ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೆ ಮಳೆಗಾಲ ಹೆಚ್ಚಾಗುತ್ತಿದ್ದು, ಕರಾವಳಿ ಭಾಗದಲ್ಲಿ ಕಡಲ ಕೊರತೆಯಾಗದಂತೆ ಎಚ್ಚರವಹಿಸುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸ್ಪೀಕರ್ ಯು.ಟಿ ಖಾದರ್ ಅವರು ಸಲಹೆ ನೀಡಿದ್ದಾರೆ.
ನಗರದ ವಿಕಾಸಸೌಧದ ಮೂರನೇ ಮಹಡಿಯಲ್ಲಿ ನಡೆದ ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕೆ ಇಲಾಖೆಯ ಮೀನುಗಾರರ ಸಮಸ್ಯೆ ಕುರಿತು ಸಭೆಯಲ್ಲಿ ಚರ್ಚೆ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾದರೆ, ಕಡಲ ತೀರದ ಜನರು ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಅಧಿಕಾರಿಗಳು ಸ್ಥಳೀಯರಿಗೆ ಧೈರ್ಯ ತುಂಬುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸೋಮೇಶ್ವರದ ಕೆಲವು ಭಾಗದಲ್ಲಿ ಕಡಲ ಕೊರೆತ ಹೆಚ್ಚಾಗಿದ್ದು. ಅದನ್ನು ತಪ್ಪಿಸುವ ಸಲುವಾಗಿ ಸರ್ಕಾರವು ಹಲವು ಯೋಜನೆಗಳು ರೂಪಿಸಿ, ಈ ಹಿಂದೆ ಅನುದಾನವನ್ನು ಬಿಡುಗಡೆಗೊಳಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವನ್ನು ಮಾಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದಕ್ಕೆ ಶಾಶ್ವತ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದರು. ಅದಕ್ಕೆ ಸಚಿವರು ಸಹ ಒಪ್ಪಿಗೆ ನೀಡಿದರು.ಇನ್ನು ಇದೇ ವೇಳೆ ಸಾಗರ ಮಾಲಾ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುವಂತೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯಪುರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಮತ್ತು ಸ್ವೀಕರ್ ಯು.ಟಿ ಖಾದರ್ ಅವರಿಗೆ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್ ವೈದ್ಯರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸಹ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮಂಜುಳಾ, ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ. ಸಿ.ಸ್ವಾಮಿ ಹಾಗೂ ಚೀಫ್ ಇಂಜಿನಿಯರ್ ಪ್ರಮೀತ್ ಬಿ.ಎಸ್, ಎಂ.ವಿ. ಪ್ರಸಾದ್ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಇಂಜಿನಿಯರ್ ಗಳು ಇದ್ದರು.