LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಬೆಡಗಿನೊಳಗಿನ ಬೆರಗು

ಅಲ್ಲಮ ಪ್ರಭುಗಳ ವಚನಗಳು ೨೭
ಅರಿವು ಅರಿವೆನ್ನುತ್ತಿಪ್ಪಿರಿ
ಅರಿವು ಸಾಮಾನ್ಯವೇ ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ
ಒಂದುಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು,
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು.
ಗುಹೇಶ್ವರನೆಂಬುದು ಬರಿದೆ ಬಹುದೆ, ಹೇಳಿರೆ?

ಭಾವಾರ್ಥ
ತ್ರಿಕಾಲ ಪ್ರಜ್ಞೆಯನ್ನು ಅಳಿದು ನೆಲೆಗೊಳ್ಳುವ ಆತ್ಮಾನುಭವದ ಮಹಾಪ್ರಭೆಯೇ ಅರಿವು. ಭೂತದ ಅನುಭವಗಳಿಂದ ಭವದಲ್ಲಿ ವಿರಕ್ತಿ ಮೂಡಿ, ವರ್ತಮಾನದ ವಿವೇಚನೆಗಳಿಂದ ಸತ್ಯದ ದಾರಿಯನ್ನು ಕಂಡುಕೊAಡು, ಭವಿಷ್ಯದಲ್ಲಿ ಪರಮ ಸತ್ಯವನ್ನು ಅರಿಯುವ ಮೂರು ಘಟ್ಟಗಳನ್ನು ಪ್ರಭುದೇವರು ವರ್ಣಿಸಿದ್ದಾರೆ. ಹೊರಗನ್ನು ನೋಡುವುದು ಅನುಭವವಾದರೆ, ಒಳಗನ್ನು ಕಾಣುವುದು ಅನುಭಾವ. ಅನುಭಾವದ ನಡೆಯೇ ಮುಂದಣ ಹೆಜ್ಜೆಯಾಗಿ, ಆ ಹೆಜ್ಜೆಯು ಅಳಿದಾಗ ಮಾತ್ರ ಮುಂದಿನ ನಡೆ ದೃಢವಾಗುತ್ತದೆ. ಕೊನೆಯಲ್ಲಿ ಅರಿವಿನೊಂದಿಗೆ `ನಾನು’ ಎಂಬ ಅಭಿಮಾನ ಅಳಿದು, ಗುಹೇಶ್ವರನೇ ನಾನೆಂಬ ಸ್ಥಿತಿ ಉಂಟಾಗುವುದನ್ನು ಪ್ರಭುದೇವರು, ಪ್ರಕೃತಿಯ ಸೊಬಗಿನ ದೃಷ್ಟಾಂತವನ್ನು ಬಳಸಿ ಹೇಳಿದ್ದಾರೆ. ಸಾಧಕನ ಮನವೆಂಬ ಮುಗಿಲಲ್ಲಿ ಗುಹೇಶ್ವರತ್ವವು ಮಿಂಚಿನAತೆ ಸುಳಿದು, ಅಂತರAಗದಲ್ಲಿ ಆವಿರ್ಭವಿಸುವ ಪರಿಯನ್ನು ಅಮೋಘವಾಗಿ ಮಿಂಚಿಸಿದ್ದಾರೆ ಪ್ರಭುದೇವರು.
ವಾಕ್ಯಾರ್ಥ
ಅರಿವು ಅರಿವೆನ್ನುತ್ತಿಪ್ಪಿರಿ ಅರಿವು ಸಾಮಾನ್ಯವೇ ?
ಯಾವುದೇ ಜ್ಞಾನವು ಇದ್ದಕ್ಕಿದ್ದಂತೆ ಉದಯಿಸಿ ಬಿಡುವುದಿಲ್ಲ. ಕ್ರಿಯಾ ಮಥನಗಳ ಪರಿಣಾಮವಾಗಿ, ಹಂತ, ಹಂತವಾಗಿ ಮೂಡುವ ತಿಳುವಳಿಕೆ ಅರಿವು. ಹಲವರು ಅರಿವಿನ ಬಗ್ಗೆ, ಅರಿತೆವು ಎನ್ನುವ ಬಗ್ಗೆ ಮಾತುಗಳನ್ನಾಡುತ್ತಿರುತ್ತಾರೆ. ಲೌಕಿಕದ ತಿಳುವಳಿಕೆಗಳಾವುವೂ ಆತ್ಮಜ್ಞಾನ ಆಗಲಾರದು. ಆತ್ಮ ಜ್ಞಾನದ ತಿಳಿವೇ ಅರಿವು. ಈ ಅರಿವು ಸುಲಭ ಸಾಧ್ಯವಾಗುವಂಥದ್ದಲ್ಲ. ಓದಿನಿಂದಲೋ, ಆಲಿಸುವಿಕೆಯಿಂದಲೋ ಪಡೆಯುವುದು ಆಗದ ಮಾತು. ಸಾಧನೆ ಮಾಡುತ್ತಾ ಪಡೆದ ಅನುಭವ ಆತ್ಮಾನುಸಂಧಾನದಡೆಗೆ ಒಯ್ದು ಅನುಭಾವಿಯನ್ನಾಗಿಸುತ್ತದೆ. ಅಂತರಂಗದಲ್ಲಿ ಜ್ಞಾನ ಮತ್ತು ಸಂಸಾರ ವಿರಕ್ತಿಗಳನ್ನು ಹೊಂದಿ, ಸಾಕ್ಷಾತ್ಕಾರ ಪಡೆಯುವುದು ಸಾಧಾರಣ ವಿಚಾರವಲ್ಲ ಎನ್ನುತ್ತಾರೆ ಪ್ರಭುದೇವರು.
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಹಿಂದಿನ ಹೆಜ್ಜೆ ಎಂದರೆ ಹಿಂದೆ ನಡೆದು ಬಂದ ಪ್ರಾಪಂಚಿಕದ ದಾರಿ. ಬಾಹ್ಯ ಜಗತ್ತಿನೊಂದಿಗೆ ಕಟ್ಟಿ ಹಾಕುವ ಅನೇಕ ಮೋಹ ಪಾಷಗಳಿವೆ ಅಲ್ಲಿ. ನಾನು, ನನ್ನದೆನ್ನುವ ಅಹಂಭಾವದ್ದೇ ಮೇಲುಗೈ ಆದ ದಾರಿಯದು. ಆತ್ಮಲಿಂಗದಡೆಗೆ ಸಾಗಬೇಕಾದರೆ, ಮೊದಲು ಈ ಪ್ರಾಪಂಚಿಕದ ವ್ಯವಹಾರಗಳನ್ನು ಸರಿಯಾಗಿ ಅರಿಯಬೇಕು. ಅರಿಷಡ್ವರ್ಗಗಳ ಬಾಧೆಯನ್ನು ತಿಳಿಯಬೇಕು. ಷಡೂರ್ಮೆಗಳಾದ ಹಸಿವು - ಬಾಯಾರಿಕೆ, ಮೋಹ - ಶೋಕ, ವೃದ್ಧಾಪ್ಯ - ಸಾವು ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಇವು ಸಾಂಸಾರಿಕ ನೆಲೆಯಲ್ಲಿ ಮಹತ್ವದ ವಿಚಾರಗಳು. ಈ ಜಗತ್ತಿನ ವೈಷಯಿಕ ಸೆಳೆತಗಳು ದುಃಖಕ್ಕೆ ಮೂಲ ಕಾರಣ ಎನ್ನುವುದನ್ನು ಈ ಮೂಲಕ ಅರ್ಥಮಾಡಿಕೊಳ್ಳಬೇಕು. ಹೀಗೆ ಮೂಡುವ ತಿಳುವಳಿಕೆಯಿಂದ ಆ ದಾರಿಯ ಬಗ್ಗೆ ನಿಜವಾದ ವೈರಾಗ್ಯ ಭಾವ ಮೂಡಿ, ಆತ್ಮಜ್ಞಾನದ ಮಾರ್ಗಕ್ಕೆ ಶುದ್ಧಾಂತಃಕರಣದಿAದ ತೆರೆದುಕೊಳ್ಳುವುದು ಸಾಧ್ಯ. ಸಾಕ್ಷಾತ್ಕಾರದ ದಾರಿಯಲ್ಲಿ ದೃಢವಾಗಿ ಇಡುವ ಹೆಜ್ಜೆಯೇ ಸಾಧಕನು ನಿಂದ ಹೆಜ್ಜೆ. ಈಗ ಸಾಧಕನು ನಿಂದ ಹೆಜ್ಜೆಗೆ ಹಿಂದಿನ ಹೆಜ್ಜೆಯಿಂದ ಪಡೆದ ವಿರಕ್ತ ಭಾವವೇ ಪ್ರೇರಣೆ ಮತ್ತು ಕಾರಣ. ಹಿಂದಿನ ನಡೆಯಿಂದ ಬಂದ ವೈರಾಗ್ಯ ಭಾವ ಗಟ್ಟಿಯಾಗಿ, ಈಗ ನಿಂತ ಹೆಜ್ಜೆ ಧೀರತೆಯೆಡೆಗೆ ಕೊಂಡೊಯ್ಯುವ ಸ್ಪೂರ್ತಿಯ ಸೆಲೆಯಾಗುತ್ತದೆ.
ಮುಂದಣ ಹೆಜ್ಜೆಯಳಿದಲ್ಲದೆ
ಒಂದು ಪಾದ ನೆಲೆಗೊಳ್ಳದು.
ಹೀಗೆ ಸಾಧನೋಪಾಯದಲ್ಲಿರುವ ಸಾಧಕನಿಗೆ ಆತ್ಮಜ್ಞಾನದ ಕಡೆಗೆ ಮನಕೇಂದ್ರಿತವಾಗಿ ಉಳಿದೆಲ್ಲವೂ ನಗಣ್ಯವಾಗುತ್ತವೆ. ದೈನಂದಿನ ವ್ಯವಹಾರಗಳು, ಕಾಯಕ ಎಲ್ಲದರಲ್ಲೂ ಆತ್ಮಲಿಂಗದ ಧ್ಯಾನವೇ ತುಂಬಿ, ಮನ - ಬುದ್ಧಿಗಳನ್ನೆಲ್ಲ ಪರಮ ಸತ್ಯ ಆವರಿಸಿಕೊಳ್ಳಲಾರಂಭಿಸುತ್ತದೆ. ಪರತತ್ವವನ್ನುಳಿದು ಬೇರಾವುದೂ ಇಲ್ಲ ಎನ್ನುವ ಏಕೀ ಭಾವದೆಡೆಗೆ ಸಾಧಕ ಗಮಿಸುತ್ತಿರುತ್ತಾನೆ. ಹೀಗೆ ಸಾಗುವ ಸಾಧಕನು ಆತ್ಮಾನುಸಂಧಾನ ಹೊಂದಿ ತನ್ನ ಗಮ್ಯ ಸೇರುತ್ತಾನೆ. ಪರಮಜ್ಞಾನಿಯಾಗಿ, ಸತ್ ಚಿತ್ ಆನಂದ ಸ್ವರೂಪವೇ ತಾನೆಂಬ ತಿಳಿವು ಮೂಡಿ, ಕೊನೆಯಲ್ಲಿ ಆ ಭಾವವೂ ಅಳಿಯುತ್ತದೆ. ಹೀಗೆ ಎಲ್ಲವೂ ಅಳಿದು, ಎಲ್ಲವನ್ನೂ ಮೀರಿ, ಅನಿಕೇತನನಾಗುವ ಸಾಧಕನಲ್ಲಿ ಉಳಿಯುವುದು ಆತ್ಮಜ್ಞಾನ ಮಾತ್ರ. ಮುಂದಣ ಹೆಜ್ಜೆ ಎಂದರೆ ತನ್ನ ಮೂಲ ಸ್ವರೂಪವನ್ನು ಅರಿತ ಭಾವ. ತಾನು ಅರಿತಿದ್ದೇನೆ ಎನ್ನುವ ಭಾವಾಭಿಮಾನವನ್ನು ಸಹ ಕಳೆದು ಕೇವಲ ಆತ್ಮ ಜ್ಞಾನವಷ್ಟೇ ಉಳಿಯುವ ನಿಲುವಿನಲ್ಲಿ ಸಾಧಕನು ನಿಲ್ಲುತ್ತಾನೆ.
ನೆಲನ ಬಿಟ್ಟು ಆಕಾಶದಲ್ಲಿ ನಿಂದು,
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು.
ಇಂತಾಗಿ ಆತ್ಮಜ್ಞಾನ ಪಡೆದ ಸಾಧಕನ ಮುಂದಿನ ಸ್ಥಿತಿ ಹೀಗಿದೆ. ನೆಲವೆಂದರೆ ಭೌತಿಕವಾಗಿ, ಪ್ರಾಪಂಚಿಕ ವಿಷಯಗಳಿಗೆ ನೆಲೆಯಾದ ಜಗತ್ತೂ ಹೌದು, ಬಾಹ್ಯಕ್ಕೆ ಗೋಚರವಾಗುವ ಜಡ ಶರೀರ ಭಾವವೂ ಹೌದು. ಈ ಎಲ್ಲಾ ಭಾವಗಳನ್ನು ಕಳೆದುಕೊಂಡು, ಎಲ್ಲ ಸೀಮೆಗಳನ್ನು ಮೀರಿ, ಆಕಾಶ, ಎಂದರೆ ಚೈತನ್ಯ ಸ್ವರೂಪದೊಂದಿಗೆ ಬೆರೆತು, ಅದ್ವೆöತ ಭಾವ ತಳೆಯುತ್ತಾನೆ. ಅದು ಪರಮಾನಂದದ ಸ್ಥಿತಿ. ಅಲ್ಲಿ ಕಷ್ಟ ಕೋಟಲೆಗಳಿಗೆ ಜಾಗವಿಲ್ಲ. ಆತ್ಯಂತಿಕ ದುಃಖ ನಿವೃತ್ತಿ, ನಿರತಿಶಯ ಸುಖ ಪ್ರಾಪ್ತಿ ಎನ್ನುವಂತೆ, ದುಃಖಮಿಶ್ರಿತ ಸುಖ ಅದಲ್ಲ, ಅತೃಪ್ತಿ ಒಡಗೂಡಿದ ಸುಖವೂ ಅದಲ್ಲ. ಇನ್ನೇನೋ ಬೇಕು ಎನ್ನುವ ಬೇಡಿಕೆ ಇಲ್ಲದ, `ಅಲಂ ಭಾವಃ’ ಎನ್ನುವ ಸಂತೃಪ್ತಿಯ ಸುಖ ಅದು. ಪ್ರಾಪಂಚಿಕ ಸುಖದಲ್ಲಿ ಸುಖ, ಸೌಖ್ಯಗಳೊಂದಿಗೆ ಒಂದಿಷ್ಟು ಕೊರತೆಯೂ ಮಿಳಿತವಾಗಿಯೇ ಇರುತ್ತದೆ. ಆದರೆ, ಆತ್ಯಂತಿಕ ಆನಂದದಲ್ಲಿ, ಕೊರತೆಯೇ ಇಲ್ಲದ ಪೂರ್ಣತೆಯ ಭಾವ ಆವರಿಸುತ್ತದೆ.
ಮುಗಿಲೆಂದರೆ ಘನವಾದ ಬಯಲು. ಮಿಂಚೆಂದರೆ ಹೊಳೆವ, ಪ್ರಜ್ವಲಿಸುವ ಬೆಳಕು. ಅಂಧಕಾರದಲ್ಲಿ ಮಿನುಗುವ ಜ್ಞಾನದ ಬೆಳಕು ಅದು. ಆತ್ಮಜ್ಞಾನದ ಬೆಳಕಿನ ಹೊಳಹಿನ ಮಿಂಚು ಅದು. ಹೀಗೆ ಸಾಧಕನು ಅರಿವಿನ ಬೆಳಕೇ ತಾನಾಗುತ್ತಾನೆ. ಅದೇ ಮಹಾ ಅನುಸಂಧಾನ. ಅದು ಆತ್ಮಾನುಸಂಧಾನ.
ಗುಹೇಶ್ವರನೆಂಬುದು ಬರಿದೆ ಬಹುದೇ, ಹೇಳಿರೆ?
ಪರಬ್ರಹ್ಮವನ್ನರಿಯುವುದು ಬೇರೆ ವಿಷಯಗಳನ್ನು ತಿಳಿಯುವಷ್ಟು ಸುಲಭವಲ್ಲ. ನೋಟ, ಕಲ್ಪನೆ ಯಾವುದಕ್ಕೂ ಸಿಗದ, ಅಣುವಿಗೆ ಅಣವಾಗಿ, ಬೃಹತ್ತಿಗೆ ಬೃಹತ್ ಆಗಿರುವ ಪರಬ್ರಹ್ಮವನ್ನು ಅನುಭವದಲ್ಲಷ್ಟೇ ಹೊಂದಬಹುದು. ಅರಿವಿನ ಉಪಾಯಗಳು ಸಹ ಸುಲಭವೇನಲ್ಲ. ಅರಿವಿನ ದಾರಿಯನ್ನು ತಿಳಿಯುವುದೊಂದು ಕಠಿಣ ಸಂಗತಿಯಾದರೆ, ಆ ದಾರಿಯಲ್ಲಿ ಸಾಗುವುದು ಇನ್ನೂ ಕಠಿಣ. ಸಾಧನಾ ಮಾರ್ಗದಲ್ಲಿ ಸಾಗಿ ಗುಹೇಶ್ವರನನ್ನು ತಲುಪುವುದು ಕಠಿಣಾತಿ ಕಠಿಣ. ಅಪೇಕ್ಷೆ, ಅಹಂಕಾರ, ಅಭಿನಿವೇಶಗಳನ್ನಳಿದು, ಆತ್ಮಾನುಭವಿ ಆದವ ಜೀವನ್ಮುಕ್ತನಾಗಿ, ಗುಹೇಶ್ವರನನ್ನು ಹೊಂದಬಲ್ಲ. `ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ’ ಎಂಬುದು ಪ್ರಭುದೇವರ ಕಾಣ್ಕೆ.
ಶ್ರೀ ಸಿದ್ದೇಶ್ವರ ಸ್ವಾಮಿಗಳ ಚರಣಗಳಿಗೆ ಶ್ರದ್ಧಾಪೂರ್ವಕ ಅರ್ಪಣೆ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು