ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಹೊಸ ಮುಖ್ಯಮಂತ್ರಿ ಪ್ರಮಾಣ ಸ್ವೀಕರಿಸುವ ದಿನಾಂಕದ ಬಗ್ಗೆ ಕುತೂಹಲ ಮೂಡಿಸಿದೆ.ಇದೀಗ ನೂತನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಇಂದು ಸಂಜೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ. ಈಗಾಗಲೇ ಹಾಲಿ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆಸುರೇಶ್ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರಕ್ಕೆ ಎರಡು ದಿನಾಂಕಗಳನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೂ. 1 ಅಥವಾ ಜೂ.5ರಂದು ಪ್ರಮಾಣವಚನಕ್ಕೆ ತಮಗೆ ಸೂಕ್ತ ಎಂದು ದಿನಾಂಕದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಂತರ ರಾಜ್ಯಪಾಲರ ಭೇಟಿಯಾಗುವುದು ವಾಡಿಕೆ. ಆದರೆ ಇಂದು ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೂ ಮುನ್ನವೇ ಡಿ.ಕೆ.ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿಯಾಗಿರುವುದು ವಿಶೇಷವಾಗಿದೆ. ರಾಜ್ಯಪಾಲರು ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಧ್ಯಾಹ್ನ 1ಗಂಟೆಗೆ ತೆರಳುತ್ತಿದ್ದಾರೆ. ಹೀಗಾಗಿ ನಾಯಕನ ಆಯ್ಕೆ ಅಧಿಕೃತವಾಗಿ ಆಯ್ಕೆಯಾದ ನಂತರ ರಾಜ್ಯಪಾಲರು ಕೇಂದ್ರ ಸ್ಥಾನದಲ್ಲಿ ಲಭ್ಯವಿರುವುದಿಲ್ಲ. ಆದ ಕಾರಣ ರಾಜ್ಯಪಾಲರ ಲಭ್ಯತೆ ನೋಡಿಕೊಂಡು ಅವರನ್ನು ಇಂದು ಬೆಳಿಗ್ಗೆ 10.30ಕ್ಕೆ ಲೋಕಭವನಕ್ಕೆ ತೆರಳಿ ಭೇಟಿ ಮಾಡಿದ ಶಿವಕಮಾರ್ ಅವರು ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅನೌಪಚಾರಿಕ ಮಾತುಕತೆ ಸಂದರ್ಭದಲ್ಲಿ ಪ್ರಮಾಣ ವಚನದ ದಿನಾಂಕದ ಬಗ್ಗೆ ಜ್ಯೋತಿಷಿಗಳ ಸಲಹೆಯಂತೆ ಶಿವಕುಮಾರ್ ಅವರು, ಮೂರು ದಿನಾಂಕಗಳ ಪೈಕಿ ಎರಡು ದಿನಾಂಕಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಪ್ರಮಾಣ ವಚನ ಸಂದರ್ಭದಲ್ಲಿ ಮುಖ್ಯಮಂತ್ರಿ ಒಬ್ಬರೇ ಪ್ರಮಾಣವಚನ ಸ್ವೀಕರಿಸಬೇಕೋ? ಅಥವಾ ನೂತನ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಬೇಕೋ ಎಂಬ ಜಿಜ್ಞಾಸೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ. ಇದಕ್ಕೆಲ್ಲಾ ಹೈಕಮಾಂಡ್ ನಾಯಕರೇ ತೆರೆ ಎಳೆಯಬೇಕಾಗಿದೆ. ಈಗಾಗಲೇ ಪ್ರಮಾಣವಚನಕ್ಕೆ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮೇಲೆ ಸ್ಥಳ ನಿಗದಿಪಡಿಸಿ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಸಮಾರಂಭವನ್ನು ಲೋಕಭವನದಲ್ಲಿ ನಡೆಸಬೇಕು ಎಂದು ಹಲವರು ಸಲಹೆ ಮಾಡುತ್ತಿದ್ದಾರೆ.ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಹಿ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರ ನಡೆಸಲು ಸಲಹೆ ಕೇಳಿ ಬಂದಿದ್ದು, ಸ್ಥಳದ ಬಗ್ಗೆಯೂ ಗೊಂದಲ ಮೂಡಿಸಿದೆ.
ಗರ್ನರ್-ಡಿಕೆ ಭೇಟಿ.



