ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ೧೨ ಮಂದಿ ಸಾವನ್ನಪ್ಪಿದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ``ಇಂದು ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭಯಾನಕ ಘಟನೆ ಎಲ್ಲರಿಗೂ ತೀವ್ರ ದುಃಖ ತಂದಿದೆ. ಸಂತ್ರಸ್ತ ಕುಟುಂಬಗಳ ದುಃಖವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇಡೀ ದೇಶ ಇಂದು ಅವರೊಂದಿಗೆ ನಿಂತಿದೆ. ಕಳೆದ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಏಜೆನ್ಸಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನಮ್ಮ ಏಜೆನ್ಸಿಗಳು ಈ ಪಿತೂರಿಯ ತಳಕ್ಕೆ ಹೋಗುತ್ತವೆ. ಇದರ ಹಿಂದಿನ ಸಂಚುಕೋರರನ್ನು ಬಿಡುವುದಿಲ್ಲ. ಇದಕ್ಕೆ ಕಾರಣರಾದವರೆಲ್ಲರನ್ನೂ ನ್ಯಾಯದ ಕಟಕಟೆಗೆ ತರಲಾಗುವುದು'' ಎಂದಿದ್ದಾರೆ.