ಬೆಂಗಳೂರು: ಬಿಜೆಪಿ ಪಕ್ಷ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ತನ್ನ ಸಂಘಟನೆಯನ್ನು ಬಲಪಡಿಸಿ ಅಧಿಕಾರಕ್ಕೆ ಬರಲು ಸಿದ್ಧತೆ ಆರಂಭಿಸಿದೆ. ಯಾವುದೇ ಸದ್ದುಗದ್ದಲವಿಲ್ಲದೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರಾಥಮಿಕ ಹಂತದ ಕಾರ್ಯದ ರೂಪುರೇಷೆಗಳನ್ನು ಸಿದ್ಧಪಡಿಸಲು ಮುಂದಾಗಿದೆ.ಈ ತಿಂಗಳ 23ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ವಾಗತಕ್ಕೆ ಯಾವುದೇ ರೀತಿಯ ಆಡಂಬರ ಹಾಗೂ ಸಂಭ್ರಮದ ಚಟುವಟಿಕೆಗಳನ್ನು ನಡೆಸದಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿದೆ. ಈ ತಿಂಗಳ 23ರ ರಾತ್ರಿ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಭೇಟಿ ನೀಡಲಿದ್ದಾರೆ. ಅವರ ಸ್ವಾಗತವನ್ನು ಅದ್ಧೂರಿಯಾಗಿ ಏರ್ಪಡಿಸಲು ಸಿದ್ಧತೆ ನಡೆಸಲಾಗಿತ್ತು. ಈಗ ಅದೆಲ್ಲದಕ್ಕೂ ಕಡಿತ ಮಾಡಿರುವ ರಾಷ್ಟ್ರೀಯ ಮುಖಂಡರು ಕೇವಲ ಬಿಜೆಪಿ ರಾಜ್ಯಾಧ್ಯಕ್ಷರು ಉಭಯ ಸದನಗಳ ವಿಪಕ್ಷ ನಾಯಕರು ಹಾಗೂ ಸಚೇತಕರು ಸೇರಿದಂತೆ ಕೇವಲ ಐದು ಜನರನ್ನು ಮಾತ್ರ ಸ್ವಾಗತ ಕೋರಲು ತೆರಳುವಂತೆ ಸೂಚಿಸಲಾಗಿದೆ.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೇರವಾಗಿ ಅವರ ವಾಸ್ತವ್ಯಕ್ಕೆ ಏರ್ಪಾಡು ಮಾಡಿರುವ ಸ್ಥಳಕ್ಕೆ ನೇರವಾಗಿ ಬರುವ ರಾಷ್ಟ್ರೀಯ ಅಧ್ಯಕ್ಷರು ತಂಗಲಿದ್ದಾರೆ. ಅಂದು ಬೆಳಿಗ್ಗೆ ಮೊದಲಿಗೆ ಮಲ್ಲೇಶ್ವರಂನಲ್ಲಿರುವ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಕ್ಷದ ಶಾಸಕರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ಸಭೆ ನಡೆಸಲಿದ್ದಾರೆ. ಅದಾದ ನಂತರ ಅವರು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ನಂತರ ನಗರದ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಿರುವ ಉತ್ತರ ಜಿಲ್ಲಾ ಬಿಜೆಪಿ ಘಟಕದ ಪ್ರಶಿಕ್ಷಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಂಜೆಯೇ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಬಿಜೆಪಿ ತನ್ನ ಕಾರ್ಯಕ್ರಮಗಳನ್ನು ಮಿತಬಳಕೆಯಿಂದಲೇ ನಡೆಸಲು ಮುಂದಾಗಿದೆ. ಇಂದು ಸಂಜೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಉಪಾಧ್ಯಕ್ಷ ಬೈಜಯಂತ್ ಪಂಡ ಅವರು ಆಗಮಿಸಲಿದ್ದಾರೆ. ನಾಳೆ ಪಕ್ಷದ ಪ್ರಮುಖ ನಾಯಕರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಆ ಸಭೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಸಂಬಂಧ ಸಲಹೆ ಅಭಿಪ್ರಾಯಗಳನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಮತ್ತೆ 24-25ರಂದು ರಾಜ್ಯಕ್ಕೆ ಕೇಂದ್ರ ಸಚಿವ ಭೂಪಯ್ಯ ಯಾದವ್ ಹಾಗೂ ಮತ್ತೋರ್ವ ರಾಷ್ಟ್ರೀಯ ಪ್ರಮುಖ ಟಿನ್ತುಂಗಾ ಅವರು ಭೇಟಿ ಮಾಡಿ ರಾಜ್ಯಾಧ್ಯಕ್ಷರ ಆಯ್ಕೆ ಸಂಬAಧ ಅಂತಿಮ ರೂಪು ರೇಷೆಗಳನ್ನು ಸಿದ್ದಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.



