಬಿಡೋದಿಲ್ಲ ಎನ್ನುವ ಅಸುರಿತನ ಇನ್ನಷ್ಟು ಬೆಳೆಯುತ್ತದೆ. ಇದು ಪ್ರಗತಿಯೆ ದುರ್ಗತಿಯೆ?.
ಇಷ್ಟಕ್ಕೂ ಪರೀಕ್ಷೆಯಿಂದ ಯಾವ ಸಾಧನೆ ಆಗಿದೆ ಆಗುತ್ತಿದೆ ಆಗಬೇಕಿದೆ? ಎನ್ನುವ ಪ್ರಶ್ನೆಗೆ ಉತ್ತರ ಹೊರಗಿನ ಪರೀಕ್ಷೆಯಲ್ಲಿ ಸಿಗದು.ಆಧ್ಯಾತ್ಮಿಕ ಚಿಂತನೆಯಲ್ಲಿ ಇದನ್ನು ಇನ್ನೊಂದು ರೂಪದಲ್ಲಿ ನಿಂತು ನೋಡಿದಾಗಲೇ ವಾಸ್ತವದ ಅರಿವಾಗಲು ಸಾಧ್ಯವಿದೆ. ಲಕ್ಷಾಂತರ ಹಣ ಸಾಲ ಮಾಡುತ್ತಾ ಮಕ್ಕಳ ಮೂಲ ಜ್ಞಾನವನ್ನು ನಿರ್ಲಕ್ಷ÷್ಯ ಮಾಡಿದರೆ ಇದರ ಫಲ ಅನುಭವಿಸೋದು ಪೋಷಕರೆ ಆಗಿರುವರು.
ಪರೀಕ್ಷೆ ಯಾರಿಗೆ ಹೇಗೆ?
ಪರೀಕ್ಷೆಯ ಸಮಯದಲ್ಲಿ ಮಕ್ಕಳು ಪೋಷಕರು ತಲೆಬಿಸಿಮಾಡಿಕೊಂಡಿರೋದನ್ನು ನೋಡಿದರೆ ಶಿಕ್ಷಣವನ್ನು ನಾವು ರಕ್ತಗತವಾಗಿ ಬಂದ ಜ್ಞಾನಕ್ಕೆ ಕೊಟ್ಟವೋ ಅಥವಾ ಋಣದಿಂದ ಬೆಳೆದ ವಿಷಯಕ್ಕೆ ಕೊಡುತ್ತಿದ್ದೇವೋ ಎನ್ನುವ ಪ್ರಶ್ನೆಗೆ ಉತ್ತರ ಒಳಗೆ ಸಿಗುತ್ತದೆ. ರಕ್ತಗತವಾಗಿ ಬಂದ ಜ್ಞಾನ ಹೊರಗಿನ ವಿಜ್ಞಾನಕ್ಕೆ ವಿರುದ್ದವಿದ್ದರೆ ಅಜ್ಞಾನವಾಗುತ್ತದೆ. ಆತ್ಮನಿರ್ಭರ ಎಂದರೆ ಆಧ್ಯಾತ್ಮಿಕವಾಗಿ ನಮ್ಮ ಶಿಕ್ಷಣ ಹಿಂದುಳಿದಿದೆ ಹೀಗಾಗಿ ಆತ್ಮದುರ್ಭಲತೆಯಿಂದ ಮಕ್ಕಳ ಜೊತೆಗೆ ಪೋಷಕರ ಸಮಸ್ಯೆಯೂ ಹೊರಗೆ ಒಳಗೆ ಬೆಳೆಯುತ್ತಿದೆ.
ಪರೀಕ್ಷೆ ಯಾರಿಗೆ ಯಾರು ಕೊಡುತ್ತಿರೋದು?, ಯಾವ ವಿಚಾರದಲ್ಲಿ ಪರೀಕ್ಷೆಗಳಾಗುತ್ತಿದೆ?, ಇದರಲ್ಲಿ ಪಾಸಾದವರು ಎಲ್ಲಿರುವರು?, ನಪಾಸಾದವರು ಏನು ಮಾಡುತ್ತಿರುವರು?, ಹಿಂದಿನ ಪರೀಕ್ಷೆಗೂ ಈಗಿನಪರೀಕ್ಷೆಗಿರುವ ವ್ಯತ್ಯಾಸವೇನು?, ಅಂದಿನ ಜ್ಞಾನ ಇಂದಿನ ವಿಜ್ಞಾನದ ಅಂತರದಿAದಾದ ಲಾಭನಷ್ಟಗಳೇನು?. ಎಲ್ಲಾ ಪ್ರಶ್ನೆಗೆ ಉತ್ತರ ಕಂಡುಕೊAಡರೆ ಮುಂದಿನ ಪರೀಕ್ಷೆಯಲ್ಲಿ ಮಕ್ಕಳಿಗೆ ಯಾವ ಪ್ರಶ್ನೆಗೆ ಯಾವ ಉತ್ತರ ನೀಡಬಹುದೆನ್ನುವ ಸಾಮಾನ್ಯ ಪ್ರಜ್ಞೆ ಬರುತ್ತದೆ.ಜೀವನದ ಪರೀಕ್ಷೆಯಲ್ಲಿ ಗೆದ್ದು ಮುಂದೆ ನಡೆಯಬಹುದು.
ಓಡುತ್ತಿರುವ ಮನಸ್ಸನ್ನು ಹಿಡಿದಿಟ್ಟುಕೊಂಡು ಯೋಗ ಮಾರ್ಗ ಹಿಡಿಯಬೇಕಾದ ಭಾರತೀಯರಿಗೆ ಭೋಗದೆಡೆಗೆ ದಾರಿತೋರಿಸಿ ರೋಗದೆಡೆಗೆ ನಡೆಸಿದವರು ಮಹಾತ್ಮರೆ?. ಮಹಾತ್ಮರಾದವರು ತತ್ವಶಾಸ್ತ್ರ ದಿಂದ ಜೀವನ ಧರ್ಮ ಯೋಗ ತಿಳಿಸಿದ್ದರು.ಇದರಲ್ಲಿ ಡಿ ವಿ ಗುಂಡಪ್ಪನವರು ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಂತೆ.ಅದರಲ್ಲೂ ಕನ್ನಡದಲ್ಲಿ ಒಂದು ಅಂಕ ಕಡಿಮೆಯಾಗಿ ಎಂದರೆ ಅವರ ಕಗ್ಗದ ಕಗ್ಗಂಟನ್ನು ಅರಿತು ನಡೆಯೋದಕ್ಕೆ ನಮ್ಮಲ್ಲಿ ಜ್ಞಾನವಿಲ್ಲ. ಆದರೆ ಪರೀಕ್ಷೆಯಲ್ಲಿ ಅಂಕ ಮಾತ್ರ ಸಂಪೂರ್ಣ ಬರುತ್ತದೆ. ಜೀವನಧರ್ಮ ಯೋಗದ ಅರ್ಥ ತಿಳಿದಿಲ್ಲದೆ ಜೀವನದಲ್ಲಿ ಸಮಸ್ಯೆ ಗಳನ್ನು ಹೊತ್ತು ನಡೆಯುವುದೇ ಪ್ರಗತಿ ಎಂದು ವಾದ ಮಾಡುವೆವೆಂದರೆ ನಮ್ಮ ಮಕ್ಕಳಿಗೆ ತಿಳಿಸುವವರು ಯಾರು? ಯಾರೋ ಹೊರಗಿನವರು ಬಂದು ಅವರ ವಿಷಯ ತಿಳಿಸಲು ತಲೆಕೊಟ್ಟು ಹಣಕೊಟ್ಟು ಕೂರುವುದರಿಂದ ಕಷ್ಟ ನಷ್ಟ ಯಾರಿಗೆ?
ಸಾಮಾನ್ಯ ಜ್ಞಾನದ ಕೊರತೆ ಜೀವನ ಪರೀಕ್ಷೆಯಲ್ಲಿ ಫೇಲ್ ಆಗಲು ಕಾರಣ. ಒಟ್ಟಿನಲ್ಲಿ ನಾವೆಲ್ಲರೂ ಪೇಲ್ ಆಗಿ ಮತ್ತೆ ಜನ್ಮಪಡೆದ ಮಾನವರಷ್ಟೆ. ಮತ್ತದೇ ಪರೀಕ್ಷೆ ನಡೆದಿದೆ ಇದನ್ನು ಎದುರಿಸುವ ಜ್ಞಾನವಿದ್ದರೆ ಭಗವಂತನ ಪರೀಕ್ಷೆಯಲ್ಲಿ ಪಾಸಾಗಬಹುದು.
ಎಷ್ಟು ಹೊರಗಿನಿಂದ ಪಡೆದರೂ ಸಾಲವೇ.ಒಳಗಿನಿಂದ ಗಳಿಸಿದ್ದರಲ್ಲಿ ಹಂಚಿಕೊAಡು ಬಾಳಿದರೆ ಸಾಲಮನ್ನಾ. ಪರಮಾತ್ಮನ ಶಕ್ತಿ ಕಾಣದ ವಿಜ್ಞಾನದಿಂದ ಅಜ್ಞಾನ ಹೆಚ್ಚಬಾರದು. ಅತಿಯಾದರೆ ಗತಿಗೇಡು. ಗುರುವಿಗೇ ತಿಳಿಯದ ಸತ್ಯ ಶಿಷ್ಯನಿಗೆ ತಿಳಿಸಬಹುದೆ?ಕಲಿಗಾಲದಲ್ಲಿ ಕಲಿಯುವುದೇ ಕಾಲ. ಇದು ಸತ್ಯವೋ ಮಿಥ್ಯವೋ ಎನ್ನುವುದರ ಮೇಲಿದೆ ಫಲಿತಾಂಶ. ಜೀವನದಲ್ಲಿ ಹಣ ಬೇಕು.ಹಣವೇ ಜೀವನವಾಗಬಾರದು.
ಸತ್ಯ ಧರ್ಮ ವಿಲ್ಲದ ಜೀವನದಲ್ಲಿ ಪರೀಕ್ಷೆಗಳು ಶಿಕ್ಷೆ ಎನಿಸುತ್ತದೆ. ಶಿಕ್ಷಣದಲ್ಲಿ ಶಿಕ್ಷೆ ಯಾವುದಕ್ಕೆ ನೀಡಲಾಗುತ್ತಿದೆ?ಪೋಷಕರೆ ತಮ್ಮ ಮಕ್ಕಳನ್ನು ಸರಿದಾರಿಯಲ್ಲಿ ನಡೆಸಿದರೆ ಸಂಸ್ಕಾರಯುತ ವಿದ್ಯೆಯಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರು ಜೀವನ ಧರ್ಮ ಕರ್ಮ ವರಿತು ಯೋಗದೆಡೆಗೆ ನಡೆಯುವರು. ಕಾಲಕ್ಕೆ ತಕ್ಕಂತೆ ಶಿಕ್ಷಣ.ಹಾಗಂತ ಸತ್ಯವೇ ಇಲ್ಲದೆ ಜೀವನ ನಡೆಸೋದರಲ್ಲಿ ಅರ್ಥ ವಿದೆಯೆ?
ಅವರವರ ಮಕ್ಕಳ ಭವಿಷ್ಯ ಅವರಿಗೇ ಬಿಟ್ಟಿದೆ. ಇದರ ಫಲ ಅವರೆ ಅನುಭವಿಸುವಾಗ ಮಕ್ಕಳು ಪೋಷಕರಿಗೆ ಸವಾಲಾಗಿ ನಿಲ್ಲುವರು.ಆಗ ಉತ್ತರ ನೀಡುವ ಶಕ್ತಿ ಇದ್ದರೆ ಉತ್ತಮ ಆರೋಗ್ಯ. ಫಲಿತಾಂಶ ಜೀವನದ ಅಂತ್ಯದಲ್ಲಿ ಕಾಣುತ್ತದೆ. ಈಗಲೇ ಅಂತ್ಯಕಾಲದಲ್ಲಿರುವವರನ್ನು ನೋಡಿ ತಿಳಿಯಬಹುದು.
ಹಣದಿಂದ ಆಗದ್ದನ್ನು ಜ್ಞಾನದಿಂದ ಗೆಲ್ಲಬಹುದು. ಎಲ್ಲದ್ದಕ್ಕೂ ಸರ್ಕಾರದ ಮೇಲೆ ದೋಷ ಹಾಕುತ್ತಿದ್ದರೆ ನಮ್ಮ ಸಹಕಾರದಲ್ಲಿಯೂ ದೋಷ ವಿರುತ್ತದೆ. ಇದರ ಫಲವನ್ನು ಮಕ್ಕಳುಮೊಮ್ಮಕ್ಕಳ ಕಾಲದಲ್ಲಿ ಅನುಭವಿಸಲೇಬೇಕೆನ್ನುತ್ತದೆ ಆಧ್ಯಾತ್ಮ. ಕಾಲ ಮಿಂಚುವ ಮೊದಲು ಎಚ್ಚರವಾದರೆ ಮಕ್ಕಳ ಭವಿಷ್ಯ ಉತ್ತಮವಾಗಬಹುದಷ್ಟೆ.
-ಭಗವತಿ, ಬೆಂಗಳೂರು
ಪರೀಕ್ಷೆಗಳು ರಾಜಕೀಯದ ದಾಳವೆ?



