ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋಗಿದ್ದ ರೈತರ ಬಗ್ಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅಲ್ಲಿದ್ದವರು ರೈತರಲ್ಲ ದಲ್ಲಾಳಿಗಳು ಎಂದಿದ್ದಾರೆ. ಅವರ ಮುಖಗಳನ್ನು ನೋಡಿದ್ದೀರಾ ಎಂದು ಹೀಯಾಳಿಸಿದ್ದಾರೆ ಎಂದು ರೈತ ಮುಖಂಡ ಹೊಸೂರು ರಾಜಣ್ಣ ಆಕ್ರೋಶ ಹೊರಹಾಕಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಿಸಿಎಂ ಅವರ ಬಳಿ ಚರ್ಚಿಸಲು ಹೋದವರೆಲ್ಲರ ಫೋಟೋಗಳು, ಹೆಸರುಗಳು ನಮ್ಮ ಬಳಿ ಇದೆ. ನಿಖಿಲ್ ಅವರು ನಮ್ಮ ಹಳ್ಳಿಗೆ ಬರಲಿ ಎಲ್ಲರ ಜಮೀನು, ಪಹಣಿ ತೋರಿಸುತ್ತೇವೆ, ತದನಂತರ ನಾವೆಲ್ಲ ರೈತರೋ, ದಲ್ಲಾಳಿಗಳೋ ಎಂಬುದನ್ನು ತಿಳಿದುಕೊಳ್ಳಲಿ ಎಂದು ಸವಾಲು ಹಾಕಿದರು. ಬಿಡದಿ ಹೋಬಳಿಯಲ್ಲಿ ಉದ್ದೇಶಿತ ಎಐ ಸಿಟಿ ಬಗ್ಗೆ ನಿಖಿಲ್ ಮಾತನಾಡಿದ್ದಾರೆ, 10 ಕುಂಟೆ, 15 ಕುಂಟೆ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. 2006-07ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಬಿಡದಿ ಟೌನ್ಶಿಪ್ ನಿರ್ಮಿಸಲು ಪ್ರಸ್ತಾಪವಾಗಿತ್ತು. ಆಗ ಈ ರೈತರು ಕಾಣಿಸಲಿಲ್ಲವೇ, ದನ, ಕುರಿ, ಗೊಬ್ಬರ, ಕೊಟ್ಟಿಗೆ ಕಾಣಿಸಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಬಿಡದಿ ಟೌನ್ಶಿಪ್ ಯೋಜನೆ ಜಾರಿಗೆ ತನ್ನಿ ಅಂತ ಈ ಭಾಗದ ಜನ ಯಾರು ಕೇಳಿರಲಿಲ್ಲ. ಈ ವಿಚಾರದಲ್ಲಿ ಪ್ರತಿಭಟನೆ ನಂತರ ಕುಮಾರಸ್ವಾಮಿಯವರು ರೈತರನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದರು. ಅನೇಕ ಭರವಸೆಗಳನ್ನು ಕೊಟ್ಟ ನಂತರ ರೈತರು ಯೋಜನೆಗೆ ಒಪ್ಪಿಗೆ ಸೂಚಿಸಿ ಬಂದಿದ್ದರು. ಅದಾದ ನಂತರ ಡಿಎಲ್ಎಫ್ ಸಂಸ್ಥೆಗೆ ಗುತ್ತಿಗೆ ಕೊಟ್ಟರು, 400 ಕೋಟಿ ರೂ ಕೊಟ್ಟರು. ಆದರೆ ಕ್ಯಾಬಿನೆಟ್ ಸಭೆ ನಡೆಸದೆ ತೆಗೆದುಕೊಂಡ ತೀರ್ಮಾನವಿದು. ದಲ್ಲಾಳಿ ವ್ಯಾಪಾರ ಮಾಡಿದ್ದು ಯಾರು ಎಂದು ನಿಖಿಲ್ ಅವರನ್ನು ರಾಜಣ್ಣ ಪ್ರಶ್ನಿಸಿದರು. ಬಿಡದಿ ಎಐ ಸಿಟಿ ಬಗ್ಗೆ ದೇವೇಗೌಡರಿಗೆ ಸುಳ್ಳು ಮಾಹಿತಿ ಕೊಟ್ಟೀದ್ದೀರಿ ಎಂದು ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡ ರಾಜಣ್ಣ, ಇದು ಯಾರ ಪ್ರಾಜೆಕ್ಟ್ ಇದು ಅಂತ ದೊಡ್ಡಗೌಡರಿಗೆ ಹೇಳಿ, ಈ ಪ್ರಾಜೆಕ್ಟ್ ನಾವು ಕೇಳಿದ್ದೆವಾ? ನೀವು ಹುಟ್ಟು ಹಾಕಿದ ಪ್ರಾಜೆಕ್ಟ್ ಇದು, ಆದರೂ ಈಗ ರಾಜಕೀಯಕ್ಕಾಗಿ ರೈತರ ನಡುವೆಯೇ ಕಿತಾಪತಿ ಸೃಷ್ಟಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ತಾವು ಕೈಬಿಟ್ಟಿರುವುದಾಗಿ ಸುಳ್ಳು ಹೇಳಿದ್ದೀರಿ. 2019ರಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯನ್ನು ರದ್ದು ಮಾಡಬಹುದಿತ್ತು. ಆದರೆ ಮಾಡಲಿಲ್ಲ, ಈಗ ಕೈಬಿಟ್ಟಿದ್ದೆ ಅಂತು ಸುಳ್ಲು ಹೇಳುವುದು ಸರಿಯಲ್ಲ ಎಂದರು.ರೈತರನ್ನು ದಲ್ಲಾಳಿಗಳು ಎಂದು ಹೇಳಿರುವುದಕ್ಕೆ ನಿಖಿಲ್ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ನಾವು ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಸಿದರು.ಈ ವೇಳೆ ಪ್ರಮುಖರಾದ ಸಿದ್ದರಾಜು, ಕೃಷ್ಣಮೂರ್ತಿ, ಮುನಿರಾಜು, ಎಚ್.ಎಂ.ನಾಗರಾಜು, ಶಿವರಾಂ, ಗುರುಸ್ವಾಮಿ, ಮಹೇಂದ್ರ, ಶಿವಕುಮಾರ್, ನರಸಿಂಹರಾಜು ಮುಂತಾದವರು ಹಾಜರಿದ್ದರು.
`ರೈತರನ್ನು ದಲ್ಲಾಳಿಗಳು ಎಂದು ಹೇಳಿರುವ ನಿಖಿಲ್ ಕುಮಾರಸ್ವಾಮಿ ಕ್ಷಮೆಯಾಚಿಸಬೇಕು’



