ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು 33 ವರ್ಷ ಉತ್ತಮ ಸೇವೆ ಸಲ್ಲಿಸಿ ತಮ್ಮಗೂ ಹಾಗೂ ಇಲಾಖೆಗೂ ಕೆಲಸದಲ್ಲಿ ಯಾವುದೇ ಕಪ್ಪು ಚುಕ್ಕಿ ಬಾರದಂತೆ ಕರ್ತವ್ಯ ಸಲ್ಲಿಸಿರುವ ಸಿ.ಎಚ್.ಪ್ರತಾಪ್ ರೆಡ್ಡಿ ರವರಿಗೆ ಇಂದು ಬೆಳಿಗ್ಗೆ ಕೋರಮಂಗಲದ ಕೆಎಸ್ಆರ್ಪಿ ಕ್ರೀಡಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
1964 ರ ಜುಲೈ ಒಂದರಂದು ಜನಿಸಿದ ಸಿ ಎಚ್ ಪ್ರತಾಪ್ ರೆಡ್ಡಿ, ಬಿ. ಟೆಕ್ ವಿದ್ಯಾಭ್ಯಾಸ ಮುಗಿಸಿ 1991 ರಲ್ಲಿ ಯುಪಿಎಸ್ಸಿ ಎಕ್ಸಾಮ್ ಬರೆದು ಐಪಿಎಸ್ ಗೆ ಸೇರ್ಪಡೆಯಾಗಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.ಹೈದರಾಬಾದ್ನ ಸರ್ದಾರ್ ವಲ್ಲಬ ಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ, ತದನಂತರ ಬಡ್ತಿಗಳನ್ನು ಪಡೆದು ಸಿಐಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಕರ್ನಾಟಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿಯಾಗಿ, ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಉತ್ತಮ ಸೇವೆಸಲ್ಲಿಸಿದರು.
ಸುಮಾರು 10 ವಿವಿಧ ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಪ್ರತಾಪ್ ರೆಡ್ಡಿ ರವರು ಇಲಾಖೆಯ ಸಿಬ್ಬಂದಿ ಮತ್ತು ಕೆಲಸಗಳ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಇನ್ನು ಮುಂದೆಯೂ ಸಹ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತರಬೇಕೆಂದು ಹಾರೈಸಿದರು.
ಹಾಲಿ ಕರ್ನಾಟಕ ರಾಜ್ಯ ಆಂತರಿಕ ಭದ್ರತೆ ವಿಭಾಗದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ಇಂದು ಸಂಜೆ ನಿವೃತ್ತರಾಗಲಿದರೆ.ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ ಎಲ್ಲಾ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.