ಕೆಜಿಎಫ್: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಇಲಾಖೆಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಪ್ರಯತ್ನದ ಜೊತೆಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ. ಬಾಗೇವಾಡಿ ಹೇಳಿದರು.ಪಟ್ಟಣದ ಬಳಿಯ ಕ್ಯಾಸಂಬಳ್ಳಿಯಲ್ಲಿ ಶನಿವಾರ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯಿತಿ ಸಿಬ್ಬಂದಿಯಷ್ಟೇ ಅಲ್ಲ, ಸಾರ್ವಜನಿಕರದ್ದೂ ಆಗಿದೆ. ಪಂಚಾಯಿತಿ ಸಿಬ್ಬಂದಿಯೊAದಿಗೆ ಗ್ರಾಮಸ್ಥರು ಕೈಜೋಡಿಸಿದರೆ ಹಲವು ಸ್ಥಳೀಯ ಸಮಸ್ಯೆಗಳನ್ನು ಆರಂಭದಲ್ಲೇ ಪರಿಹರಿಸಬಹುದು ಎಂದು ತಿಳಿಸಿದರು. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಕೇವಲ ಹಿಂಬರಹ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅರ್ಜಿದಾರರಿಗೆ ಸಮಾಧಾನಕರವಾದ ಉತ್ತರ ನೀಡುವ ಜತೆಗೆ, ಕಾನೂನು ಮತ್ತು ನಿಯಮಗಳ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಶೀಘ್ರವಾಗಿ ಕೆಲಸ ಮಾಡಿಕೊಡಬೇಕು. ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಬದಲು ಸಂಬAಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಮೂಲಕ ದೊರೆಯುವ ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಗ್ರಾಮೀಣ ಜನರಿಗೆ ಸೂಕ್ತ ಮಾಹಿತಿ ನೀಡಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ಗ್ರಾಮಗಳಲ್ಲಿ ಸ್ವಚ್ಛತಾ ಸೇವಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಪಂಚಾಯಿತಿಗಳ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪಂಚಾಯಿತಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಯಾವುದೇ ಸಮಯದಲ್ಲೂ ದಿಢೀರ್ ಭೇಟಿ ನೀಡಲಾಗುವುದು ಎಂದು ಎಚ್ಚರಿಸಿದರು.ಪೊಲೀಸ್ ಇಲಾಖೆಗೆ ನೇರವಾಗಿ ದೂರು ನೀಡಬಹುದು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ಪೊಲೀಸ್ ಇಲಾಖೆಗೆ ಸಂಬAಧಿಸಿದ ಯಾವುದೇ ಸಮಸ್ಯೆ ಅಥವಾ ದೂರುಗಳನ್ನು ಸಾರ್ವಜನಿಕರು ಯಾವುದೇ ಸಮಯದಲ್ಲೂ ಸಲ್ಲಿಸಬಹುದು.
ಕೆಳಹಂತದ ಅಧಿಕಾರಿಗಳು ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.ಶಾಲಾ ಕಟ್ಟಡ, ಜಾಗದ ಸಮಸ್ಯೆ ಪ್ರಸ್ತಾಪ: ಕ್ಯಾಸಂಬಳ್ಳಿ ಸರ್ಕಾರಿ ಶಾಲೆಗೆ ಜಾಗ ಮಂಜೂರಾಗಿದ್ದರೂ ಇದುವರೆಗೆ ಕಟ್ಟಡ ನಿರ್ಮಾಣವಾಗಿಲ್ಲ ಎಂಬ ಸಮಸ್ಯೆಯನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು. ಸುಮಾರು ನಾಲ್ಕು ಎಕರೆ ಜಾಗ ವಿವಾದಕ್ಕೆ ಒಳಗಾಗಿದ್ದು, ಅದರ ಸರ್ವೆ ನಡೆಸಿ ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವಂತೆ ಮನವಿ ಮಾಡಿದರು.ಈಗಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಕಿರಿಯ ಕಾಲೇಜು ಕೂಡ ಆರಂಭವಾಗಿರುವುದರಿAದ ಕಟ್ಟಡದ ಕೊರತೆ ಎದುರಾಗಿದೆ. ನೂರಾರು ವಿದ್ಯಾರ್ಥಿಗಳು ಇಕ್ಕಟ್ಟಿನ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹೆಚ್ಚುವರಿ ಕಟ್ಟಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ರಾಮಾಪುರ ರಸ್ತೆ ಅಪಘಾತಗಳ ಬಗ್ಗೆ ಆತಂಕ: ರಾಮಾಪುರ ಭಾಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಕಳೆದ ವಾರ ನಡೆದ ಬಸ್ ಅಪಘಾತದಲ್ಲಿಯೂ ಹಲವರು ಗಾಯಗೊಂಡಿರುವ ವಿಷಯವನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.ಅಪಘಾತ ವಲಯ ಹಾಗೂ ಅಪಾಯಕಾರಿ ತಿರುವುಗಳಿರುವ ಸ್ಥಳಗಳಲ್ಲಿ ರಸ್ತೆ ವಿಸ್ತರಣೆ, ಅಗತ್ಯ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.109 ಅರ್ಜಿಗಳ ಸ್ವೀಕಾಡಿ: ಪ್ರಜಾಸೇವೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 109 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 59 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ ಎಂದು ತಹಶೀಲ್ದಾರ್ ಗಾಯತ್ರಿ ಮಾಹಿತಿ ನೀಡಿದರು.ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 80 ಅರ್ಜಿಗಳು, ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 18 ಅರ್ಜಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಬಹುತೇಕ ಅರ್ಜಿಗಳು ಪಿಂಚಣಿ ಸೇರಿದಂತೆ ಸಾರ್ವಜನಿಕರಿಗೆ ನೇರವಾಗಿ ಸಂಬAಧಿಸಿದ ಸೌಲಭ್ಯಗಳ ಕುರಿತು ಬಂದಿದ್ದವು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ. ಬಾಗೇವಾಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ವೇದಿಕೆ: ಕ್ಯಾಸಂಬಳ್ಳಿಯಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮವು ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳ ಮುಂದಿಡಲು ಅವಕಾಶ ಕಲ್ಪಿಸಿದ ವೇದಿಕೆಯಾಗಿದೆ. ವಿಶೇಷವಾಗಿ 109 ಅರ್ಜಿಗಳ ಸ್ವೀಕಾರ ಮತ್ತು 59 ಅರ್ಜಿಗಳ ಸ್ಥಳೀಯ ಇತ್ಯರ್ಥವು ಇಂತಹ ಕಾರ್ಯಕ್ರಮಗಳ ಮೂಲಕ ತ್ವರಿತ ಸೇವೆ ನೀಡುವ ಪ್ರಯತ್ನವನ್ನು ಮಾಡಿದೆ. ಆದರೆ, ಕೇವಲ ಅರ್ಜಿಗಳನ್ನು ಸ್ವೀಕರಿಸುವುದಕ್ಕಿಂತ ಉಳಿದ ಅರ್ಜಿಗಳ ವಿಲೇವಾರಿ, ಕೈಗೊಂಡ ಕ್ರಮಗಳ ಮೇಲ್ವಿಚಾರಣೆ ಮತ್ತು ಅರ್ಜಿದಾರರಿಗೆ ಅಂತಿಮ ಪರಿಹಾರ ತಲುಪಿದೆಯೇ ಎಂಬುದನ್ನು ಪರಿಶೀಲಿಸುವುದು ಕಾರ್ಯಕ್ರಮದ ಯಶಸ್ಸಿನ ಪ್ರಮುಖ ಅಂಶವಾಗಲಿದೆ. ಶಾಲಾ ಕಟ್ಟಡದ ಕೊರತೆ, ಸರ್ಕಾರಿ ಜಾಗದ ವಿವಾದ, ರಸ್ತೆ ಅಪಘಾತಗಳ ಅಪಾಯ, ಸ್ವಚ್ಛತೆ, ಕುಡಿಯುವ ನೀರು, ಪಿಂಚಣಿ ಮತ್ತು ತೆರಿಗೆ ಸಂಗ್ರಹದAತಹ ವಿಷಯಗಳು ಗ್ರಾಮಾಭಿವೃದ್ಧಿಗೆ ಸಂಬAಧಿಸಿದ ಮೂಲಭೂತ ಅಂಶಗಳಾಗಿವೆ. ಇವುಗಳಿಗೆ ಇಲಾಖೆಗಳ ನಡುವೆ ಸಮನ್ವಯದೊಂದಿಗೆ ನಿರಂತರ ಕ್ರಮ ಕೈಗೊಂಡರೆ ಕ್ಯಾಸಂಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗಲಿದೆ. ತಹಸಿಲ್ದಾರ್ ಗಾಯಿತ್ರಿ, ಇಓ ವೆಂಕಟೇಶಪ್ಪ, ಬಿಇಓ ನಾರಾಯಣಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ರಾಜಶೇಖರ್, ಸಿಡಿಪಿಒ ರಾಜೇಶ್, ಪಶು ವೈದ್ಯಾಧಿಕಾರಿ ತ್ರೀಮೂರ್ತಿ ನಾಯ್ಕ್, ಕಂದಾಯ ಅಧಿಕಾರಿ ಅಜಯ್, ಉಪ ತಹಶೀಲ್ದಾರ್ ಜಯರಾಮ್, ಜನಾರ್ದನ ಸಿಂಗ್, ಪಿಡಿಒ ರಷ್ಮಿ, ಮಂಜುನಾಥ್ , ವೈಶಾಲಿ ಸಾಗರ್, ಸತ್ಯವತಿ, ಪಿಎಸ್‌ಐ ಸಂಗಮೇಶ್ ಉಪಸ್ಥಿತರಿದ್ದರು