ತಿ.ನರಸೀಪುರ: ಸಂಘ ಪರಿವಾರದ ಸಾಮಾನ್ಯ ಕಾರ್ಯಕರ್ತನಾಗಿ ಸಮಾಜ ಸೇವೆಯ ಪಯಣ ಆರಂಭಿಸಿ, ಇದೀಗ ರಾಜ್ಯಸಭಾ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು, ಸಂಘಟನೆ ಹಾಗೂ ಅಭಿವೃದ್ಧಿಯ ಹೊಣೆಗಾರಿಕೆಯೂ ತಮ್ಮ ಹೆಗಲೇರಿದೆ ಎಂದು ರಾಜ್ಯಸಭಾ ಸದಸ್ಯ ಭಾರತೀಯ ಜನತಾ ಪಾರ್ಟಿಯ ರಾಷ್ಟಿçÃಯ ಉಪಾಧ್ಯಕ್ಷ ಪ್ರೊ. ಎಂ. ನಾಗರಾಜು ಹೇಳಿದರು.ರಾಜ್ಯಸಭಾ ಸದಸ್ಯ ನಾಗರಾಜುರವರ ತಾಲ್ಲೂಕಿನ ಹುಟ್ಟುರಾದ ಬಟ್ಟಳಿಗೆಹುಂಡಿ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಕುರುಬ ಸಮುದಾಯದ ಸಂಘಟನೆಗೆ ನಡೆದ ಪ್ರಯತ್ನಗಳನ್ನು ಉಲ್ಲೇಖಿಸಿ, ಇದೀಗ ಸಮುದಾಯದ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವ ಉದ್ದೇಶದಿಂದ ಬಿಜೆಪಿ ವರಿಷ್ಠರು ರಾಜ್ಯಸಭೆಗೆ ಕಳುಹಿಸಿದ್ದಾರೆ ಎಂದರು.ರಾಜ್ಯದ ಸುಮಾರು 60 ಲಕ್ಷ ಕುರುಬ ಸಮುದಾಯದ ಪ್ರತಿನಿಧಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವುದು ದೊಡ್ಡ ಜವಾಬ್ದಾರಿ. ಬಡ ಕುಟುಂಬದಲ್ಲಿ ಜನಿಸಿ ಆರ್‌ಎಸ್‌ಎಸ್‌ನಲ್ಲಿ ಸೇವೆ ಸಲ್ಲಿಸಿದ ತಮ್ಮನ್ನು ಈ ಹಂತಕ್ಕೆ ಬೆಳೆಸಿರುವುದು ಸಂಘ ಪರಿವಾರ, ಬಿಜೆಪಿ ಹಾಗೂ ಜನರ ಪ್ರೀತಿ-ವಿಶ್ವಾಸ ಎಂದು ಹೇಳಿದರು. ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿ ಭಾಗದಲ್ಲಿ ಸಂಘಟನೆಗಾಗಿ ಕೆಲಸ ಮಾಡಿದ್ದು, ರಾಜ್ಯಸಭೆಯಲ್ಲಿ ದೊರೆತಿರುವ ಅವಕಾಶವನ್ನು ಜನ ಹಾಗೂ ಸಮಾಜದ ಸೇವೆಗೆ ಬಳಸಿಕೊಳ್ಳುವುದಾಗಿ ತಿಳಿಸಿದರು.
ಬಿಜೆಪಿಯಲ್ಲಿ ಕುರುಬ ಸಮುದಾಯದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಾಯಕತ್ವ ಬೆಳೆಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಯುವಕರು ಹಾಗೂ ಅರ್ಹರನ್ನು ಗುರುತಿಸಿ ರಾಜಕೀಯವಾಗಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಲಾಗುವುದು. ಮುಂಬರುವ ಚುನಾವಣೆಗಳಲ್ಲಿ ಅರ್ಹರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತಮ್ಮಿಂದಾದ ಪ್ರಯತ್ನ ಮಾಡುವುದಾಗಿ ಹೇಳಿದರು.ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದರೆ, ಅವುಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಅವರು, ಬಟ್ಟಳಿಗೆಹುಂಡಿ ತಮ್ಮ ಜನ್ಮಭೂಮಿಯಾಗಿದ್ದು, ಹುಬ್ಬಳ್ಳಿ ಕರ್ಮಭೂಮಿಯಾಗಿದೆ. ಬೆಳೆದ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ಸದಾ ಕೆಲಸ ಮಾಡುವುದಾಗಿ ತಿಳಿಸಿದರು.ವರುಣ ಬಿಜೆಪಿ ಅಧ್ಯಕ್ಷ ನಗರ್ಲೆ ಮಹದೇವಸ್ವಾಮಿ ಮಾತನಾಡಿ, ಉನ್ನತ ಸ್ಥಾನಕ್ಕೇರಿದರೂ ಹುಟ್ಟೂರಿನ ಮಣ್ಣು ಹಾಗೂ ಗ್ರಾಮೀಣ ಜನರೊಂದಿಗಿನ ಒಡನಾಟವನ್ನು ಮರೆಯದೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿರುವುದು ಪ್ರೊ. ನಾಗರಾಜು ಅವರ ಸರಳತೆಗೆ ಸಾಕ್ಷಿ ಎಂದರು. ಅವರು ಇನ್ನಷ್ಟು ಉನ್ನತ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.ಗ್ರಾಮಸ್ಥರು ಗ್ರಾಮದ ವಿವಿಧ ಅಭಿವೃದ್ಧಿಗೆ 5 ಕೋಟಿ ಅನುದಾನದ ನೀಡಿ ಗ್ರಾಮವನ್ನು ಅಭಿವೃದ್ಧಿಪಡಿಸಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗುರುಸ್ವಾಮಿ, ಸದಾನಂದ, ಗ್ರಾ.ಪಂ. ಮಾಜಿ ಅಧ್ಯಕ್ಷ ಮುಸುವಿನಕೊಪ್ಪಲು ಶಿವರಾಮು, ಜಿಲ್ಲಾ ಕಾರ್ಯದರ್ಶಿ ದಯಾನಂದ ಪಾಟೀಲ್, ಬಾಲರಾಜು, ಶರತ್ ಪುಟ್ಟಬುದ್ಧಿ, ತಿ.ನರಸೀಪುರ ಟೌನ್ ಅಧ್ಯಕ್ಷ ಎಸ್.ಕೆ. ಕಿರಣ್, ಮಹೇಶ್, ಹಿಟ್ಟುವಳ್ಳಿ ಪ್ರಭುಸ್ವಾಮಿ, ಪ್ರಕಾಶ್, ಗೋಪಿ, ಹೆಮ್ಮರಗಾಲ ಕಾಳೆಗೌಡ, ರಾಮೇಗೌಡ, ಕೂಸಪ್ಪ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಜಯಕುಮಾರ್, ತುಂಬಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮನಂಜಯ್ಯ, ನಂದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.