ಬೆಂಗಳೂರು: ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ವಿಮಾನ ಹೊರಡುವುದಕ್ಕೂ ಮುನ್ನ ಕೆಲವೇ ಕ್ಷಣಗಳ ಮುನ್ನ ಹೇಳಿ ಆತಂಕ ಸೃಷ್ಟಿಸಿದ ಕಿಡಿಗೇಡಿಯನ್ನು ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.ಕಳೆದ ಜ.28 ರಂದು ಸಂಜೆ ಬಾಂಬ್ ಇದೆ ಎಂದು ವಿಮಾನ ಹೊರಡುವುದಕ್ಕೂ ಮುನ್ನ ಕೆಲವೇ ಕ್ಷಣಗಳ ಮುನ್ನ ಹೇಳಿ ಆತಂಕ ಸೃಷ್ಟಿಸಿದ ಆರೋಪಿಯನ್ನು ಖಾಸಗಿ ಕಂಪನಿ ಉದ್ಯೋಗಿ ಸಜು ಕೆ ಕುಮಾರನ್ ಎಂದು ಗುರುತಿಸಲಾಗಿದೆ.
ಕೇರಳದ ಕೊಚ್ಚಿಗೆ ತೆರಳಲು ಏರ್ ಇಂಡಿಯಾ ವಿಮಾನದಲ್ಲಿ ಕುಳಿತಿದ್ದಾಗ ಸಜು ಕುಮಾರ್ ವಿಕೃತಿ ಮೆರೆದಿದ್ದರು. ಇದರಿಂದಾಗಿ ಭದ್ರತಾ ಸಿಬ್ಬಂದಿ ಬೆಸ್ತು ಬೀಳುವಂತಾಗಿತ್ತು.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ತೆರಳುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿದ್ದ ಸಜು ಕುಮಾರ್ (48) ಇನ್ನೇನು ವಿಮಾನ ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದ.
ವಿಮಾನ ನಿಲ್ದಾಣ ಪೊಲೀಸರ ಪ್ರಕಾರ, ಈ ಘಟನೆಯು ಭಾನುವಾರ ಸಂಜೆ 5.25 ಕ್ಕೆ ಸಂಭವಿಸಿದೆ. ವಿಮಾನ ಸಂಖ್ಯೆ `I5 990′ ರ ನಿರ್ಗಮನಕ್ಕೆ ಕೇವಲ ಐದು ನಿಮಿಷಗಳ ಮೊದಲು ಆರೋಪಿಯು ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ. ಏರ್ಲೈನ್ ಸಿಬ್ಬಂದಿಗೆ ಬ್ಯಾಗ್ ಪರಿಶೀಲಿಸಲೂ ಅನುವು ಮಾಡಿಕೊಡಲಿಲ್ಲ. ಪರಿಣಾಮವಾಗಿ ತಕ್ಷಣವೇ ಆತನನ್ನು ವಿಮಾನದಿಂದ ಇಳಿಸಲಾಯಿತು. ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದರು.
ಆರೋಪಿ ವಿರುದ್ಧ ಎಫ್ಐಆರ್ ಬಳಿಕ ಆರೋಪಿಯನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಹೇಳಿಕೆಗಳಿಗೆ ಸಂಬಂಧಿಸಿದ್ದಾಗಿದ್ದು, ಆರೋಪ ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.