ಜಯರಾಮ್ ದೇವಸಮುದ್ರ ನಿರ್ಮಾಣದ ಪಿರಿಯಾಡಿಕ್ ಡ್ರಾಮ ಕಥಾನಕಕ್ಕೆ ಪುನೀತ್ ರುದ್ರನಾಗ್ ನಿರ್ದೇಶನ
“ನಿದ್ರಾದೇವಿ ನೆಕ್ಸ್ಟ್ ಡೋರ್” ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ ಜಯರಾಮ್ ದೇವಸಮುದ್ರ ಅವರು ತಮ್ಮ ಸುರಮ್ ಮೂವೀಸ್ ಲಾಂಛನದಲ್ಲಿ “ಎಲ್ ಎಸ್ ಡಿ” ಹಾಗೂ “ನೀ ನಂಗೆ ಅಲ್ಲವಾ” ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಚಿತ್ರಗಳು ಸಹ ತೆರೆಗೆ ಬರಲು ಸಿದ್ದವಾಗಿದೆ. ಪ್ರಸ್ತುತ ಜಯರಾಮ್ ದೇವಸಮುದ್ರ ಅವರು, ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿ ನಟಿಸುತ್ತಿರುವ ಅದ್ದೂರಿ ತಾರಾಬಳಗದ, ಅಪಾರ ವೆಚ್ಚದ “ಉಗ್ರಾಯುಧಮ್” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪುನೀತ್ ರುದ್ರನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.700 ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನ ರಾಕ್ಲೆöÊನ್ ಸ್ಟುಡಿಯೋದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕಲಾ ನಿರ್ದೇಶಕ ಅಮರ್ ಅದ್ದೂರಿ ಸೆಟ್ ನಿರ್ಮಾಣ ಮಾಡಿದ್ದಾರೆ. ಇದೊಂದು ಚಾರಿತ್ರಿಕ ಚಿತ್ರವಾಗಿರುವುದರಿಂದ ಹೆಚ್ಚಿನ ಚಿತ್ರೀಕರಣ ಹೊರಾಂಗಣದಲ್ಲೆ ನಡೆಯುತ್ತದೆ. ಪ್ರಸ್ತುತ ಎಲ್ಲಾ ಕಡೆ ಮಳೆಯಾಗುತ್ತಿರುವುದರಿಂದ ಸದ್ಯ ಬೆಂಗಳೂರಿನಲ್ಲಿ ಒಳಾಂಗಣದ ಚಿತ್ರೀಕರಣ ಮಾಡಲಾಗುತ್ತಿದೆ. ಮಳೆಗಾಲದ ನಂತರ ಚಿತ್ರತಂಡ ತೀರ್ಥಹಳ್ಳಿಗೆ ಪಯಣಿಸಲಿದೆ. ಬೆಂಗಳೂರಿನ ಚಿತ್ರೀಕರಣದಲ್ಲಿ ಶ್ರೀಮುರಳಿ ಅವರು ಪಾಲ್ಗೊಂಡಿದ್ದಾರೆ. 400ಕ್ಕೂ ಹೆಚ್ಚು ಸಹ ಕಲಾವಿದರ ಉಪಸ್ಥಿತಿಯಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ನಿರ್ದೇಶನದಲ್ಲೇ ಪುನೀತ್ ರುದ್ರನಾಗ್ ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಮಂಜು ಅಥರ್ವ ಕಥೆ, ಚಿತ್ರಕಥೆ ರಚನೆಯಲ್ಲಿ ನಿರ್ದೇಶಕರಿಗೆ ಸಾಥ್ ನೀಡಿದ್ದಾರೆ. ಸಂಕೇತ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮಾಡಿರದ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಕುರಿತು ಮಾಹಿತಿ ಸದ್ಯದಲ್ಲೇ ತಿಳಿಯಲಿದೆ.