ಉಡುಪಿ: ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಬಳಿ ತಮ್ಮನೊಬ್ಬ ಸ್ವಂತ ಅಣ್ಣನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಬರ್ಬರ ಘಟನೆ ಹೆಬ್ರಿಯಲ್ಲಿ ನಡೆದಿದೆ.ಅರಮನೆಜೆಡ್ಡು ನಿವಾಸಿ ಮಂಜುನಾಥ (35) ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಕೃತ್ಯ ನಡೆಸಿದ ಆತನ ತಮ್ಮ ವಿಶ್ವನಾಥನನ್ನು (30) ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ, ಒಂದೇ ಮನೆಯಲ್ಲಿ ವಾಸವಾಗಿದ್ದು, ಇವರಿಬ್ಬರೂ ಆಗಾಗ ಗಲಾಟೆ ಮಾಡುತ್ತಿದ್ದರು.ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಬಂದು ಅಣ್ಣತಮ್ಮಂದಿರ ಗಲಾಟೆ ನಡೆಯುತ್ತಿತ್ತು.ಅಣ್ಣನ ಪತ್ನಿ ಮನೆ ಬಿಟ್ಟು ಹೋಗಿದ್ದು,ಅದಕ್ಕೆ ತಮ್ಮ ಕಾರಣವೆಂದು ಅಣ್ಣನಿಗೆ ಸಿಟ್ಟಿತ್ತು. ಜಗಳದ ವೇಳೆ ನನ್ನ ಪತ್ನಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಅಣ್ಣ ದೂಷಿಸಿದ್ದ.
ಇದರಿಂದ ಕೋಪಗೊಂಡ ತಮ್ಮ ವಿಶ್ವನಾಥ ದೊಣ್ಣೆಯಿಂದ ತಲೆಗೆ ಹೊಡೆದು ಅಣ್ಣನ ಕೊಲೆ ಮಾಡಿದ್ದಾನೆ.ತೀವ್ರ ರಕ್ತಸ್ರಾವವಾಗಿ ಮಂಜುನಾಥ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.