ನಾಲ್ಕು ಮಂದಿ ವಿಭಿನ್ನ ಅನುಭವದ ಪ್ರತಿಭಾನ್ವಿತ ಆಟಗಾರರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸತ್ವಪರೀಕ್ಷೆಯಾಗಲಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಪ್ಯಾಟ್ ಕಮಿನ್ಸ್, ಯುವ ಬ್ಯಾಟರ್ ಶುಭಮನ್ ಗಿಲ್, ಆರಂಬ ಆಟಗಾರ ಋತುರಾಜ್ ಗಾಯಕವಾಡ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಹೊಸ ತಂಡಗಳಿಗೆ ನಾಯಕರಾಗಿದ್ದಾರೆ.
ಅವರು ಹೊಸ ಸವಾಲನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.ಶುಭಮನ್ ಗಿಲ್ (ಗುಜರಾತ್ ಟೈಟನ್ಸ್), ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಹಠಾತ್ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್ ಪಾಲಾಗಿದ್ದರಿಂದ ಶುಭಮನ್ ಗಿಲ್ ಅವರಿಗೆ ಗುಜರಾತ್ ಟೈಟನ್ಸ್ ನಾಯಕತ್ವ ಹೆಗಲೇರಿದೆ. ಕಳೆದ ವರ್ಷ ವಿರಾಟ್ ಕೊಹ್ಲಿ ಅವರನ್ನು ಹಿಂದೆಹಾಕಿ 890 ರನ್ ಗಳಿಸಿ ಆರೆಂಜ್ ಕ್ಯಾಪ್ ಧರಿಸಿದ್ದ ಗಿಲ್ ಅವರು ಈ ಬಾರಿ ನಾಯಕತ್ವದ ಹೆಚ್ಚುವರಿ ಹೊಣೆಯನ್ನು ತಮ್ಮ ಬ್ಯಾಟಿಂಗ್ ಮೇಲೆ ಪರಿಣಾಮ ಬೀರದಂತೆ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕರ.
ಹಿರಿಯ ಆಟಗಾರರಾದ ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹ, ರಷೀದ್ ಖಾನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಇನ್ನೊಂದು ಸವಾಲು. ಅದಕ್ಕಿಂತ ಹೆಚ್ಚಾಗಿ ಕಳೆದ ವರ್ಷದ ಯಶಸ್ವಿ ಬೌಲರ್ ಆಗಿ ಪರ್ಪಲ್ ಕ್ಯಾಪ್ ಧರಿಸಿದ್ದ ಮೊಹಮ್ಮದ್ ಶಮಿ ಅನುಪಸ್ಥಿತಿ, ಹಾರ್ದಿಕ್ ಪಾಂಡ್ಯ ಅವರಿಂದ ಆಗಿರುವ ನಿರ್ವಾತವನ್ನು ಸರಿದೂಗಿಸುವುದು ಬಲುದೊಡ್ಡ ಸವಾಲು.