ಕೋಲಾರ: ಮುಟ್ಟಿನ ಬಗ್ಗೆ ಇರುವ ಮೌನ ಮತ್ತು ಮೂಢನಂಭಿಕೆಗಳನ್ನು ತೊಡೆದುಹಾಕುವುದು, ಹಾಗೂ ಮಹಿಳೆಯರಿಗೆ ಸುರಕ್ಷಿತ ನೈರ್ಮಲ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಹರಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಟ್ಟಿನ ನೈರ್ಮಲ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದು. ಸುರಕ್ಷಿತ ಮತ್ತು ಕೈಗೆಟುಕುವ ಬೆಲೆಯ ಸ್ಯಾನಿಟರಿ ಪ್ಯಾಡ್ಗಳು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುವುದು. ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಸ್ವಚ್ಛವಾದ ಶೌಚಾಲಯ ಮತ್ತು ಖಾಸಗಿ ಸ್ಥಳಗಳನ್ನು ಒದಗಿಸುವುದು ಅತಿ ಮುಖ್ಯ ಎಂದರು.
ಮುಟ್ಟನ್ನು ಯಾವುದೇ ಕಳಂಕವಿಲ್ಲದೆ ಸ್ವೀಕರಿಸುವ ಸಮಾಜವನ್ನು ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದ ಅವರು, ಮಹಿಳೆಯರು, ಅದರಲ್ಲೂ ಪ್ರೌಢಶಾಲಾ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ, ಮಹಿಳೆಯರ ಆರೋಗ್ಯ ರಕ್ಷಣೆಗೂ ಒತ್ತು ನೀಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಋತುಚಕ್ರ ನೈರ್ಮಲ್ಯ ದಿನಾಚರಣೆ ಉದ್ದೇಶದ ಬಗ್ಗೆ ಮಾಹಿತಿ ನೀಡಿದ ಅವರು ಸ್ವಚ್ಚತೆಯಿಂದ ಉತ್ತಮ ಆರೋಗ್ಯ ಸಾಧ್ಯ ಎಂಬ ಸತ್ಯ ಅರಿಯಿರಿ, ಮುಟ್ಟಿನ ಸಂದರ್ಭದಲ್ಲಿ ಸ್ವಚ್ಚತೆಗೆ ವಹಿಸಬೇಕಾದ ಜಾಗೃತಿಯ ಕುರಿತು ಅರಿವು ಮೂಡಿಸಿದರು.
ಈ ದಿನ ನಿಮಿತ್ತ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯ, ನೈರ್ಮಲ್ಯ ಹಾಗೂ ಜಾಗೃತಿಯ ಮೇಲೆ ಕೇಂದ್ರೀಕರಿಸಿದ ಮಹತ್ವದ ಜಾಗತಿಕ ಅಭಿಯಾನ ಪ್ರಪಂಚದಾದ್ಯAತ ನಡೆಯುತ್ತಿದೆ ಎಂದ ಅವರು, ಇನ್ನೂ ಹಲವು ಪ್ರದೇಶಗಳಲ್ಲಿ ಮುಟ್ಟಿನ ಕುರಿತು ಅರಿವಿನ ಕೊರತೆಯಿರುವುದು ತಿಳಿಯುತ್ತದೆ. ಇದರಿಂದ ಮಹಿಳೆಯರ ಆರೋಗ್ಯ ಹಾಗೂ ಜೀವನದ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಆರೋಗ್ಯ ಅಧಿಕಾರಿಗಳು ಋತುಚಕ್ರ ನೈರ್ಮಲ್ಯಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಸರ್ಕಾರ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶುಚಿ ಪ್ಯಾಡ್ ನೀಡುವ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಋತು ಚಕ್ರದ ಸಂದರ್ಭದಲ್ಲಿ ಎದುರಾಗುವ ದೈಹಿಕ ಸಮಸ್ಯೆಗಳನ್ನು ಮನಗಂಡು ಸರ್ಕಾರ ಸರ್ಕಾರಿ ನೌಕರರಾಗಿರುವ ಮಹಿಳೆಯರಿಗೆ ತಿಂಗಳಿಗೊAದು ರಜೆ ಸೌಲಭ್ಯವನ್ನು ಒದಗಿಸಿದೆ ಎಂದು ತಿಳಿಸಿದ ಅವರು, ಗ್ರಾಮೀಣ ಭಾಗದಲ್ಲಿ ಇನ್ನೂ ಮುಟ್ಟಿನ ಕುರಿತು ಇರುವ ಮೂಢ ನಂಬಿಕೆ ಹೋಗಲಾಡಿಸುವ ಅಗತ್ಯವಿದೆ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂಬ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಹದಿಹರೆಯದ ಹುಡುಗಿಯರು, ಮಹಿಳೆಯರು, ಟ್ರಾನ್ಸೆ÷್ಜಂಡರ್ ಮತ್ತು ಬೈನರಿ ಅಲ್ಲದ ವ್ಯಕ್ತಿಗಳು ತಮ್ಮ ಮುಟ್ಟನ್ನು ಸುರಕ್ಷಿತವಾಗಿ ಮತ್ತು ಘನತೆಯಿಂದ ನಿರ್ವಹಿಸಲು ಆತ್ಮವಿಶ್ವಾಸ, ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಈ ದಿನಾಚರಣೆ ನಡೆಸುತ್ತಿದ್ದು, ನೀವು ಜಾಗೃತರಾಗಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾರಾಜು ಮಾತನಾಡಿ, ಋತುಚಕ್ರ ನೈರ್ಮಲ್ಯ, ಸಾನಿಟರಿ ನ್ಯಾಪ್ಕಿನ್ ಗಳ ಬಳಕೆ, ವಿಲೇವಾರಿ,ಪೌಷ್ಟಿಕ ಆಹಾರ ಸೇವನೆ ಆರೋಗ್ಯ ಶಿಕ್ಷಣದ ಅರಿವು ನೀಡಿದ ಅವರು, ಶಾಲಾ ಹಾಜರಾತಿ ಮತ್ತು ಸಮುದಾಯ ಜೀವನದಲ್ಲಿ ಭಾಗವಹಿಸುವಿಕೆಯ ಮೇಲೆ ಮುಟ್ಟು ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಮಕ್ಕಳಲ್ಲಿ ಹೆಚ್ಚುವರಿ ಒತ್ತಡ ಮತ್ತು ಆತಂಕವನ್ನು ಉಂಟುಮಾಡುತ್ತದೆ ಈ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಋತುಚಕ್ರದ ಕುರಿತು ಸಮಾಜದಲ್ಲಿರುವ ಮೌನ, ತಪುö್ಪ ಕಲ್ಪನೆಗಳನ್ನು ದೂರ ಮಾಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಸುರಕ್ಷಿತ ಹಾಗೂ ನೈರ್ಮಲ್ಯದ ಉತ್ಪನ್ನಗಳಾದ ಸ್ಯಾನಿಟರಿ ಪ್ಯಾಡ್ಗಳು, ಮೆನ್ಸ್ಟುçವಲ್ ಕಪ್ಗಳ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸೌಮ್ಯ ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಹಾಗೂ ಸ್ವಚ್ಚತೆಯ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಪ್ರೌಢಶಾಲಾ ಮುಖ್ಯಶಿಕ್ಷಕ ಜಯರಾಮ್ ಶಿಕ್ಷಕರಾದ ರಜನಿ, ಎಸ್.ರಮಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರಿದ್ದರು.
`ಮಹಿಳೆಯರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ’



