ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ `ನೆಕ್ಸ್ಟ್ ಲೆವೆಲ್’ ಆರಂಭವಾಗಿದೆ. ಮುಹೂರ್ತ ಸಮಾರಂಭ ನೆರವೇರಿತು. ಉಪೇಂದ್ರ ಅವರ ಪುತ್ರ ಆಯುಷ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದರು. ಈ ಮುಹೂರ್ತ ಸಮಾರಂಭದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ನಟಿ ಮಾಲಾಶ್ರೀ ಹಾಜರಿದ್ದು ಶುಭ ಹಾರೈಸಿದರು.ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಜೋಡಿಯಾಗಿದ್ದಾರೆ. ಆರಾಧನಾಗೆ ಇದು ಎರಡನೇ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಉಪೇಂದ್ರ ಅವರ ಜೊತೆಗೆ ಅವರ ಸಹೋದರನ ಮಗ, ನಟ ನಿರಂಜನ್ ಸುಧೀಂದ್ರ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದೇ ಸಿನಿಮಾದಲ್ಲಿ ಚಿಕ್ಕಪ್ಪ-ಮಗ ಇದ್ದಾರೆ. ನಿರ್ಮಾಪಕ ತರುಣ್ ಶಿವಪ್ಪ, ತಮ್ಮದೇ ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಉಪೇಂದ್ರ ಅವರ ಹಳೆಯ ಕ್ಲಾಸಿಕ್ ಹಿಟ್‌ಗಳಾದ ‘ಎ’, ‘ಉಪೇಂದ್ರ’ ಮತ್ತು ‘ರಕ್ತಕಣ್ಣೀರು’ ಶೈಲಿಯ ಸಿನಿಮಾವಾಗಿದ್ದು, ಇವತ್ತಿನ ಜನರೇಶನ್‌ಗೆ ತಕ್ಕಂತೆ ಉಪ್ಪಿ ಅವರ ವಿಶಿಷ್ಟ ಶೈಲಿಯ ಪಾತ್ರವನ್ನು ರೂಪಿಸಲಾಗಿದೆಯಂತೆ.