LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಅನುಭವ ಮಂಟಪ ವಿಚಾರ ಮಂಥನ

ಕೋಲಾರ: ಬುದ್ಧ, ಮಹಾವೀರ, ಬಸವಣ್ಣನಂತಹ ಮಹಾಪುರುಷರು ಕಾಲಕಾಲಕ್ಕೆ ಮಾನವನ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದು, ನಾವು ನಿಜವಾದ ಮನುಷ್ಯರೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಪ್ರೇರೇಪಿಸಿದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ತಿಳಿಸಿದರು.
12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ `ಅನುಭವ ಮಂಟಪ'ದ ಉದಾತ್ತ ಆಶಯಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ತನ್ನ ಸುವರ್ಣಗಂಗೆ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿರುವ `ಅನುಭವ ಮಂಟಪ ವಿಚಾರ ಮಂಥನ ಮಾಲೆ - 1' ರ ಚೊಚ್ಚಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅನುಭವ' ಮತ್ತು `ಅನುಭಾವ'ದ ವ್ಯತ್ಯಾಸಗಳನ್ನು ತಿಳಿಸಿದ ಅವರು "ಬಸವಣ್ಣ ಇಂದಿಗೆ ಯಾಕೆ ಮುಖ್ಯ" ಎಂಬ ವಿಷಯದ ಕುರಿತು ಮಾತನಾಡಿ, ನಮ್ಮ ಅಧ್ಯಯನದಲ್ಲಿ `ಅನುಭವ' ಮತ್ತು `ಅನುಭಾವ' ಎಂಬ ಎರಡು ಶಬ್ದಗಳು ಪ್ರಮುಖವಾಗಿ ಎದ್ದು ಕಾಣುತ್ತವೆ. ಅನುಭವವು ದಿನನಿತ್ಯ ಎಲ್ಲರಿಗೂ ಆಗುತ್ತದೆ. ಆದರೆ, ಆ ಅನುಭವಗಳು ಹೆಚ್ಚಾದಂತೆಲ್ಲಾ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಮತ್ತೊಬ್ಬರಿಗೆ ಮಾದರಿಯಾಗುವವರೇ `ಅನುಭಾವಿಗಳು' ಎಂದರು.
ಬಸವಣ್ಣ ಕೇವಲ ಅಂದಿನ ಕಾಲಕ್ಕೆ ಮಾತ್ರವಲ್ಲ, ಮುಂದಿನ ಹಲವಾರು ಜನಾಂಗಗಳ ಪ್ರಶ್ನೆಗಳಿಗೂ ಉತ್ತರವಾಗಿ ನಿಲ್ಲುತ್ತಾರೆ. ಧರ್ಮಾತೀತ ಹಾಗೂ ಜಾತ್ಯತೀತವಾಗಿ ಬಸವಣ್ಣನನ್ನು ಪದೇಪದೇ ನೆನಪಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಉತ್ತರ ವಿವಿಯು `ಅನುಭವ ಮಂಟಪ' ವೇದಿಕೆಯನ್ನು ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕರ್ನಾಟಕ ಸರ್ಕಾರವು ಬಸವಣ್ಣನವರನ್ನು `ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿರುವುದರ ಹಿಂದಿನ ಆಶಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ ಪ್ರೊ. ಪರಮಶಿವಮೂರ್ತಿ ಅವರು, ಬಸವಣ್ಣನವರ ಬಾಲ್ಯದ ಶಿಕ್ಷಣ, ಪ್ರಶ್ನಿಸುವ ಮನೋಭಾವ ಮತ್ತು ವೈಚಾರಿಕತೆಯನ್ನು ನೆನಪಿಸಿಕೊಂಡರು.
ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದಬ್ಬಾಳಿಕೆ ಹಾಗೂ ಶೋಷಣೆಯನ್ನು ತಡೆಯಲು ಬಸವಣ್ಣನವರು ತಂದ `ಇಷ್ಟಲಿಂಗ'ದ ಪರಿಕಲ್ಪನೆ ಮತ್ತು ದೇಹವನ್ನೇ ದೇಗುಲವಾಗಿಸಿದ ಕಲ್ಪನೆ ಅಂದಿನ ಕಾಲಕ್ಕೆ ಅತ್ಯಂತ ಕ್ರಾಂತಿಕಾರಕವಾಗಿತ್ತು ಎಂದರು.
ಅಂದು ಕಲ್ಯಾಣದಲ್ಲಿ ನಿರ್ಮಾಣವಾದ `ಅನುಭವ ಮಂಟಪ'ವು ಎಲ್ಲ ಜಾತಿ, ವರ್ಗಗಳ ಜನರ ಧಾರ್ಮಿಕ ಸಂಗಮವಾಗಿ, ಒಂದು `ಜನತಾ ವಿಶ್ವವಿದ್ಯಾಲಯ'ವಾಗಿ ಹೊರಹೊಮ್ಮಿತು.
ಬಸವಣ್ಣನವರ ಲಭ್ಯವಿರುವ 1415 ವಚನಗಳು ಅವರ ಕ್ರಾಂತಿಕಾರಿ ಚಿಂತನೆಗಳನ್ನು ನಮಗೆ ಪರಿಚಯಿಸುತ್ತವೆ. "ಬಸವಣ್ಣನವರನ್ನು ಕೇವಲ ಪೂಜೆ, ಆಚರಣೆಗಳಿಗೆ ಸೀಮಿತಗೊಳಿಸದೆ, ಅವರ ತತ್ವಗಳಲ್ಲಿ ಕನಿಷ್ಠ ಒಂದನ್ನಾದರೂ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ, ಇಂದಿನ ವಿದ್ಯಾರ್ಥಿಗಳಿಗೆ ಬಸವಣ್ಣನವರ ಸಮ ಸಮಾಜದ ಸಿದ್ಧಾಂತ ಮತ್ತು ಸಂದೇಶವನ್ನು ತಲುಪಿಸುವುದು ಅತ್ಯಗತ್ಯ. ಇದಕ್ಕಾಗಿ 'ಅನುಭವ ಮಂಟಪ' ವೇದಿಕೆ ವಿಶ್ವವಿದ್ಯಾಲಯದಲ್ಲಿ ಇರಬೇಕೆಂಬ ಆಶಯ ನಮ್ಮದು. ಈ ಕಾರಣಕ್ಕಾಗಿಯೇ ಬಸವ ಜಯಂತಿಯAದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಕೇವಲ ಬಸವ ಜಯಂತಿಗೆ ಸೀಮಿತವಾಗದೆ, ಈ ವೇದಿಕೆಯ ಮೂಲಕ ಬಸವಣ್ಣನವರ ಸಾಮಾಜಿಕ ಚಿಂತನೆಗಳನ್ನು ನಿರಂತರವಾಗಿ ಪರಿಚಯಿಸಲು ಸರಣಿ ರೂಪದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕೇವಲ ವಿಷಯ ತಜ್ಞರಲ್ಲದೆ, ಅಧ್ಯಾಪಕರು ಮತ್ತು ಸ್ವತಃ ವಿದ್ಯಾರ್ಥಿಗಳಿಂದಲೂ ವಿಶೇಷ ಉಪನ್ಯಾಸಗಳನ್ನು ನೀಡಲಾಗುವುದು ಎಂದರು.
ಕ್ಯಾAಪಸ್‌ಗಳು ತಂತ್ರಜ್ಞಾನವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕೆಂಬುದನ್ನು ಕಲಿಸಬೇಕು. ಜೊತೆಗೆ ವಿದ್ಯಾರ್ಥಿಗಳು ತಲೆಯಲ್ಲಿ ಪುಸ್ತಕದ ಜ್ಞಾನವನ್ನು ತುಂಬಿಸಿಕೊಳ್ಳುವುದು ಅಗತ್ಯವಾಗಿದೆ. ಇದರಿಂದ ಕನ್ನಡ ಜ್ಞಾನ ಪರಂಪರೆಯಾದ ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯ ಮುಂತಾದವುಗಳನ್ನು ಅರ್ಥಮಾಡಿಕೊಂಡು ನಮ್ಮ ಸಂಸ್ಕೃತಿಯನ್ನು ಇಂದಿನ ಕಾಲಕ್ಕೂ ಪ್ರಸ್ತುತವಾಗಿಸಬಹುದು ಎಂದು ಕುಲಪತಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್. ಲೋಕನಾಥ್, ಸುವರ್ಣಗಂಗೆ ಕ್ಯಾಂಪಸ್‌ನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ. ಡಿ. ಕುಮುದ , ಸಹ ಪ್ರಾದ್ಯಪಕರಾದ ಡಾ.ಎಂ.ಎನ್. ರಮೇಶ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು, ಸಾಹಿತ್ಯಾಸಕ್ತರು, ಸುವರ್ಣಗಂಗೆ ಕ್ಯಾಂಪಸ್ ನ ವಿಭಾಗಗಳ ಅಧ್ಯಾಪಕರುಗಳು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು