ಮಧುಗಿರಿ: ಜಿಲ್ಲೆಯಲ್ಲಿ ಕೇವಲ 24 ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಶಾಸಕ ಕೆ.ಎನ್. ರಾಜಣ್ಣ ಹಾಗೂ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಧುಗಿರಿ ಉಪವಿಭಾಗದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಜಿ. ಪರಮೇಶ್ವರ್, ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಅರಿತು ಅಧಿಕಾರಿಗಳು ಸಭೆಗೆ ನಿಖರ ಮಾಹಿತಿ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಎಲ್ಲ ಗ್ರಾಮಗಳನ್ನು ಗುರುತಿಸಿ, ಜನರಿಗೆ ಯಾವುದೇ ಕಾರಣಕ್ಕೂ ನೀರಿನ ಕೊರತೆಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಕೂಡಲೇ ಕೊಳವೆಬಾವಿ ಕೊರೆಸಿ ನೀರು ಪೂರೈಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜ ನೆಯಡಿ ಒಟ್ಟು 1,325 ಕಾಮಗಾರಿಗಳು ಪ್ರಗತಿಯಲ್ಲಿದ್ದು, 411 ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಇದರಿಂದ ಅಸಮಾಧಾನಗೊಂಡ ಪರಮೇಶ್ವರ್, 2022 ರಲ್ಲಿ ಆರಂಭಗೊAಡ ಜಲಜೀವನ್ ಮಿಷನ್ ಕಾಮಗಾರಿಗಳು 2026 ಬಂದರೂ ಪೂರ್ಣಗೊಂಡಿಲ್ಲ,ಬಾಕಿ ಕಾಮಗಾರಿಗಳನ್ನು ಯಾವಾಗ ಆರಂಭಿಸಿ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿದರು. ಯೋಜನೆಯಿಂದ ಜನರಿಗೆ ನಿರೀಕ್ಷಿತ ಪ್ರಯೋಜನ ದೊರೆಯದ ಕಾರಣ ಅನುಷ್ಠಾನವೇ ವಿಫಲವಾಗಿದೆ ಎಂಬ ಭಾವನೆ ಮೂಡಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕಾಮಗಾರಿಗಳ ಪ್ರಗತಿ, ಬಾಕಿ ಇರುವ ಕಾಮಗಾರಿಗಳ ಸಂಖ್ಯೆ ಹಾಗೂ ಅವುಗಳನ್ನು ಪೂರ್ಣಗೊಳಿಸುವ ಗಡುವಿನ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಸೂಚಿಸಿದರು.ಜಿಲ್ಲಾ ಮಟ್ಟದ ಸಭೆಗಳಿಗೆ ಒಂದು ರೀತಿಯ ಅಂಕಿಅAಶ ಹಾಗೂ ತಾಲೂಕು ಮಟ್ಟದ ಸಭೆಗಳಿಗೆ ಮತ್ತೊಂದು ರೀತಿಯ ಮಾಹಿತಿ ನೀಡಲಾಗುತ್ತಿದೆ. ಅಧಿಕಾರಿಗಳು ನೀಡುತ್ತಿರುವ ಡೇಟಾಗಳೇ ಸರಿಯಾಗಿಲ್ಲ. ವಾಸ್ತವ ಸ್ಥಿತಿಯನ್ನು ಮರೆಮಾಚಿ ತಪುö್ಪ ಮಾಹಿತಿ ನೀಡುವುದನ್ನು ಸಹಿಸುವುದಿಲ್ಲ ಎಂದು ಪರಮೇಶ್ವರ್ ಎಚ್ಚರಿಸಿದರು.ಮುಂದಿನ ಸಭೆಗಳಲ್ಲಿ ನಿಖರ ಹಾಗೂ ವಾಸ್ತವಿಕ ಮಾಹಿತಿಯನ್ನೇ ನೀಡಬೇಕು. ಇದೇ ರೀತಿ ತಪುö್ಪ ಮಾಹಿತಿ ನೀಡುವುದು ಮುಂದುವರಿದರೆ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಜನರು ಗುಳೆ ಹೋಗದಂತೆ ವಿಬಿಜಿ ರಾಮ್ ಜಿ ಕಾಮಗಾರಿಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು. ಜಿಲ್ಲೆಯಲ್ಲಿ 51 ಸಾವಿರ ಕಾಮಗಾರಿಗಳನ್ನು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದರೂ, ಎಲ್ಲ ತಾಲೂಕುಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಕುರಿತು ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಎಚ್ಚರಿಸಿದರು.ರಸ್ತೆ ಹಾಳು: ರಾಜಣ್ಣ ಆಕ್ರೋಶ; ಜಲಜೀವನ್ ಮಿಷನ್ ಕಾಮಗಾರಿಗಾಗಿ ಗ್ರಾಮೀಣ ಪ್ರದೇಶಗಳ ರಸ್ತೆಗಳು ಅಗೆದು ಹಾಳು ಮಾಡಿರುವ ಬಗ್ಗೆ ಶಾಸಕ ಕೆ.ಎನ್. ರಾಜಣ್ಣ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಜಲಜೀವನ್ ಮಿಷನ್ ಕಾಮಗಾರಿ ಕೈಗೊಂಡ ಬಳಿಕ ರಸ್ತೆಗಳನ್ನೆಲ್ಲ ಅಗೆದು ಹಾಳು ಮಾಡಲಾಗಿದೆ. ಒಂದೆಡೆ ಜನರಿಗೆ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ. ಮತ್ತೊಂದೆಡೆ ಉತ್ತಮವಾಗಿದ್ದ ರಸ್ತೆಗಳು ಹಾಳಾಗಿವೆ. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ಪುನರ್‌ನಿರ್ಮಿಸಲು ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಹೇಳಿದರು.ತಾಲ್ಲೂಕಿನಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿಗಳ ಕ್ರಿಯಾವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ರೈತರಿಗೆ ವಿಮಾ ಯೋಜನೆಗಳ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು. ವಿಮಾ ಪರಿಹಾರ ಸೇರಿದಂತೆ ರೈತರಿಗೆ ಸಂಬAಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಸೂಚಿಸಿದರು.ಶಾಸಕರಾದ ಕೆ.ಎನ್. ರಾಜಣ್ಣ, ಎಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾರೋಗೇರೆ ಮಹೇಶ್, ಡಿಎಸ್2 ಸಂಜೀವಪ್ಪ, ಉಪ ವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ, ಡಿವೈಎಸ್‌ಪಿ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಇಒ ಗಳಾದ ಉತ್ತಮ್, ಮಧುಸೂದನ್, ಎಒ ಧನಂಜಯ ಇದ್ದರು.