ಹೈದರಾಬಾದ್: ಹತ್ತನೇ ಪ್ರೊ ಕಬಡ್ಡಿ ಲೀಗ್ ಅಂತಿಮ ಘಟ್ಟ ತಲುಪಿದ್ದು, ಬುಧವಾರ ಹೈದರಾಬಾದ್ನಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಪುನೇರಿ ಪಲ್ಟಾನ್-ಪಾಟ್ನಾ ಪೈರೇಟ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್- ಹರ್ಯಾಣ ಸ್ಟೀಲರ್ ತಂಡಗಳು ಸೆಣಸಾಡಲಿವೆ.
ಇವುಗಳಲ್ಲಿ ಪುನೇರಿ ಮತ್ತು ಜೈಪುರ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ ತಂಡಗಳಾಗಿವೆ.ಸೋಮವಾರದ ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪಾಟ್ನಾ ಪೈರೇಟ್ಸ್ 37-35 ಅಂತರದ ರೋಚಕ ಜಯ ದಾಖಲಿಸಿತ್ತು. ಬಳಿಕ ಹರ್ಯಾಣ 42-25ರಿಂದ ಗುಜರಾತ್ ತಂಡವನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿತ್ತು.
ಲೀಗ್ ಹಂತದಲ್ಲಿ ಪುನೇರಿ 96 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿ ಸಿತ್ತು. ಪಾಟ್ನಾ 69 ಅಂಕಗಳೊಂದಿಗೆ 6ನೇ ಸ್ಥಾನ ಪಡೆದಿತ್ತು. ಆದರೆ ಪಿಕೆಎಲ್ ಇತಿಹಾಸ ಗಮನಿಸಿದರೆ ಪುನೇರಿಗಿಂತ ಪಾಟ್ನಾ ಬಲಿಷ್ಠ ತಂಡವಾಗಿ ಕಾಣಿಸುತ್ತದೆ. ಒಟ್ಟು 21 ಪಂದ್ಯಗಳಲ್ಲಿ ಪುನೇರಿ ಕೇವಲ 4 ಗೆಲುವು ದಾಖಲಿಸಿದರೆ, ಪಾಟ್ನಾ ಬರೋಬ್ಬರಿ 13 ಪಂದ್ಯಗಳಲ್ಲಿ ಜಯಶಾಲಿಯಾಗಿದೆ. 4 ಪಂದ್ಯಗಳು ಟೈ ಆಗಿವೆ.