ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಅಂಗೀಕರಿಸಿದ್ದಾರೆ.
ಈ ಬಗ್ಗೆ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಣೆಯೂ ಆಗಿದೆ. ಹಾಲಿ ಸಚಿವರೆಲ್ಲಾ ಮಾಜಿ ಸಚಿವರಾಗಿದ್ದಾರೆ. ಮತ್ತೆ ನೂತನ ಸರ್ಕಾರ ರಚನೆಗೆ ದೆಹಲಿಯಲ್ಲಿ ಕಸರತ್ತು ಆರಂಭಗೊಂಡಿದೆ.
ಸಿದ್ದರಾಮಯ್ಯ ನಂತರ ಮುಂದಿನ ಮುಖ್ಯಮಂತ್ರಿ ಯಾರೂ ಎಂಬುದು ಇನ್ನು ಅಧಿಕೃತವಾಗಿ ತೀರ್ಮಾನ ಹೊರಬಿದ್ದಿಲ್ಲ. ಆದರೆ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಹೊಸ ಮುಖ್ಯಮಂತ್ರಿ ಎಂದು ಬಿಂಬಿತವಾಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿದ ಸಚಿವರಾಗ ಬಯಸಿದ್ದ ಬಹುತೇಕ ಶಾಸಕರು ಇದೀಗ ದೆಹಲಿಗೆ ದೌಡಾಯಿಸಿದ್ದಾರೆ.
ನಿನ್ನೆ ಸಂಜೆಯೇ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರು ಅಲ್ಲಿಯೇ ಇರುವ ಕಾರಣ ಸಚಿವಾಕಾಂಕ್ಷಿ ಶಾಸಕರು ಇಂದುಮುಂಜಾನೆ 3ಗಂಟೆಗೆ ವಿಮಾನದಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ನೂತನ ಮುಖ್ಯಮಂತ್ರಿ ಎಂದು ಶಿವಕುಮಾರ್ ಹೆಸರು ಪ್ರಕಟವಾದ ಕೂಡಲೇ ತಮಗೆ ಮಂತ್ರಿಪಟ್ಟ ನೀಡಬೇಕು ಎಂದು ಅವರನ್ನು ಮನವಿ ಮಾಡಲು ಮುಂದಾಗಿದ್ದಾರೆ.
ಮತ್ತೊಂದೆಡೆ ನಿನ್ನೆ ಸಂಜೆ ದೆಹಲಿಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹವಾಮಾನ ವೈಪರೀತ್ಯದಿಂದಾಗಿ ರಾಜಸ್ಥಾನದ ಜೈಪುರದಲ್ಲೇ ತಾವು ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡ್ ಆದ ಪರಿಣಾಮ ಇಂದು ಬೆಳಿಗ್ಗೆ ದೆಹಲಿ ತಲುಪಿದ್ದಾರೆ. ದೆಹಲಿ ತಲುಪಿದ ಕೂಡಲೇ ನೇರವಾಗಿ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಅವರನ್ನು ಭೇಟಿ ಮಾಡಿ ಕಳೆದ 20 ವರ್ಷಗಳಿಂದ ತಮಗೆ ಪಕ್ಷದಲ್ಲಿ ಎರಡು ಬಾರಿ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನ, ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ನೀಡಿ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಅವರಿಗೆ ಕೃತಜ್ಞತೆ ಸಲ್ಲಿಸಿದಾರೆ.
ಸರ್ಕಾರ ರಚನೆ ಕಸರತ್ತು ದೆಹಲಿಯಲ್ಲಿ ಡಿಕೆ-ಸಚಿವಾಕಾಂಕ್ಷಿಗಳು



