ಬೆಂಗಳೂರು: `ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ `ಬೇಲ್’ ಚಿತ್ರದಿಂದ ಮೊದಲ ರೊಮ್ಯಾಂಟಿಕ್ ಮೆಲೋಡಿ `ಚೆಲುವೆ ಕೇಳೇ ಚೆಲುವೆ’ ಬಿಡುಗಡೆಯಾಗಿದ್ದು, ಸಂಗೀತ ಪ್ರೇಮಿಗಳ ಮನಗೆದ್ದಿದೆ. ಈ ಇಂಪಾದ ಗೀತೆಯಲ್ಲಿ ಯುವ ಪ್ರತಿಭೆಗಳಾದ ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಅವರ ಮುದ್ದಾದ ಕೆಮಿಸ್ಟಿç ಪ್ರೇಕ್ಷಕರನ್ನು ಆಕರ್ಷಿಸಿದೆ. ಸ್ವತಃ ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆ.ಎಸ್. ಹರಿಶಂಕರ್ ಹಾಗೂ ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಶಿವಣ್ಣ ತಮ್ಮ ಪವರ್‌ಫುಲ್ ಲುಕ್ ಹಾಗೂ ಖಡಕ್ ಡೈಲಾಗ್‌ಗಳ ಮೂಲಕ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದರು. ಮಾಸ್ ಆಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಪವನ್ ಒಡೆಯರ್ ಅವರೇ ಹೊತ್ತುಕೊಂಡಿದ್ದಾರೆ.
`ಟಾಕ್ಸಿಕ್’ ಮತ್ತು `ಜನ ನಾಯಗನ್’ ಚಿತ್ರಗಳನ್ನು ನಿರ್ಮಿಸಿದ್ದ ಪ್ರತಿಷ್ಠಿತ `ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ `ಬೇಲ್’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಜೊತೆಗೆ ಮಲಯಾಳಂನ ಖ್ಯಾತ ನಟ ಜಯರಾಮ್, ಸಾಯಿಕುಮಾರ್, `ಲೂಸ್ ಮಾದ’ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಜತೆಯಾಗಿದೆ. ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2 ರಂದು `ಬೇಲ್’ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.