ತಿ.ನರಸೀಪುರ: ತ್ರಿಪದಿ ಕವಿ ಸರ್ವಜ್ಞ ಅವರು ರಚಿಸದ ವಚನಗಳೇ ಇಲ್ಲ. ಬದುಕಿನ ಮೌಲ್ಯಹಿಡಿದು ಪ್ರತಿಯೊಂದರಲ್ಲೂ ವಚನ ಹೇಳಿದ್ದಾರೆ ಎಂದು ತಾಲ್ಲೂಕು ದಂಡಾಧಿಕಾರಿ ಟಿ.ಜಿ.ಸುರೇಶಾಚಾರ್ ತಿಳಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲ್ಲೂಕು ಕುಲಾಲ ಗುಂಡ ಬ್ರಹ್ಮಾರ್ಯ ಕುಂಬಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 504 ನೇ ವರ್ಷದ ಸರ್ವಜ್ಞ ಜಯಂತಿ ಆಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸುರೇಶಾಚಾರ್ ಸರ್ವಜ್ಞರು ತ್ರಿಪದಿಗಳ ಸಾಹಿತ್ಯದ ಬ್ರಹ್ಮನೆಂದು ಕರೆಯುತ್ತಾರೆ.
ತಮ್ಮ ತ್ರಿಪದಿಗಳ ಸಾಹಿತ್ಯದ ಮೂಲಕ ಸಮಾಜದ ಅನಿಷ್ಟ ಪದ್ದತಿಗಳನ್ನು ಬದಲಾವಣೆ ಮಾಡುವುದಕ್ಕೆ ಶ್ರಮಿಸಿದ್ದಾರೆ. ಅವರ ಒಂದೊಂದು ತ್ರಿಪದಿಗಳು ಬದುಕಿನ ಮೌಲ್ಯವನ್ನು ಹೇಳುತ್ತಿವೆ. ಪ್ರತಿಯೊಂದು ಅಂಶಗಳು ಅವರ ವಚನದಲ್ಲಿ ಅಡಗಿವೆ. ಅವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು.
16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞ, ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ.ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಷಣ್ಮುಖಸ್ವಾಮಿ ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ವಚನಗಳಲ್ಲಿ ಬದುಕಿನ ಸತ್ಯದ ಜತೆಗೆ ಸಾಮಾಜಿಕ ಸಮಾನತೆಯ ಸಾರವಿದೆ ಆಧುನಿಕ ವೇಗದ ಜಗತ್ತಿನಲ್ಲಿ ಸರ್ವಜ್ಞರ ವಚನಗಳು ಆದರ್ಶವಾಗಿವೆ ಇಂದಿನ ಯಾಂತ್ರಿಕ ಬದುಕಿನಲ್ಲಿ ದೀರ್ಘಾವಧಿಯ ಸಾಹಿತ್ಯವನ್ನು ಓದಿ ಬದುಕನ್ನು ಬದಲಾಯಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ.
ಆದರೆ ಸರ್ವಜ್ಞ, ಬಸವಣ್ಣನಂತಹ ವಚನಕಾರರ ಸರಳ ವಚನಗಳಿಂದ ಬದುಕನ್ನು ತಿದ್ದಿಕೊಳ್ಳುವುದು ಸುಲಭದ ಮಾರ್ಗವಾಗಿದೆ. ಯಾವ ಸಾಹಿತ್ಯ ಸರಳವಾಗಿ, ಸಹಜವಾಗಿ ಜನ ಸಾಮಾನ್ಯರಿಗೆ ಅರ್ಥವಾಗುತ್ತದೋ ಅದು ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ ಎಂದರು.
ಈ ವೇಳೆ ತಾಲ್ಲೂಕು ಕುಂಬಾರರ ಸಂಘದ ಅಧ್ಯಕ್ಷ ಕಿರಗಸೂರು ರಮೇಶ್,ಉಪಾಧ್ಯಕ್ಷ ಕೇತಹಳ್ಳಿ ಆರ್.ಸಿದ್ದರಾಜು, ಕಾರ್ಯದರ್ಶಿ ಸೋಮನಾಥ ಪುರ ಮಹದೇವಸ್ವಾಮಿ,ಖಜಾಂಚಿ ಚಂದ್ರು ಮುಖಂಡರಾದ ಕೇತಹಳ್ಳಿ ರಾಜಣ್ಣ, ಮಹದೇವ.ಆಲಗೂಡು ಸಿದ್ದರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮುಖಂಡರು ಹಾಜರಿದ್ದರು.