ಚೆನ್ನೈ: ಬಹುಮತದ ಕೊರತೆಯಿಂದ ಸರ್ಕಾರ ರಚಿಸಲು ಪರದಾಡುತ್ತಿದ್ದ ನಟ ವಿಜಯ್ ಅವರ `ತಮಿಳುಗ ವೆಟ್ರಿ ಕಳಗಂ’ ಗೆ ಹಂಗಾಮಿ ಮುಖ್ಯಮಂತ್ರಿ ಸ್ಟಾಲಿನ್ ಅಭಯ ನೀಡಿದ್ದು, ವಿಜಯ್ ಸರ್ಕಾರ ರಚಿಸಲಿ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.
ಬಹುಮತಕ್ಕೆ 11 ಸ್ಥಾನಗಳ ಕೊರತೆಯಿದ್ದರೂ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದು ನಮಗೆ ಇಷ್ಟವಿಲ್ಲ. ಜನರ ತೀರ್ಪನ್ನು ಗೌರವಿಸಿ ವಿಜಯ್ ಅವರು ಸರ್ಕಾರ ರಚಿಸಲಿ ಎಂದು ಸ್ಪಷ್ಟಪಡಿಸಿದರು.
ಬುಧವಾರ ರಾತ್ರಿಯವರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಸ್ಟಾಲಿನ್ ಅವರ ಈ ನಡೆಯು ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.
ವಿಜಯ್ ಸರ್ಕಾರಕ್ಕೆ ಸ್ಟಾಲಿನ್ ಕಿವಿಮಾತು ಅಧಿಕಾರ ಬಿಟ್ಟುಕೊಡಲು ಸಮ್ಮತಿಸಿರುವ ಸ್ಟಾಲಿನ್, ತಮ್ಮ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ಹೊಸ ಸರ್ಕಾರವು ಮುಂದುವರಿಸಬೇಕೆAದು ಆಶಿಸಿದ್ದಾರೆ: ಶಾಲಾ ಮಕ್ಕಳ ಹಸಿವು ನೀಗಿಸುವ ಈ ಯೋಜನೆ ನಿಲ್ಲಬಾರದು, ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರೂ. ಮಾಸಿಕ ಆರ್ಥಿಕ ನೆರವಿನ ಯೋಜನೆಯನ್ನು ಉಳಿಸಿಕೊಳ್ಳಬೇಕು.
ವಿಜಯ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 2,500 ರೂ. ನೀಡುವುದಾಗಿ ಭರವಸೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್, ಇಷ್ಟು ದೊಡ್ಡ ಮೊತ್ತವನ್ನು ನೀಡುವುದು ಆರ್ಥಿಕವಾಗಿ ಸವಾಲಿನ ಕೆಲಸ. ಆದರೆ ಕನಿಷ್ಠ ಈಗಿರುವ 1,000 ರೂ. ಯೋಜನೆಯನ್ನಾದರೂ ಹೊಸ ಸರ್ಕಾರ ಮುಂದುವರಿಸಲಿ ಎಂದು ಸಲಹೆ ನೀಡಿದರು.
ವಿಜಯ್ ಸರ್ಕಾರ ರಚಿಸಲಿ, ಜನಾದೇಶಕ್ಕೆ ಗೌರವ ಕೊಡೋಣ



