ದೇವನಹಳ್ಳಿ:ಯುವ ಪೀಳಿಗೆಯನ್ನು ಗುರಿಯಾಗಿಸಿ ಡ್ರಗ್ ಮಾಫಿಯಾಗಳ ಜಾಲ ವ್ಯಾಪಕವಾಗಿ ಹರಡುತ್ತಿದ್ದು ಯುವ
ಸಮೂಹ ಮಾಯಾ ಜಾಲಕ್ಕೆ ಸಿಲುಕದೆ ಜಾಗೃತರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಹೇಳಿದರು.ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾದಕ ವಸ್ತುಗಳ ಬಳಕೆ, ದುಷ್ಪರಿಣಾಮ, ನಿಷೇಧ ಕುರಿತು ಹಾಸ್ಟೆಲ್ ವಾರ್ಡನ್ ಗಳಿಗೆ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಜಾಸ್ತಿ ಆಗಿದೆ. ಯುವ ಸಮೂಹ ಈ ದೇಶದ ಆಸ್ತಿ, ಅವರನ್ನು ಗುರಿಯಾಗಿಸಿ ಡ್ರಗ್ಸ್ ಪೆಡ್ಲರ್ ಗಳು ತಮ್ಮ ಮಾಯಾ ಜಾಲ ವ್ಯಾಪಕವಾಗಿ ಹರಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳೇ ಅವರ ಟಾರ್ಗೆಟ್. ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತವೆ, ಯಾರು, ಹೇಗೆ ಮಾರಾಟ ಮಾಡುತ್ತಾರೆ. ಅದು ಯುವ ಸಮೂಹಕ್ಕೆ ಹೇಗೆ ಸಿಗುತ್ತದೆ ಎಂಬುದು ನಿಗೂಡ. ಈ ಮಾಯಾ ಜಾಲದಲ್ಲಿ ಯುವ ಸಮೂಹ ಸಿಕ್ಕಿಕೊಳ್ಳಬಾರದು. ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಅದು ಆರೋಗ್ಯಕ್ಕೆ ಹಾನಿಕಾರಕ ಜೊತೆಗೆ ನೀವು, ನಿಮ್ಮ ಕುಟುಂಬ ಹಾಳಾಗುತ್ತದೆ. ಇದರ ಬಗ್ಗೆ ಜಾಗೃತರಾಗಿರಿ ಎಂದರು.
ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಅವರ ಪ್ರತಿದಿನದ ಚಲನವಲನ ಗಮನಿಸಬೇಕು, ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಲ್ಲಿ ವಿಚಾರಿಸಬೇಕು. ಹಾಸ್ಟೆಲ್, ಶಾಲಾ-ಕಾಲೇಜುಗಳಲ್ಲಿ ವಾರ್ಡನ್ಗಳು, ಶಿಕ್ಷಕರು, ಪ್ರಾಂಶುಪಾಲರು ವಿದ್ಯಾರ್ಥಿಗಳ ಚಲನವಲನ ಗಮನಿಸಿ ಮಾದಕ ವಸ್ತುಗಳ ವ್ಯಸನಿಗಳಾಗಂತೆ ಅವರನ್ನು ಜಾಗೃತಿಗೊಳಿಸಿ ಎಂದರು.ಮನೋರೋಗ ತಜ್ಞರಾದ ಡಾ. ಗಿರೀಶ್ ಕುಮಾರ್ ಮಾತನಾಡಿ ದೇಶದಲ್ಲಿ ಅಂದಾಜು 14 ಕೋಟಿ ಜನ ಮದ್ಯ ಸೇವನೆ ಮಾಡುತ್ತಾರೆ. ಮದ್ಯಪಾನ, ಧೂಮಪಾನ ಜೊತೆಗೆ ಮಾದಕ ವಸ್ತುಗಳ ಸೇವನೆ ದೇಶಾದ್ಯಂತ ಹರಡಿದೆ. ಗಾಂಜಾ, ಅಫೀಮು, ಹೆರಾಯಿನ್, ಬ್ರೌನ್ ಶುಗರ್, ಕೊಕೇನ್ ಮುಂತಾದ ಅನೇಕ ವಿಧದ ಮಾದಕ ವಸ್ತುಗಳಿವೆ. ಅವುಗಳ ಸೇವನೆ ಮನುಷ್ಯನನ್ನೇ ನಾಶ ಮಾಡುತ್ತದೆ. ಅನೇಕರು ಈ ವ್ಯಸನಕ್ಕೆ ಸಿಲುಕಿ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದರು.
ಮಾದಕ ವ್ಯಸನಿ ಹೇಗೆ ಆಗುತ್ತಾರೆ?
* ಕುತೂಹಲಕ್ಕಾಗಿ
* ಜೊತೆಯವರ ಒತ್ತಾಯ
* ಸಿನಿಮಾ ತಾರೆಯರ ಪ್ರಚಾರ
* ಮಾದರಿ-ಅನುಕರಣೆ
* ನಕಾರಾತ್ಮಕ ಭಾವನೆಗಳು.
* ಒಂಟಿತನ
* ತಾತ್ಕಾಲಿಕ ಖುಷಿ
* ಮಾನಸಿಕ ಖಿನ್ನತೆ.
“`~ಮಾದಕ ವ್ಯಸನದಿಂದಾಗುವ ದುಷ್ಪರಿಣಾಮ~“`
* ಪ್ರಮುಖ ಅಂಗಗಳಿಗೆ ಹಾನಿ
* ಅಪರಾಧ/ಕಾನೂನು ಬಾಹಿರ
* ಮಾನಸಿಕ ಖಿನ್ನತೆ
* ಕುಟುಂಬ ಸಮಸ್ಯೆ
* ಜೀವನ ನಾಶ
* ಆಯಸ್ಸು ಕಡಿಮೆ
*ಮಾದಕ ವ್ಯಸನದಿಂದ ಹೊರಬರುವುದು ಹೇಗೆ?*
* ಮನೋರೋಗ ತಜ್ಞರ ಭೇಟಿ.
* ಸಮೀಪದ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ.
* ಸ್ವಯಂ ಪ್ರೇರಿತ ದೃಢ ನಿರ್ಧಾರ ಕೈಗೊಳ್ಳುವುದು.
* ಉಚಿತ ಸಹಾಯವಾಣಿ ಸಂಖ್ಯೆ ಟೆಲಿ ಮನಸ್- 14416 ಗೆ ಕರೆ ಮಾಡಿ ಮುಕ್ತ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವುದು.
ಮಾದಕ ವಸ್ತುಗಳ ಮಾರಾಟ, ಬಳಕೆ ಸೇವನೆ ಇವೆಲ್ಲವೂ ಕೂಡ ಕಾನೂನು ಬಾಹಿರವಾಗಿದ್ದು, ಯಾವುದೇ ವ್ಯಕ್ತಿ ಇಂತಹ ಪ್ರಕರಣದಲ್ಲಿ ಸಿಲುಕಿದರೆ ಆರೋಪಿಗೆ ಜೈಲು ಶಿಕ್ಷೆ ಜೊತೆಗೆ, ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಕೂಡ ಮಾದಕ ವಸ್ತುಗಳ ಜಾಲ ಪತ್ತೆ ಆದಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರೇಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನಾಶ್, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಪಾಂಡುರAಗ ಸೇರಿದಂತೆ ತಾಲೂಕು ಸಹಾಯಕ ನಿರ್ದೇಶಕರು, ವಸತಿ ಶಾಲೆಗಳ ಪ್ರಾಂಶುಪಾಲರು, ವಾರ್ಡನ್ ಗಳು ಉಪಸ್ಥಿತರಿದ್ದರು.
ಮಾದಕ ವಸ್ತುಗಳ ಮಾಯಾ ಜಾಲ-ಯುವ ಪೀಳಿಗೆ ಜಾಗೃತರಾಗಿ: ಶಿವಕುಮಾರ್



