LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು 7ನೇ ಗ್ಯಾರಂಟಿ

ಕೋಲಾರ ಭಾಗದ ರೈತರು, ರಾಜ್ಯಕ್ಕೆ ಮಾದರಿ ಎಂದ ಸಿಎಂ ಡಿಕೆಶಿ, 2027ರ ವೇಳೆಗೆ ನೀರು ಹರಿಸಲು ಸರ್ಕಾರದ ಸಂಕಲ್ಪ 



ಮಾಲೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ ಹಾಗೂ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡುತ್ತಿದೆ. ಇದರ ಮೂಲಕ 2027ರ ಅಂತ್ಯದ ವೇಳೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.ತಾಲ್ಲೂಕಿನ ಮಾಲೂರು ಹೊಸಕೋಟೆ ರಸ್ತೆಯ ಮಡಿವಾಳ ಚೊಕ್ಕಂಡಹಳ್ಳಿ ಗೇಟ್ ಬಳಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ತಾಲೂಕಿನ ವಿವಿಧ ಇಲಾಖೆಯ ಸರ್ವತೋಮುಖ ಅಭಿವೃದ್ಧಿಯ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಸಾಧನೆ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಫಲಾನುಭವಿಗಳಿಗೆ ಸರ್ಕಾರಿ ಸೌಲತ್ತುಗಳನ್ನು ವಿತರಿಸಿ ಮಾತನಾಡಿದರು. ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಯಾವುದು ಸುಲಭವಾಗಿ ಸಿಗುವುದಿಲ್ಲ. ಈ ಯೋಜನೆ ಕಷ್ಟವಾಗಿದೆ. ಆದರೆ ಪ್ರಯತ್ನ ಮಾಡಬೇಕಲ್ಲವೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಲಾಗುವುದು. ತುಮಕೂರುವರೆಗೂ ನೀರು ತರುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ನಾವು ಕೆಸಿ ವ್ಯಾಲಿ ಯೋಜನೆ ಮೂಲಕ 104 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹೆಚ್.ಎನ್.ವ್ಯಾಲಿ 65 ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. 700ಕ್ಕೂ ಹೆಚ್ಚು ಕೆರೆಗಳಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸಲು ಮುಂದಾಗಿದ್ದೇವೆ. ಅಂತರ್ಜಲ ಹೆಚ್ಚಿಸಬೇಕು, ಕೆರೆಗಳಿಗೆ ಹಾಗೂ ರೈತರಿಗೆ ನೀರು ತಲುಪಬೇಕು. ಹೀಗಾಗಿ ಆಗಸ್ಟ್ 15ರಂದು ನಮ್ಮ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರಕಟಿಸಲಿದ್ದೇವೆ. ಜಲ ಜೀವಕ್ಕೆ ನೆಮ್ಮದಿ, ನೀರಿಲ್ಲದೆ ಬದುಕಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರ ನೀರಿನ ಸಮಸ್ಯೆಗೆ ವಿವಿಧ ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.ಅಧಿಕಾರ ಶಕ್ತಿ ಸಂಕೇತವಲ್ಲ, ಜವಾಬ್ದಾರಿಯ ಸಂಕೇತ. ನಾವು ಅಧಿಕಾರವನ್ನು ಸಿಂಹಾಸನವೆAದು ತಿಳಿದಿಲ್ಲ, ಜನಸೇವೆಗೆ ಸಿಕ್ಕಿರುವ ಅವಕಾಶ ಎಂದು ಭಾವಿಸಿದ್ದೇವೆ. ಮೂರ್ತಿಗೆ ಬೆಲೆ ಕಟ್ಟಬಹುದು, ದೇವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರು. ನಮಗೆ ಆಶೀರ್ವಾದ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ತಿಳಿಸಿದರು.ನಮ್ಮ ಗ್ಯಾರಂಟಿ ಜನರ ಬದುಕು ಬದಲಿಸಿವೆ ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ದಾನಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಕಾರಣ 5 ಗ್ಯಾರಂಟಿ ನೀಡಿದೆವು. ಇವು ನಿಮ್ಮ ಬದುಕು ಬದಲಿಸಿದವು. 1.64 ಕೋಟಿ ಮನೆಗಳನ್ನು ಗೃಹಜ್ಯೋತಿ ಮೂಲಕ ಬೆಳಗಲಾಗಿದೆ. 1.20 ಬಡ ಕುಟುಂಬದ ಯಜಮಾನಿಯರಿಗೆ ಮಾಸಿಕ 2 ಸಾವಿರ ಹಣ ಹಾಕುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಬಡವರಿಗೆ 10 ಕೆ ಜಿ ಅಕ್ಕಿ ನೀಡಿದ್ದೇವೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಿದ್ದೇವೆ ಎಂದು ವಿವರಿಸಿದರು.ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಈ ಯೋಜನೆಗಳನ್ನು ಪ್ರಧಾನಮಂತ್ರಿ ಮೋದಿ ಅವರಿಂದ ಬಿಜೆಪಿ ಸ್ನೇಹಿತರು ಟೀಕಿಸಿದರು. ನಾವು ಪ್ರತಿ ವ?Àð 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಹಕ್ಕು ನೀಡಿ ಎಲ್ಲರ ಆಸ್ತಿ ದಾಖಲೆ ಸರಿ ಮಾಡುವುದರ ಜತೆಗೆ ಪಟ್ಟಾ ದಾಖಲೆ, ಹಕ್ಕು ಪತ್ರ ನೀಡಲಾಗಿದೆ. ಕಾಯಕದಿಂದ ನಾಯಕತ್ವ ಸಿಗುತ್ತದೆ. ಜನಪರವಾಗಿದ್ದರೆ ಮಾತ್ರ ಅಧಿಕಾರ ಸಿಗುತ್ತದೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರರೇ ಈಶ್ವರ ಎಂದು ನಿಮ್ಮನ್ನು ನಾವು ದೇವರಂತೆ ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳ ಖಾತೆಗಳನ್ನು ಮನೆ ಬಾಗಿಲಿಗೆ ನೀಡುತ್ತಿದ್ದೇವೆ. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಈ ಯೋಜನೆಗೆ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.ಹುಂಡಿ ಕಳ್ಳರಿಗೆ ತಕ್ಕ ಶಿಕ್ಷೆ ನೀಡಿ: ಈ ದೇಶದಲ್ಲಿ ಮತ ಕಳ್ಳತನ ನಡೆಯಿತು, ಹುಂಡಿ ಕಳ್ಳತನವೂ ಆಗಿದೆ. ನಮ್ಮ ಜನ ರಾಮ, ರಾಮ ಎಂದು ದೇಣಿಗೆ ಕೊಟ್ಟರು. ಅದನ್ನು ಕಳ್ಳತನ ಮಾಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಹುಂಡಿ ಹಾಗೂ ನಿಮ್ಮ ಕಾಣಿಕೆ ಕಾಪಾಡಲು ದೊಡ್ಡ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದನ್ನು ಪೊಲೀಸ್ ಠಾಣೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ವಿಚಾರದಲ್ಲಿ ನೀವು ಹೋರಾಟ ಮಾಡಿ ತೀರ್ಪು ನೀಡಬೇಕು. ದೇವರ ಹುಂಡಿಗೆ ಕೈಹಾಕಿದವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಕರೆಕೊಟ್ಟರು.ಸರ್ಕಾರದಿಂದ ಅನೇಕ ಕಾರ್ಯಕ್ರಮ: ರಾಜ್ಯದಲ್ಲಿ ಯುವಕರಿಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಜಾತ್ಯಾತೀತ ಮನೋಭಾವ, ನಾಯಕತ್ವ ಗುಣ ಬೆಳೆಸಲು ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದಲ್ಲಿ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಮುಂದಾಗಿದ್ದೇವೆ. ಈ ಸಂಘದಲ್ಲಿ 16-40  ಯುವಕರು ಸದಸ್ಯರಾಗಬಹುದು. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷದಂತೆ ಒಟ್ಟು 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗಿದೆ ಎಂದರು.ಒಗ್ಗಟ್ಟಿನಲ್ಲಿ ಬಲವಿದೆ, ಜಿಲ್ಲೆಯ ಎಲ್ಲಾ ಶಾಸಕರೂ ಮುಖ್ಯಮಂತ್ರಿ, ಸಚಿವರೇ: ಜಿಲ್ಲೆಯ ಎಲ್ಲಾ ಶಾಸಕರು ಆಧಾರ ಸ್ತಂಭವಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ. ಮಂತ್ರಿ ಮಂಡಲದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಆಗಿಲ್ಲ. ಆದರೆ ಈ ಜಿಲ್ಲೆಯ ಪ್ರತಿ ಶಾಸಕರೂ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು. ಅವರಿಗೆ ಶಕ್ತಿ ತುಂಬುವ ಕೆಲಸ ನಾನು ಮಾಡುವೆ. ಅದು ನನ್ನ ಕರ್ತವ್ಯ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಜಿಲ್ಲಾ ಮಂತ್ರಿಗಳು ಪ್ರತಿ ತಾಲ್ಲೂಕಿನಲ್ಲಿ 15 ದಿನಕ್ಕೊಮ್ಮೆ ಜನರ ಅಹವಾಲು ಸ್ವೀಕರಿಸಲಿದ್ದಾರೆ. ಶಾಸಕರು ಪಂಚಾಯಿತಿಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಬೇಕು. ಅದಕ್ಕಾಗಿ ಪ್ರಜಾಸೇವೆ ಇಲಾಖೆ ಪ್ರಾರಂಭಿಸುತ್ತಿದ್ದೇವೆ ಎಂದರು.ಬಜೆಟ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಘೋಷÀಣೆಯಾಗಿದೆ. ಕೋಲಾರ ಎಪಿಎಂಸಿಗೆ 60 ಎಕರೆ ಮಂಜೂರಿಗೆ ಸಿದ್ಧತೆಯಾಗುತ್ತಿದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ನಂಜೇಗೌಡರು, ಸಾಧನೆ, ಆಶೀರ್ವಾದ ಎರಡನ್ನು ತೋರಿಸಿದ್ದಾರೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಕಾರ್ಯಕ್ರಮ ಇತಿಹಾಸ ಪುಟ ಸೇರುತ್ತದೆ. ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ತಿಳಿಸಿದರು.
ಶಾಸಕ ಕೆ ವೈ ನಂಜೇಗೌಡ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 3200 ಕೋಟಿ ರೂಗಳಷ್ಟ್ಟು ಅನುದಾನವನ್ನು ನೀಡಿದ್ದಾರೆ. ಜಿಲ್ಲೆ ಮಂತ್ರಿ ಸ್ಥಾನ ನೀಡದಿದ್ದರೂ ಸಹ ಜಿಲ್ಲೆಯ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಸಾಕಾರ ನೀಡಬೇಕು ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ 2028ಕ್ಕೆ 6 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಚ್.ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕ್ಯಾಪಟರ್ ಮೂಲಕ ಕಟ್ಟಿಗೆನಹಳ್ಳಿ ಗೇಟ ಬಳಿಯ ಪಾಲಿ ಟೆಕ್ನೀಕ್ ಕಟ್ಟಡ ಸಮಿಪ ಇಳಿದು ಅಲ್ಲಿಂದ ಕಾರ್ಯಕ್ರಮ ನಡೆಯುವ ವೇದಿಕೆಯ ಬಳಿಗೆ ಬೆಂಗಾವಲಿನಲ್ಲಿ ಕಾರ್‌ನಲ್ಲಿ ಆಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದರು. ಕಾರ್ಯಕ್ರಮಕ್ಕೂ ಮೊದಲು ಸರ್ಕಾರದ ಯೋಜನೆಗಳ ಅಂಗಡಿ ಮಳಿಗೆಗಳ ಉದ್ಘಾಟನೆ ಮಾಡಿ ವೇದಿಕೆಗೆ ಜನರತ್ತ ಕೈಬಿಸುವ ಮೂಲಕ ಆಗಮಿಸಿದರು. ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಸ್‌ಗಳ ಮೂಲಕ ಆಗಮಿಸಿದ್ದ ಜನರಿಗೆ ಕಾರ್ಯಕ್ರಮದ ನಂತರ ಸಿರೆ ಉಡುಗೊರೆ ಊಟದ ಬಾಕ್ಸ್ಗಳನ್ನು ನೀಡಲಾಯಿತು. ಮುಖ್ಯಮಂತ್ರಿಗಳು ಸಚಿವರಿಗೆ ವೇದಿಕೆ ಹಿಂಭಾಗ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಶಾಂತಿಯುತವಾಗಿ ನಡೆಯಲು ಐಜಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಎಸ್‌ಪಿಗಳು ಸೂಕ್ತ ಪೋಲೀಸ್ ಬಂದೋಬಸ್ತ್ ಮಾಡಿದ್ದರು.  ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ರಾಮಲಿಂಗ ರೆಡ್ಡಿ, ಯತೀಂದ್ರ ಸಿದ್ದರಾಮಯ್ಯ, ಕೆಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಯು.ಟಿ.ಖಾದರ್ ಮಾತನಾಡಿದರು. ಶಾಸಕರಾದ ಕೊತ್ತೂರ್ ಮಂಜುನಾಥ್, ವೆಂಕಟಶಿವಾರೆಡಿ,್ಡ ಎಸ್ ಎನ್ ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ರೂಪ ಶಶಿಧರ್, ಎಂಸಿ ಸುಧಾಕರ್, ಜಿಲ್ಲಾ ಆಡಳಿತ ಕಾರ್ಯದರ್ಶಿ ಸಲ್ಮಾ ಜಿಲ್ಲಾಧಿಕಾರಿ ಎಂಆರ್ ರವಿಕುಮಾರ್, ಎಂಎಲ್‌ಸಿಗಳಾದ ಅನಿಲ್ ಕುಮಾರ್, ಡಿಟಿ ಶ್ರೀನಿವಾಸ್, ನಜೀರ್ ಅಹ್ಮದ್, ತಿಗಳ ನಿಗಮ ಮಂಡಳಿ ಅಧ್ಯಕ್ಷ ಎಲ್.ಎ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ ಆರ್ ಸುದರ್ಶನ್, ಮಾಜಿ ಶಾಸಕ ಎನ್ ನಾಗರಾಜ್, ಮುಖಂಡರಾದ ರಾಮಪ್ರಸಾದ್, ಬಿಸಿ ಮುದ್ದು ಗಂಗಾಧರ್, ಜಿಲ್ಲಾ ಪಂಚಾಯತ್ ಸಿಇಓ ಪ್ರವೀಣ್ ಬಾಗೇವಾಡಿ, ಎಡಿಸಿ ಮಂಗಳ, ಡಿಐಜಿ ಗಿರೀಶ್, ಎಸ್‌ಪಿ ಕನಿಕ ಸಿಕ್ರಿವಾಲ್, ಜಿಲ್ಲಾ ಉಪ ವಿಭಾಗ ಅಧಿಕಾರಿ ರೇಣುಕಾ ಪ್ರಸಾದ್ ಜಂಬರಗಿ,  ಜೀಪಂ ಉಪ ಕಾರ್ಯದರ್ಶಿ ರಮೇಶ್, ತಹಶೀಲ್ದಾರ್ ಎಂ.ವಿ.ರೂಪ, ಇಒವಿ ಕೃಷ್ಣಪ್ಪ ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST